Advertisement

ದೇಶದಲ್ಲಿನ್ನೂ ಅಸ್ಪೃಶ್ಯತೆ ಜೀವಂತ

11:15 AM Feb 17, 2019 | Team Udayavani |

ಚಿತ್ರದುರ್ಗ: ಬಸವಣ್ಣನವರ ಆಗಮನಕ್ಕೂ ಮುನ್ನ ಕುಂಚಿಟಿಗರು, ಲಿಂಗಾಯಿತ, ವೀರಶೈವರು ಅಸ್ಪೃಶ್ಯರು, ಶೂದ್ರರು, ದಲಿತರೇ ಆಗಿದ್ದರು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಇಲ್ಲಿನ ತರಳಬಾಳು ನಗರದ ಜೆಎಂಐಟಿ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕುಂಚಿಟಿಗ ವೀರಶೈವ ಸಮಾಜದ ವಿದ್ಯಾರ್ಥಿನಿಲಯದ ಮಳಿಗೆಗಳನ್ನು ಶನಿವಾರ ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.

Advertisement

ವರ್ಣಾಶ್ರಮದಲ್ಲಿ ನಾಲ್ಕು ವರ್ಣಗಳಿದ್ದವು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಣಗಳಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ಇತ್ತು. ಆದರೆ ಶೂದ್ರ ಸಮುದಾಯಗಳಿಗೆ, ಅಲಕ್ಷಿತರಿಗೆ, ದಲಿತರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇರಲಿಲ್ಲ. ಬದಲಾಗಿ ಈ ಮೂರು ವರ್ಣಗಳ ಸೇವೆಯನ್ನು ಶೂದ್ರರು ಮಾಡಬೇಕಿತ್ತು. 

ಈ ರೀತಿಯ ತಾರತಮ್ಯದ ವಿರುದ್ಧ ಸಿಡಿದೆದ್ದ ಬಸವಣ್ಣನವರು ತಾವು ಬ್ರಾಹ್ಮಣರಾಗಿದ್ದರೂ ಅವಕಾಶ ವಂಚಿತ, ಅಲಕ್ಷಿತ, ದಲಿತ, ಶೂದ್ರ ಸಮುದಾಯಗಳಿಗೆ ಬಸವ ಧರ್ಮದ ಮೂಲಕ ಸ್ವಾತಂತ್ರ್ಯ ನೀಡಿದರು. ನಂತರ ಲಿಂಗವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತಂದರು ಎಂದರು.

ಜಗತ್ತಿಗೆ ಬಸವಣ್ಣನವರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಬ್ರಾಹ್ಮಣ ಸಮಾಜಕ್ಕೆ ಸಲ್ಲಬೇಕು. ಬಸವಣ್ಣನವರು ಬ್ರಾಹ್ಮಣರಾಗಿದ್ದರೂ ಶೂದ್ರರ ದುಃಖ, ನೋವು, ಸಂಕಷ್ಟ ಅರಿತಿದ್ದರು. ಹಾಗಾಗಿ ಅಂತಹ ಸಮುದಾಯಗಳ ಶಕ್ತಿಯಾಗಿ ನಿಂತು ಕೆಲಸ ಮಾಡಿದರು ಎಂದು ಸ್ಮರಿಸಿದರು.

ದೇಶದಲ್ಲಿ ಇಂದಿಗೂ ಎರಡು ವಿಧವಾದ ಭಾರತ ಇದೆ. ಒಂದು ಸ್ಪೃಶ್ಯ ಭಾರತ. ಈ ಸ್ಪೃಶ್ಯ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಮತ್ತೂಂದು ಅಸ್ಪೃಶ್ಯ ಭಾರತ. ಈ ಭಾರತಕ್ಕೆ ಇಂದಿಗೂ ಸ್ವಾತಂತ್ರ್ಯವೇ ಸಿಕ್ಕಿಲ್ಲ. ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಇಂತಹ ಸಮಾಜಕ್ಕೆ ಬಸವಣ್ಣನವರು ಸ್ವಾಭಿಮಾನದಿಂದ ಬದುಕುವ ಮಾರ್ಗ ತೋರಿದರು ಎಂದರು.

