ಸಿಂಧನೂರು: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕ 2.0(ಪಿಎಂಕೆಎಸ್‌ವೈ-ಡಬ್ಲ್ಯೂಡಿಸಿ) ಕಾರ್ಯಕ್ರಮಕ್ಕೆ ತಾಲೂಕಿಗೆ 2022-23ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಕೃಷಿ ಇಲಾಖೆ ನಿಷ್ಕಾಳಜಿ ತೋರಿದ ಸಂಗತಿ ಬೆಳಕಿಗೆ ಬಂದಿದೆ.
ಗೋಕಟ್ಟೆಗಳನ್ನು ನಿರ್ಮಿಸುವ ಉದ್ದೇಶದೊಂದಿಗೆ ಬಿಡುಗಡೆಯಾದ ಅನುದಾನವನ್ನು ಸಕಾಲಕ್ಕೆ ಬಳಕೆ ಮಾಡದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರೇ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತಾಲೂಕಿಗೆ ನೀಡಲಾದ ವಾರ್ಷಿಕ ಆರ್ಥಿಕ ಗುರಿ 4.79 ಕೋಟಿ ರೂ.ಗಳ ಪೈಕಿ, ಅನುದಾನ ಬಳಕೆ ಮಾಡುವಲ್ಲಿ ತೀವ್ರ ಹಿನ್ನಡೆ ಸಾಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು ಬರೆದ ಪತ್ರದ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ.
ನಿರಂತರ ಪತ್ರ: ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ನಿರಂತರ ಪತ್ರ ಬರೆಯಲಾಗಿದ್ದರೂ ಸಹಾಯಕ ಕೃಷಿ ನಿರ್ದೇಶಕರು ಸಕಾಲದಲ್ಲಿ ಸ್ಪಂದನೆ ಮಾಡಿಲ್ಲವೆಂಬ ಅರ್ಥದಲ್ಲಿ ಜಂಟಿ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಬರೋಬ್ಬರಿ ಮೂರು ಪತ್ರಗಳನ್ನು ಬರೆದ ಮೇಲೂ ಯಾವುದೇ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದು ಹೇಳಿದ್ದಾರೆ. ಜುಲೈ 25, 2022ರೊಳಗೆ ಸಂಪೂರ್ಣ ವೆಚ್ಚ ಭರಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವರದಿ ನೀಡಲು ತಿಳಿಸಿದಾಗಲೂ ಪ್ರತಿಕ್ರಿಯೆ ಬಂದಿಲ್ಲವೆಂದು ಪತ್ರದಲ್ಲಿ ತಿಳಿಸಲಾಗಿದೆ.
ಡೆಡ್‌ಲೈನ್ ಕೊಟ್ಟರು: ಜಂಟಿ ನಿರ್ದೇಶಕರೇ ಸ್ವತಃ ಆಗಸ್ಟ್ 3, 2022ರೊಳಗೆ ಸಂಪೂರ್ಣ ಪ್ರಗತಿ ವರದಿ ಸಲ್ಲಿಸಲು ಗಡುವು ನೀಡಿದ್ದರು. ತಾಲೂಕಿಗೆ ಈಗಾಗಲೇ ಬಿಡುಗಡೆ ಮಾಡಲಾಗಿರುವ 1 ಕೋಟಿ 82 ಲಕ್ಷ 722 ರೂ.ಗಳನ್ನು ಬಳಸಿಕೊಳ್ಳುವಂತೆ ಹೇಳಿದ್ದಾರೆ. ಆದರೂ ತಾಲೂಕಿನಲ್ಲಿ ಕೇವಲ 5 ಲಕ್ಷ 92 ಸಾವಿರ 200 ರೂ.ಗಳನ್ನು ಮಾತ್ರ ಬಳಕೆ ಮಾಡಲಾಗಿದೆ. ಮಹತ್ವಕಾಂಕ್ಷೆಯ ಯೋಜನೆ ಅನುಷ್ಠಾನಗೊಳಿಸುವಲ್ಲಿ ಭಾರಿ ಪ್ರಮಾಣದ ನಿರ್ಲಕ್ಷ ತೋರಿದ್ದಾರೆಂಬುದನ್ನು
ಅವರು ಪರೋಕ್ಷವಾಗಿ ಉಲ್ಲೇಖೀಸಿದ್ದಾರೆ.
ಗೋಕಟ್ಟೆ ಕೆಲಸ ಅಪೂರ್ಣ: ಕೋಟ್ಯಂತರ ರೂ. ವೆಚ್ಚದ ಯೋಜನೆ ಅನುಷ್ಠಾನಗೊಳಿಸಲು ಅವಕಾಶ ಕೊಟ್ಟರೂ ಗುಂಜಳ್ಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಗೋಕಟ್ಟೆ ಕಾಮಗಾರಿ ಅರೆಬರೆಯಾಗಿದ್ದರೂ ಆಗಸ್ಟ್ 15ರಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಕುರಿತು ವಿವರ ಕೊಟ್ಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಗೋಕಟ್ಟೆಗೆ ನೀರು ಬರಲು ನಿರ್ಮಿಸಬೇಕಾದ ಕಲ್ಲಿನ ಪಿಂಚಿಂಗ್, ನೀರು ಹೊರ ಹೋಗಲು ರೂಪಿಸಿದ ಕಲ್ಲಿನ ಪಿಚ್ಚಿಂಗ್ ಕೆಲಸ ಈವರೆಗೂ ನಿರ್ಮಿಸಿಲ್ಲ. ಯೋಜನೆ ಅನುಷ್ಠಾನದಲ್ಲಿ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂಬುದಕ್ಕೆ ಜಂಟಿ ನಿರ್ದೇಶಕರ ಪತ್ರವೇ ಸಾಕ್ಷಿ ಒದಗಿಸುತ್ತಿದೆ.
ಗುಂಜಳ್ಳಿ ಆರ್‌ಎಸ್‌ಕೆ ವ್ಯಾಪ್ತಿಯಲ್ಲಿ ಆಗಸ್ಟ್ 15ರಂದು ಗೋಕಟ್ಟೆ ನಿರ್ಮಾಣ ಆಗಿದೆ ಎನ್ನುವ ಜಾಗದಲ್ಲಿ ಧ್ವಜಾರೋಹಣ ಮಾಡಿದ್ದು, ನಿಜ. ಅಲ್ಲಿ ಜೆಸಿಬಿಗಳನ್ನು ಬಳಸಿ ತಗ್ಗು ಅಗೆಯಲಾಗಿತ್ತು. ಔಟ್‌ಲೆಟ್ ಸೇರಿ ಕೆಲ ಕೆಲಸ ಬಾಕಿ ಇವೆ.
ಹೆಸರು ಹೇಳಲಿಚ್ಚಿಸದ ಕೃಷಿ ಇಲಾಖೆ ಅಧಿಕಾರಿ, ಸಿಂಧನೂರು
ಯಮನಪ್ಪ ಪವಾರ