Advertisement

ಸಂಪರ್ಕ ರಸ್ತೆಯಿಲ್ಲದೆ ಕೋ. ರೂ. ಸೇತುವೆ ನಿಷ್ಪ್ರಯೋಜಕ

03:25 AM Jun 02, 2018 | Karthik A |

ಬೆಳ್ತಂಗಡಿ: ಕನ್ನಡದಲ್ಲಿ ಗಾದೆ ಮಾತೊಂದಿದೆ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂದು. ಇದು ಕಾಜೂರು –  ಕೊಲ್ಲಿ ಜನತೆಯ ಪಾಲಿಗೆ ಈ ಮಾತು ಅಕ್ಷರಶಃ ಸತ್ಯವಾಗಿದೆ. ಎರಡೂ ಊರುಗಳನ್ನು ಸಂಪರ್ಕಿಸಲು ಸುಸಜ್ಜಿತ ಸೇತುವೆಯಿದೆ. ದುರಂತವೆಂದರೆ ಸೇತುವೆಯಿದ್ದರೂ ಜನತೆ ಅಪಾಯವನ್ನು ಲೆಕ್ಕಿಸದೆ ನದಿಯಲ್ಲೇ ಸಂಚರಿಸಿ ಮತ್ತೂಂದು ದಡ ಸೇರಬೇಕಾಗಿದೆ.

Advertisement

ಸುತ್ತಲೂ ಪಶ್ಚಿಮ ಘಟ್ಟಗಳಿಂದ ಆವೃತ ವಾಗಿದ್ದು, ಮಳೆಗಾಲದಲ್ಲಿ ಭೂಮಿ ತಾಯಿ ಹಸಿರನ್ನು ಹೊದ್ದು ಮಲಗಿರು ವಂತೆ ಇಲ್ಲಿನ ದೃಶ್ಯಾವಳಿ ಕಂಡುಬರುತ್ತದೆ.  ಸ್ಥಳೀಯ ವಾಗಿ ದೇವಸ್ಥಾನ, ದರ್ಗಾ, ಜಲಪಾತಗಳಿದ್ದು ಪ್ರವಾ ಸೋದ್ಯಮಕ್ಕೆ ಉತ್ತಮ ಅವಕಾಶವಿದೆ. ಆದರೆ ಮುಖ್ಯವಾಗಿ ಕೊಲ್ಲಿ ಹಾಗೂ ಕಾಜೂರು ಪ್ರದೇಶಗಳಿಗೆ ಕಾಡಿದ್ದು ಸಂಪರ್ಕ ಸೇತುವೆ. ಜನತೆ ಒಂದು ಊರಿನಿಂದ ಸುಮಾರು 300 ಮೀ. ಕ್ರಮಿಸಿದರೆ ಸಿಗುತ್ತದೆ ಪಕ್ಕದ ಊರು. ಸೇತುವೆಗಾಗಿ ಅಲೆದು, ಹಲವು ಬಾರಿ ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಬಳಿಕ ಕೊನೆಗೂ ಸೇತುವೆ ನಿರ್ಮಾಣಗೊಂಡಿತ್ತು.

ಕೋಟಿ ರೂ. ವೆಚ್ಚದ ಸೇತುವೆ


ಜನರ ಬಹುಬೇಡಿಕೆ ಹಾಗೂ ಸಮಸ್ಯೆ ಅರಿತು ಕೊನೆಗೂ ಅಂದಿನ ಶಾಸಕ ಕೆ. ವಸಂತ ಬಂಗೇರ ಅವರು ಹೆದ್ದಾರಿ ಪ್ರಾಧಿಕಾರದ ಅನುದಾನದಿಂದ ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದರು. 10 ಮೀ. ಅಗಲದ 52.52 ಮೀ. ಉದ್ದದ ಸೇತುವೆಯನ್ನು 1.59 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಸೇತುವೆಯನ್ನು 2017ರ ಜು. 4ರಂದು ಉದ್ಘಾಟಿಸಲಾಗಿತ್ತು.

