Advertisement

ಸುಧಾರಿತ ಕೃಷಿ ಯಂತ್ರೋಪಕರಣಗಳ ಅನಾವರಣ

09:50 AM Aug 29, 2017 | |

ಬೆಂಗಳೂರು: ಕೃಷಿ ಸಂಬಂಧಿತ ಜಾನುವಾರುಗಳಿಗೂ ಜಿಪಿಎಸ್‌ ಟ್ರ್ಯಾಕಿಂಗ್‌ ವ್ಯವಸ್ಥೆ. ಹುಲ್ಲುಹಾಸಿನ ಕಟಾವಿಗೆ ರೋಬೋಟ್‌ ಯಂತ್ರ ಬಳಕೆ. ಮೊಬೈಲ್‌ ಮಿಸ್ಡ್ ಕಾಲ್‌ ಮೂಲಕವೇ ಕೃಷಿ ಭೂಮಿಗೆ ನೀರು ಹಾಯಿಸುವ ವಿಧಾನ… ಇದು ಅಗ್ರಿಟೆಕ್‌ ಇಂಡಿಯಾ- ಫ‌ುಡ್‌ಎಕ್ಸ್‌ ಮೇಳದಲ್ಲಿ ಕಂಡು ಬಂದ ಕೃಷಿ ಸಂಬಂಧಿತ ಸುಧಾರಿತ ಯಂತ್ರೋಪಕರಣಗಳ ಸ್ಯಾಂಪಲ್‌. ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆಯು ಮೀಡಿಯಾ ಟುಡೆ ಸಂಸ್ಥೆ ಸಹಯೋಗದಲ್ಲಿ ನಗರದ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸೋಮವಾರ ಆರಂಭವಾದ ಅಗ್ರಿಟೆಕ್‌ ಇಂಡಿಯಾ- ಫ‌ುಡ್‌ಎಕ್ಸ್‌ ಮೇಳದಲ್ಲಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣ, ಹೊಸ ಆವಿಷ್ಕಾರಗಳು ಅನಾವರಣಗೊಂಡಿವೆ.

Advertisement

ಪ್ರಾಣಿಗಳ ಪತ್ತೆಗೆ ಜಿಪಿಎಸ್‌: ಮೇವು ಅರಸಿ ಹೋಗುವ ಜಾನುವಾರುಗಳ ಮೇಲೆ ನಿಗಾ ವಹಿಸಲು ಹಾಗೂ ಅವು ಕಳವಾದರೆ ಪತ್ತೆ ಹಚ್ಚಲು ಅನುಕೂಲವಾಗುವಂತೆ ಓಮ್ನಿಯಾ ಟ್ಯಾಗ್ಸ್‌ ಸಂಸ್ಥೆಯು ಜಿಪಿಎಸ್‌ ಸಾಧನವನ್ನು ಅಭಿವೃದ್ಧಿಪಡಿಸಿದೆ. ಅದರಂತೆ ಜಿಪಿಎಸ್‌ ಟ್ಯಾಗ್‌
ಅನ್ನು ಜಾನುವಾರುವಿನ ಕಿವಿ, ಹೊಟ್ಟೆ ಅಥವಾ ಕುತ್ತಿಗೆಗೆ ಅಳವಡಿಸಬೇಕು. ಇದರಿಂದ ಪ್ರಾಣಿಯ ಚಲನವಲನದ ಮಾಹಿತಿಯನ್ನು ಸಂಸ್ಥೆ ನೀಡುವ ರಿಸೀವರ್‌ ಮೂಲಕ ಪತ್ತೆ ಹಚ್ಚಬಹುದಾಗಿದೆ.

