Advertisement

ಉ.ಪ್ರ.ದಿಂದ ಸಮಾಜವಾದಿ ಧೂಳೀಪಟ; ಬಿಜೆಪಿಗೆ ಮತ್ತೆ ಅಧಿಕಾರ ಸಿಗುವ ವಿಶ್ವಾಸ

12:52 AM Feb 16, 2022 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಧೂಳೀಪಟವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭವಿಷ್ಯ ನುಡಿದಿದ್ದಾರೆ.

Advertisement

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಆಯೋಜಿ­ಸಲಾಗಿದ್ದ ಬಿಜೆಪಿಯ ಬೃಹತ್‌ ಚುನಾವಣ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಉತ್ತರ ಪ್ರದೇಶದಲ್ಲಿ ಈಗಾಗಲೇ ಎರಡು ಸುತ್ತಿನ ಮತದಾನ ನಡೆದಿದೆ. ಆ ಎರಡು ಸುತ್ತುಗಳಲ್ಲಿ ಸಮಾಜವಾದಿ ಪಕ್ಷ ನಿರ್ಮೂಲನೆಗೊಂಡಿದೆ.

ಇದೇ ಚುನಾವಣೆಯಲ್ಲಿ ಆ ಪಕ್ಷ ಧೂಳೀಪಟ­ವಾಗುತ್ತದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದ ಜನ ಈಗಾಗಲೇ ಬಿಜೆಪಿಗೆ ಮಣೆ ಹಾಕಿದ್ದಾರೆ’ ಎಂದು ಹೇಳಿದ್ದಾರೆ. ಕಾನ್ಪುರದಲ್ಲಿಯೂ ಚುನಾ ವಣ ಪ್ರಚಾರ ನಡೆಸಿದ ಅಮಿತ್‌ ಶಾ, ಅಲ್ಲಿ ರೋಡ್‌ಶೋ ನಡೆಸಿದರು.

2ನೇ ಹಂತದಲ್ಲಿ ಶೇ. 64.42ರಷ್ಟು ಮತದಾನ: ಫೆ. 14ರಂದು ಉತ್ತರ ಪ್ರದೇಶದಲ್ಲಿ ನಡೆದಿರುವ 2ನೇ ಹಂತದ ಮತದಾನದಲ್ಲಿ ಶೇ. 64.42 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಕೇಂದ್ರ ಚುನಾವಣ ಆಯೋಗ ತಿಳಿಸಿದೆ.

ಸಹರನ್‌ಪುರದಲ್ಲಿ ಶೇ. 71.13, ಬಿಜ್ನೋರ್‌ನಲ್ಲಿ ಶೇ. 65.91, ಮೊರಾದಾಬಾದ್‌ನಲ್ಲಿ ಶೇ. 67.26, ಸಂಭಾಲ್‌ನಲ್ಲಿ ಶೇ. 62.87, ರಾಂಪುರದಲ್ಲಿ ಶೇ. 64.26, ಅನ್ರೋಹಾ­ದಲ್ಲಿ ಶೇ. 71.98, ಬದೌನ್‌ನಲ್ಲಿ ಶೇ.59.24, ಬರೇಲಿಯಲ್ಲಿ ಶೇ. 61.67, ಶಹಜಹಾನ್‌ಪುರದಲ್ಲಿ ಶೇ. 59.34ರಷ್ಟು ಮತದಾನ ನಡೆದಿದೆ ಎಂದು ಆಯೋಗ ತಿಳಿಸಿದೆ.

Advertisement

ಉಚಿತ ಪಡಿತರ, 11 ಲಕ್ಷ ಉದ್ಯೋಗ: ಎಸ್‌ಪಿ ಆಶ್ವಾಸನೆ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಆಡಳಿತಕ್ಕೆ ಬಂದರೆ, ಬಡವರಿಗೆ ಮುಂದಿನ ಐದು ವರ್ಷಗಳವರೆಗೆ ಉಚಿತ ದಿನಸಿ ನೀಡ ಲಾಗುತ್ತದೆ. ಜತೆಗೆ ಪ್ರತೀ ತಿಂಗಳು 1 ಕೆ.ಜಿ. ತುಪ್ಪವನ್ನೂ ಉಚಿತವಾಗಿ ಕೊಡಲಾಗುವುದು ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಆಶ್ವಾಸನೆ ನೀಡಿದ್ದಾರೆ.

ಫ‌ತೇಪುರ್‌ನಲ್ಲಿ ನಡೆದ ತಮ್ಮ ಪಕ್ಷದ ಚುನಾವಣ ಪ್ರಚಾರದ ವೇಳೆ ಮಾತನಾಡಿದ ಅವರು, “ನಮ್ಮ ಪಕ್ಷ ಈ ಹಿಂದೆ ಆಡಳಿತದಲ್ಲಿ­ದ್ದಾಗಲೂ ಉಚಿತ ದಿನಸಿ ಕೊಟ್ಟಿದೆ. ಈ ಬಾರಿ ದಿನಸಿ ಜತೆ ತುಪ್ಪ, ಹಾಗೂ ಸಾಸಿವೆ ಎಣ್ಣೆಯನ್ನೂ ಕೊಡಲಿದ್ದೇವೆ. ವರ್ಷಕ್ಕೆ 2 ಸಿಲಿಂಡರ್‌ನ್ನೂ ಉಚಿತವಾಗಿಸಲಿದ್ದೇವೆ’ ಎಂದಿದ್ದಾರೆ. ಅಲ್ಲದೆ ಬಿಜೆಪಿ ಸರಕಾರ ಚುನಾವಣೆ ಮುಗಿಯುವವರೆಗೆ ಮಾತ್ರ ಉಚಿತ ದಿನಸಿ ಕೊಡುತ್ತದೆ ಎಂದೂ ಅವರು ದೂರಿದ್ದಾರೆ.