ವರ್ಷವಾಗುತ್ತಿದ್ದರೂ ಉಪಯೋಗಕ್ಕಿಲ್ಲ
ಸೇತುವೆ ಉದ್ಘಾಟನೆಗೊಂಡು 11 ತಿಂಗಳುಗಳು ಕಳೆದಿವೆ.  ಆದರೆ ಜನರ ಉಪ ಯೋಗಕ್ಕೆ ಮಾತ್ರ ಲಭ್ಯವಾಗಿಲ್ಲ. ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಜತೆ ಮಾತುಕತೆ ನಡೆಸಲಾಗಿತ್ತು ಎನ್ನಲಾಗಿದೆ. ಬಳಿಕ ಮತ್ತೆ ಮಾತುಕತೆ ನಡೆಸಿ  2018ರ ಮಾ. 21ರಂದು ರಸ್ತೆ ನಿರ್ಮಾಣ ಕಾಮಗಾರಿಗೆ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಚಾಲನೆ ನೀಡಿದ್ದರು. ಈ ವೇಳೆ ಸ್ಥಳೀಯರ ಜತೆ ಮಾತುಕತೆ ನಡೆಸಿ, ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ ಸ್ಥಳೀಯರು ಸೂಕ್ತ ಪರಿಹಾರ ಒದಗಿಸದಿದ್ದಲ್ಲಿ ರಸ್ತೆ ನಿರ್ಮಾಣಕ್ಕೆ ಅವ ಕಾಶ ನೀಡುವುದ್ಲಿಲವೆಂದು ತಿಳಿಸಿದ್ದರು. ಕಾಜೂರು ದರ್ಗಾದ ವಾರ್ಷಿಕ ಜಾತ್ರೆ ಸಂದರ್ಭ ಸ್ಥಳೀಯರ ಮನವೊಲಿಸಿ ರಸ್ತೆ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಬಳಿಕ ಬೇಲಿ ಹಾಕಲಾಗಿದೆ.

ತೆಪ್ಪದ ಪ್ರಯಾಣವೂ ಇಲ್ಲ
ಹಿಂದೆ ಈ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ವೇಳೆ ಪ್ರತಿ ಬಾರಿ ಸ್ಥಳೀಯರು ತೆಪ್ಪದ ಮೂಲಕ ಒಂದು ದಡದಿಂದ ಮತ್ತೂಂದು ದಡಕ್ಕೆ ತಲುಪಬೇಕಾಗಿತ್ತು. ಸೇತುವೆ ನಿರ್ಮಾಣ ವಾದ ಬಳಿಕ ತೆಪ್ಪದ ಸೇವೆ ನಿಂತಿದ್ದು, ಇದೀಗ ನದಿ ನೀರಿನಲ್ಲೇ ಸಂಚರಿಸಿ ಮತ್ತೂಂದು ಊರನ್ನು ಸಂಪರ್ಕಿಸಬೇಕಾಗಿದೆ. ನದಿ ದಾಟುವ ಪ್ರದೇಶದಲ್ಲಿ ಅಗಲವಾಗಿ ನದಿ ಹರಿಯುತ್ತಿದೆ. ಈ ಪ್ರದೇಶದಲ್ಲಿಯೇ ಜೀಪ್‌, ಕಾರು, ಟೆಂಪೋ, ಲಾರಿ, ಟಿಪ್ಪರ್‌ ಮೊದಲಾದ ವಾಹನಗಳು ನಿತ್ಯ ಸಂಚರಿ ಸುತ್ತವೆ. ಆದರೆ ಮಳೆ ಬಂದು ನೀರು ಹೆಚ್ಚಾದಲ್ಲಿ ಸಂಪರ್ಕ ಸ್ಥಗಿತಗೊಳ್ಳುತ್ತದೆ.

Advertisement


ರಸ್ತೆಗೆ ಬೇಲಿ ಹಾಕಿ ತಡೆ ನಿರ್ಮಿಸಿರುವುದು.

