ಉಡುಪಿ/ ಕುಂದಾಪುರ: ಬೇಸಗೆ ಒಣ ಬಿಸಿಲಿನಿಂದ ಸುಡುತ್ತಿದ್ದ ವಾತಾವರಣವನ್ನು ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಮಳೆ ತಂಪಾಗಿಸಿದೆ. ಉಡುಪಿ, ಕುಂದಾಪುರ, ಕಾರ್ಕಳ ಭಾಗದಲ್ಲಿ ಬುಧವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ.
ಕೆಲವೆಡೆ ಹಾನಿ ಸಂಭವಿಸಿದ್ದು ಹಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು. ಮಣಿಪಾಲ, ಉಡುಪಿ, ಮಲ್ಪೆ ಭಾಗ ಸುತ್ತಮುತ್ತ ಗುಡುಗು ಸಹಿತ ಮಳೆ ಸುರಿದಿದೆ. ಕಳೆದ ಮುಂಗಾರಿನಲ್ಲಿ ಕಟಾವಿಗೆ ಅಡ್ಡಿಯಾಗಿದ್ದ ಮಳೆ, ಈಗ ಸುಗ್ಗಿ ಬೆಳೆಯ ಕಟಾವಿಗೂ ತೊಡಕಾಗಿ ಪರಿಣಮಿಸಿದೆ.
ಕುಂದಾಪುರದ ಕಾವ್ರಾಡಿಯ ಮುಂಬಾರು, ಕಂಬಳಗದ್ದೆ, ಸಿದ್ದಾಪುರ, ಹಾಲಾಡಿ, ಹೊಸಂಗಡಿ, ಅಮಾಸೆಬೈಲು, ಮಡಾಮಕ್ಕಿ ಸೇರಿದಂತೆ ಹಲವೆಡೆಗಳಲ್ಲಿ ಕಟಾವು ಬಾಕಿಯಿರುವ ಭತ್ತದ ಕೃಷಿಕರಿಗೆ ತೊಂದರೆಯಾಗಿದೆ. ಕಟಾವಿಗೆ ಬಾಕಿ ಇರುವ ಪೈರು ಗಾಳಿ – ಮಳೆಗೆ ಬಾಗಿ ನಿಂತು ನೀರಲ್ಲಿ ಒದ್ದೆಯಾಗಿದೆ.
ಕಿರಿಮಂಜೇಶ್ವರ, ಉಪ್ಪುಂದ, ಹೇರಂಜಾಲು, ಕಂಬದಕೋಣೆ, ನಾಗೂರು, ಬೈಂದೂರು ಮತ್ತಿತರ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುವ ನೆಲಗಡಲೆ ಕೃಷಿಕರಿಗೆ ಈ ಅಕಾಲಿಕ ಮಳೆ ಅಡ್ಡಿಪಡಿಸಿದೆ. ಕುಂದಾಪುರ ತಾಲೂಕು ಅಂಪಾರು ಗ್ರಾಮದ ಮಹಾಬಲ ಪೂಜಾರಿ ಮತ್ತು ಬೋಜು ನಾಯ್ಕ ಅವರ ಮನೆ ಮತ್ತು ಹೆಬ್ರಿ ಶಿವಪುರ ಗ್ರಾಮದ ಸುಂದರ ಹೆಗ್ಡೆ ಅವರ ಮನೆಗೆ ಭಾಗಶಃ ಹಾನಿಯಾಗಿದೆ.
ಉಡುಪಿ 16.2, ಬ್ರಹ್ಮಾವರ 14.1, ಕಾಪು 3.2, ಕುಂದಾಪುರ 36, ಬೈಂದೂರು 22.8, ಕಾರ್ಕಳ 9, ಹೆಬ್ರಿ 16 ಮಿ.ಮೀ., ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ 19.7 ಮಿ.ಮೀ. ಸರಾಸರಿ ಮಳೆಯಾಗಿದೆ. ಗುರುವಾರ ಮೋಡ ಕವಿದ ವಾತಾವರಣ ಮುಂದುವರಿದಿತ್ತು.