Advertisement

ಎಲ್ಲ ದಾನಕ್ಕಿಂತ ಸ್ಥಳ ದಾನ ಶ್ರೇಷ್ಠವಾದುದು. ಸುಮಾರು 2 ಕೋಟಿ ರೂ. ಮೌಲ್ಯದ ನಿವೇಶನವನ್ನು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌ .ಪರಮೇಶ್ವರಪ್ಪ ಸಮುದಾಯಕ್ಕೆ ಉಚಿತವಾಗಿ ನೀಡಿದ್ದರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 
ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಸರ್ಕಾರ ಇಂದು ಎಲ್ಲ ಜಾತಿಗಳಿಗೂ ಹಾಸ್ಟೆಲ್‌ ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಗಿಂತ ಮುಖ್ಯವಾಗಿ ಆರ್ಥಿಕ ಶಕ್ತಿ ನೀಡಬೇಕು. ಕುಂಚಿಟಿಗ ಲಿಂಗಾಯತ ಸಮುದಾಯದ ಮಕ್ಕಳ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಶಿಷ್ಯ ವೇತನ ನೀಡಬೇಕು. ಈ ಕೆಲಸ ಆಗಬೇಕಾದರೆ ಸಂಘಕ್ಕೆ ಆದಾಯ ಬರುವಂತಿರಬೇಕು. ಆಗ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಲು ಸಾಧ್ಯ ಎಂದರು.

ಕುಂಚಿಟಿಗ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಎಲ್‌.ಬಿ. ರಾಜಶೇಖರ್‌ ಮಾತನಾಡಿ, 2 ಕೋಟಿ ರೂ. ಬೆಲೆ ಬಾಳುವ ನಿವೇಶನ ಉಚಿತವಾಗಿ ಸಿಕ್ಕಿದ ಕೂಡಲೇ ಮುರುಘಾಮಠದ ಶರಣರು ಐದು ಲಕ್ಷ ರೂ. ದೇಣಿಗೆ ನೀಡಿದರು. ಉಳಿದಂತೆ ಸಮುದಾಯದವರು 36 ಲಕ್ಷ ರೂ. ನೀಡಿದ್ದರಿಂದ ವಾಣಿಜ್ಯ ಮಳಿಗೆಗಳು ಪೂರ್ಣಗೊಂಡಿವೆ.

ಸಮಾಜದಲ್ಲಿ 48 ಕುಲಗಳಿದ್ದು ಇದರ ಜ್ಞಾಪಕಾರ್ಥವಾಗಿ 48 ಕೊಠಡಿ ನಿರ್ಮಾಣದ ಜೊತೆಗೆ ಸಮುದಾಯ ಭವನ ಸೇರಿದಂತೆ ಒಟ್ಟು 4.50 ಕೋಟಿ ರೂ.ಗಳ ವೆಚ್ಚದ ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. 

ಮಾಜಿ ಶಾಸಕ ಎಂ.ಬಿ. ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಪಿ. ರಮೇಶ್‌, ಟಿ.ಎಚ್‌. ಬಸವರಾಜು, ಅರಸಿಕೆರೆ ಮಾಜಿ ಶಾಸಕ ಪರಮೇಶ್ವರಪ್ಪ ಮತ್ತಿತರರು ಮಾತನಾಡಿದರು. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಜಿಪಂ ಸದಸ್ಯೆ ಚೇತನಾ ಪ್ರಸಾದ್‌, ನಿವೃತ್ತ ಇಂಜಿನಿಯರ್‌
ಕೃಷ್ಣಮೂರ್ತಿ ಇತರರು ಇದ್ದರು. 

ಬಸವಣ್ಣನವರು ಬಂದ ನಂತರ ಲಿಂಗಾಯತ ಧರ್ಮಕ್ಕೆ ಗಟ್ಟಿ ನೆಲೆಯನ್ನು ಒದಗಿಸಿದರು. ಕುಂಚಿಟಿಗ ಸಮುದಾಯದವರು 200-300 ವರ್ಷಗಳಿಂದ ಈಚೆಗೆ ಲಿಂಗಾಯತ ಧರ್ಮದ ಪಾಲಕರಾಗಿದ್ದಾರೆ. ಆರಂಭದಲ್ಲಿ ಕುಂಚಿಟಿಗರಿಗೆ ರುದ್ರಾಕ್ಷಿ, ನಂತರ ಇಷ್ಟಲಿಂಗ ದಿಧೀಕ್ಷೆ ನೀಡಲಾಯಿತು. ಈ ರೀತಿಯ ಅಲಕ್ಷಿತ ಕುಲದ 18 ಜಾತಿಗಳಿಗೆ ಮುರುಘಾ ಮಠ ಆಸರೆಯಾಗಿ ನಿಂತಿದೆ. ಆಯಾ ಸಮುದಾಯಗಳಿಗೆ ನಿವೇಶನ ನೀಡಿ ಸಂಸ್ಕಾರ ಬೆಳೆಸಿದೆ. 
ಡಾ| ಶಿವಮೂರ್ತಿ ಮುರುಘಾ ಶರಣರು.

Advertisement

Udayavani is now on Telegram. Click here to join our channel and stay updated with the latest news.

Next