ನದಿ ನೀರು ಅಪಾಯ

ಮಳೆಗಾಲದಲ್ಲಿ ನೀರಿನ ಸೆಳೆತ ಹೆಚ್ಚಾಗಿ ರುವುದರಿಂದ ನದಿ ದಾಟುವುದು ಅಪಾಯ ವಾಗಿದೆ. ಮುಖ್ಯವಾಗಿ ಶಾಲೆಗೆ ತೆರಳುವ ಸಣ್ಣ ಮಕ್ಕಳು ನೀರಿನಲ್ಲಿ ಇಳಿದಲ್ಲಿ ಅಪಾಯ ಸಂಭವಿ ಸುವ ಸಾಧ್ಯತೆ ಹೆಚ್ಚಾಗಿದೆ. ದೊಡ್ಡ ವರೂ ತುರ್ತಾಗಿ ತೆರಳುವ ಆತುರದಲ್ಲಿ ನೀರಿನ ಹರಿವು ಹೆಚ್ಚಾದ ಸಂದರ್ಭ ಇಳಿದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಸ್ಥಳೀಯರಿಗೆ ಪರ್ಯಾಯ ಮಾರ್ಗವಿದೆ, ಆದರೆ ಸುಮಾರು 7 ಕಿ.ಮೀ. ಸುತ್ತು ಬಳಸಿ  ಕುಕ್ಕಾವು ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯವಿದೆ. ವಾಹನ ಇಲ್ಲದವರಿಗೆ ಇದು ದೂರದ ಪ್ರಯಾಣವಾಗಿದೆ.

ಶೀಘ್ರ ಬೇಕಿದೆ ಮುಕ್ತಿ
ಸುಸಜ್ಜಿತವಾಗಿ ನಿರ್ಮಾಣವಾಗಿರುವ ಸೇತುವೆ ಮೂಲಕ ಪ್ರಯಾಣಿಸಲು ಹಾಗೂ ಸಂಪರ್ಕ ರಸ್ತೆಗೆ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ. ಜಾಗದ ಮಾಲಕರ ಜತೆ ಚರ್ಚಿಸಿ ರಸ್ತೆ ಮೂಲಕ ಸಾಗಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಸೇತುವೆ ನಿರ್ಮಾಣ ಸಂದರ್ಭ, ಯೋಜನೆ ರೂಪಿಸುವ ವೇಳೆ ರಸ್ತೆ ವಿಚಾರ ಏಕೆ ಪರಿಗಣಿಸಿಲ್ಲ  ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಮಳೆಗಾಲ ಆರಂಭವಾಗಲಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.

ಪರಿಹಾರ ನೀಡಿದಲ್ಲಿ ಜಾಗ ಬಿಟ್ಟುಕೊಡಲು ಸಿದ್ಧ
ರಸ್ತೆ ನಿರ್ಮಾಣಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ 5 ಕುಟುಂಬಗಳಿಗೆ ಸೇರಿದ ದಾಖಲೆ ಇರುವ ಭೂಮಿಯಿದೆ. ಆ ಭೂಮಿಗೆ ಸೂಕ್ತ ಪರಿಹಾರ ನೀಡಿದಲ್ಲಿ ಜಾಗವನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ.
– ಅಹಮದ್‌, ಜಾಗದ ಮಾಲಕರು

ಕ್ರಮ ಕೈಗೊಳ್ಳಲಿ 
ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಉದ್ಘಾಟನೆಯೂ ನಡೆದಿದೆ. ಆದರೆ ರಸ್ತೆ ಸಮಸ್ಯೆಯಿಂದ ನದಿಯಲ್ಲೇ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ವಾಹನಗಳೂ ನದಿಯಲ್ಲೇ ಪಕ್ಕದ ಊರಿಗೆ ಪ್ರಯಾಣ ಬೆಳೆಸಬೇಕಿದೆ. ಮಳೆಗಾಲದಲ್ಲಿ ನದಿ ದಾಟಲು ಕಷ್ಟವಾಗಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು.
– ತಮ್ಮಣ್ಣ ಗೌಡ, ಸ್ಥಳೀಯರು

— ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next