ಮಿಸ್ಡ್ ಕಾಲ್‌ ಕೊಟ್ಟು ನೀರು ಹಾಯಿಸಿ: ತಮಿಳುನಾಡು ಮೂಲದ ಮೊಬಿಟೆಕ್‌ ಸಂಸ್ಥೆಯು ಡ್ರಿಪ್‌ ಇರಿಗೇಷನ್‌ ವಾಲ್‌Ì ಕಂಟ್ರೋಲರ್‌ ಯಂತ್ರ ಅಭಿವೃದ್ಧಿಪಡಿಸಿದ್ದು, ಈ ತಂತ್ರಜ್ಞಾನದಿಂದ ಪಂಪ್‌ಸೆಟ್‌ ಮೋಟಾರ್‌ಅನ್ನು ಮೊಬೈಲ್‌ ಮಿಸ್ಡ್ ಕಾಲ್‌ ಮೂಲಕ ಆರಂಭಿಸುವ ಹಾಗೂ ಬಂದ್‌
ಮಾಡಬಹುದಾಗಿದೆ. ಪಂಪ್‌ಸೆಟ್‌ ಮೋಟಾರ್‌ಗೆ ಸಂಸ್ಥೆ ಅಭಿವೃದ್ಧಿಪಡಿಸಿರುವ ಯಂತ್ರದ ಜೊತೆ ಒಂದು ಮೊಬೈಲ್‌ ಸಿಮ್‌ ಕಾರ್ಡ್‌ ಅಳವಡಿಸಬೇಕು. ಆ ಸಂಖ್ಯೆಗೆ ಮಿಸ್ಡ್ ಕಾಲ್‌ ನೀಡಿದರೆ ಪಂಪ್‌ಸೆಟ್‌ ಮೋಟಾರು ಕಾರ್ಯ ನಿರ್ವಹಿಸಲಿದೆ. ವಿದ್ಯುತ್‌ ಪೂರೈಕೆಯಾಗುತ್ತಿದ್ದಂತೆ ಆ ಮೊಬೈಲ್‌ ಸಂಖ್ಯೆಯಿಂದಲೇ ಎಸ್‌ಎಂಎಸ್‌ ಸಂದೇಶ ರವಾನೆಯಾಗುವ ವ್ಯವಸ್ಥೆ ಇದೆ. ಮನೆಯ ಅಂಗಳದಲ್ಲಿ ಅಲಂಕಾರಕ್ಕಾಗಿ ಬೆಳೆಸುವ ಹುಲ್ಲುಹಾಸಿನ ನಿಯಮಿತ ನಿರ್ವ ಹಣೆಗೆ ಅನುಕೂಲವಾಗುವಂತೆ ಸ್ವೀಡನ್‌ ಮೂಲದ ಹಸ್ಕವನ್‌ ಸಂಸ್ಥೆ ಆಟೋಮ್ಯಾಟಿಕ್‌ ಲಾನ್‌ ಕಟರ್‌ ಯಂತ್ರ ಅಭಿವೃದ್ಧಿಪಡಿಸಿದೆ.

ಮಕ್ಕಳ ಆಟಿಕೆಯಂತಿರುವ ಕಿರಿದಾದ ಲಾನ್‌ ಕಟರ್‌ ಯಂತ್ರವು ಸ್ವಯಂಚಾಲಿತವಾಗಿ ಚಾಲನೆ ಗೊಂಡು ಹುಲ್ಲು ಕತ್ತರಿಸಲಿದೆ. ಮನೆಯ ಲಾನ್‌ ಅಳತೆ, ಎಷ್ಟು ದಿನಕ್ಕೊಮ್ಮೆ ಯಾವ ಭಾಗದಲ್ಲಿ ಹುಲ್ಲು ಕತ್ತರಿಸಬೇಕೆಂಬ ವಿವರವನ್ನು ಸಂಸ್ಥೆಯ ಸಿಬ್ಬಂದಿಯೇ ಆರಂಭದಲ್ಲಿ ಯಂತ್ರದಲ್ಲಿ ಫಿಡ್‌ 
ಮಾಡಿರುತ್ತಾರೆ. ಇದರಿಂದ ನಿಗದಿತ ಅವಧಿಗೆ ತಕ್ಕಂತೆ ಆಟೋಮ್ಯಾಟಿಕ್‌ ಯಂತ್ರ ಹುಲ್ಲುಹಾಸನ್ನು ಕತ್ತರಿಸಲಿದೆ. ಜತೆಗೆ ಯಾಂತ್ರಿಕವಾಗಿ ಬ್ಯಾಟರಿ ಚಾರ್ಜ್‌ ಆಗುವುದು ವಿಶೇಷ.

400ಕ್ಕೂ ಹೆಚ್ಚು ಪ್ರದರ್ಶಕರು ಭಾಗಿ: ಒಂಬತ್ತನೇ ಆವೃತ್ತಿಯ ಅಗ್ರಿಟೆಕ್‌ ಇಂಡಿಯಾ ಹಾಗೂ ಫ‌ುಡ್‌ ಎಕ್ಸ್‌ ಮೇಳಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು. ಜಪಾನ್‌, ತೈವಾನ್‌, ಕೊರಿಯಾ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳ 400ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಕೃಷಿ, ಕೃಷಿ ಸಂಬಂಧಿತ ಉತ್ಪನ್ನ, ಆಹಾರ ಬೆಳೆಗಳ ಸಂಸ್ಕರಣೆ, ಬೆಳೆಗೆ ತಗಲುವ ರೋಗಗಳ ನಿಯಂತ್ರಣ ಸೇರಿದಂತೆ ಸುಧಾರಿತ ತಂತ್ರಜ್ಞಾನದ ಹೊಸ ಮಾದರಿಗಳ ದೊಡ್ಡ ಸಂಗ್ರಹ ಮೇಳದಲ್ಲಿದೆ. ಮೇಳವು ಆ.30ರವರೆಗೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next