11 ಲಕ್ಷ ಉದ್ಯೋಗ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ 11 ಲಕ್ಷ ಮಂದಿಗೆ ಸರಕಾರಿ ಉದ್ಯೋಗ ನೀಡುವ ಮತ್ತೂಂದು ಆಶ್ವಾಸನೆ­ಯನ್ನು ಪಕ್ಷದ ನಾಯಕ ಅಖಿಲೇಶ್ ಯಾದವ್ ನೀಡಿದ್ದಾರೆ.

ಬಿಜೆಪಿಯಿಂದ ಮುಂದಿದ್ದೇವೆ: ಉತ್ತರ ಪ್ರದೇಶದಲ್ಲಿ ಈಗ ಮುಕ್ತಾಯವಾಗಿರುವ ಎರಡು ಸುತ್ತಿನ ಮತದಾನದಲ್ಲಿ ಸಮಾಜವಾದಿ ಪಕ್ಷವು, ಬಿಜೆಪಿಗಿಂತ ಮುನ್ನಡೆ ಸಾಧಿಸಿದೆ ಎಂದು ಅಖೀಲೇಶ್‌ ಯಾದವ್‌ ತಿಳಿಸಿದ್ದಾರೆ.

12 ಗಂಟೆಗೆ ಏಳುವವರಿಂದ ಪ್ರಯೋಜನವೇನು?
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ “ಮಧ್ಯಾಹ್ನ ಎದ್ದೇಳುವ ನಾಯಕ’ ಎಂದು ಯೋಗಿ ಆದಿತ್ಯನಾಥ್‌ ಛೇಡಿಸಿದ್ದಾರೆ. ಫಿರೋಜಾಬಾದ್‌ನಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಉತ್ತರ ಪ್ರದೇಶದ ಎರಡು ಹಂತದ ಮತದಾನ ಪೂರ್ಣಗೊಂಡ ಅನಂತರ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದು ಸ್ಪಷ್ಟವಾಗಿದೆ.

ರಾಜ್ಯದ ಜನತೆಗೆ ಬಿಜೆಪಿ ಮಾತ್ರ ಭದ್ರತೆ ಹಾಗೂ ಅಭಿವೃದ್ಧಿಯನ್ನು ಕಲ್ಪಿಸಬಲ್ಲದು. ಮಧ್ಯಾಹ್ನ 12 ಗಂಟೆಗೆ ಏಳುವ ನಾಯಕರಿಂದ ನಾವು ಏನನ್ನು ನಿರೀಕ್ಷಿಸಬಹುದು’ ಎಂದು ಕೇಳಿದರು. ಅಖಿಲೇಶ್ ಯಾದವ್‌ ಅವರು ಲಸಿಕೆಯನ್ನು ಪಡೆದಿಲ್ಲ. “ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಅನೇಕ ಜನರು ಕೊರೊನಾಕ್ಕೆ ತುತ್ತಾಗಲಿ ಎಂದು ಹಾರೈಸುತ್ತಿದ್ದರು. ಅವರು ಕೇವಲ ತಮ್ಮ ಕುಟುಂಬದ ಅಭಿವೃದ್ಧಿಯನ್ನು ಮಾತ್ರ ಪರಿಗಣಿಸುತ್ತಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ
ಪಂಜಾಬ್‌ನ ಲಾರ್ಲುವಿನಲ್ಲಿ ಆಯೋಜಿಸಲಾಗಿದ್ದ ಬೃಹತ್‌ ರ್‍ಯಾಲಿಯಲ್ಲಿ ಮಾತನಾಡಿದ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸಿನಲ್ಲಿ ಆಂತರಿಕ ಸಂಘರ್ಷವಿದೆ. ಅಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಆರೋಪ, ಪ್ರತ್ಯಾ­ರೋಪಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಸರಕಾರದ ಮುಖ್ಯಮಂತ್ರಿ ಕೈಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಮಾಡಲಾಗಿದೆ. ಅಂಥ ಮುಖ್ಯಮಂತ್ರಿಯಿಂದ ರಾಜ್ಯದ ಹೇಗೆ ತಾನೇ ಅಭಿವೃದ್ಧಿಯಾದೀತು ಎಂದು ಪ್ರಶ್ನಿಸಿದರು. ಯಾವುದೇ ಪಕ್ಷ, ಮೊದಲು ತಮ್ಮ ಕಾರ್ಯಕರ್ತರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಆದರೆ ಕಾಂಗ್ರೆಸ್‌ ಪಕ್ಷ ಪಂಜಾಬ್‌ನಲ್ಲಿರುವ ಲಿಕ್ಕರ್‌ ಮಾಫಿಯಾವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದೆ ಎಂದು ಅವರು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next