ಗಂಗಾವತಿ: ನಗರದ ಶಿವೆ ಟಾಕೀಸ್ ಬಳಿಯಿರುವ ಡಾ.ವಿಷ್ಣುವರ್ಧನ್ ವೃತ್ತದಲ್ಲಿ ಅವರ ಪುತ್ಥಳಿ ಸ್ಥಾಪನೆ ಮಾಡಲು ಶೀಘ್ರ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಸಭೆ ಕರೆದು ನಿರ್ಣಯ ಮಾಡಲಾಗುತ್ತದೆ ಎಂದು ಡಾ.ವಿಷ್ಣುವರ್ಧನ್ ಅಭಿಮಾನಿ ಹಾಗೂ ಬಿಜೆಪಿ ಮುಖಂಡ ವಡ್ರಟ್ಟಿ ವೀರಭದ್ರಪ್ಪ ನಾಯಕ ಹೇಳಿದರು.
ಅವರು ನಗರದ ಶಿವೆ ಟಾಕೀಸ್ ಹತ್ತಿರ ಇರುವ ವೃತ್ತಕ್ಕೆ ವಿಷ್ಣುವರ್ಧನ್ ಜಯಂತಿ ನಿಮಿತ್ತ ಡಾ.ವಿಷ್ಣುವರ್ಧನ್ ವೃತ್ತ ಎಂದು ನಾಮಕರಣ ಮಾಡಿದ ನಾಮಫಲಕದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ.ವಿಷ್ಣುವರ್ಧನ್ ಅವರು ಕನ್ನಡದ ಮೇರು ನಟರಾಗಿದ್ದರು. ಅವರು 200ಕ್ಕೂ ಹೆಚ್ಚು ಕನ್ನಡ ಸಿನೆಮಾಗಳು ಸೇರಿ ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದು ಅದ್ಭುತ ನಟರಾಗಿದ್ದರು. ಅವರಿಗೆ ಕೆಲವರು ಕಿರುಕುಳ ನೀಡಿದರೂ ಸಹಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಯಾವುದೇ ಗಲಾಟೆ ಮಾಡದಂತೆ ತಾಕೀತು ಮಾಡಿದ ಮಹಾನ್ ನಾಯಕ. ಅವರ ವೃತ್ತವನ್ನು ಮಾಡುವ ಮೂಲಕ ನಗರಸಭೆ ಹಾಗೂ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ಪುತ್ಥಳಿ ನಿರ್ಮಾಣ ಕಾರ್ಯ ಚುರುಕಾಗಲಿ ಎಂದರು.
ರಮೇಶ ನೇತ್ರಾ, ನೀಲಕಂಠಪ್ಪ, ಎಸ್.ಎಸ್.ಪಾಷಾ, ಕೆ.ನಿಂಗಜ್ಜ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಬೆ ಸದಸ್ಯ ಮೌಲಸಾಬ, ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಮಹಾಬಲೇಶ್ವರ, ರಂಗಪ್ಪ ನಾಯಕ, ನಾಗರಾಜ ಮೇದಾರ, ಎಸ್.ಎಸ್.ಪಾಷಾ, ಶರೀಫ, ಮಹಮದ್, ಶಿವಪ್ಪ ನವಣೆಕ್ಕಿ, ಮಲ್ಲಿಕಾರ್ಜುನ ಗೋಟೂರು, ಹನುಮಂತಪ್ಪ ಇಂದ್ರಾನಗರ, ಎಂ.ಶರಣಪ್ಪ, ಕಲಾವಿದ ಅಮರೇಶಪ್ಪ ಇಂಗಳಗಿ, ಪಂಪಾಪತಿ ಸೇರಿ ಅನೇಕರಿದ್ದರು.