Advertisement

ಜೂನ್‌ವರೆಗೆ ಬೆಂಗಳೂರಿಗೆ ನೀರಿನ ಸಮಸ್ಯೆಯಿಲ್ಲ

12:20 PM Mar 28, 2018 | Team Udayavani |

ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗದಂತೆ, 11 ಟಿಎಂಸಿ ನೀರನ್ನು ಶೇಖರಿಸಿಟ್ಟುಕೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿಯ ಪ್ರಧಾನ ಎಂಜಿನಿಯರ್‌ ಕೆಂಪರಾಮಯ್ಯ ಭರವಸೆ ನೀಡಿದ್ದಾರೆ.

Advertisement

ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆ ಕುರಿತು ಮಂಗಳವಾರ ಬಿಬಿಎಂಪಿಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಪಾಲಿಕೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳಲ್ಲಿ 11 ಟಿಎಂಸಿ ನೀರು ಶೇಖರಿಸಿಟ್ಟುಕೊಳ್ಳಲು ಕೋರಲಾಗಿದೆ. ಜತೆಗೆ ನಿತ್ಯ 1,400 ಎಂಎಲ್‌ಡಿ ನೀರು ಪಂಪ್‌ ಮಾಡಲು ಅವಕಾಶವಿದ್ದು, ಮುಂದಿನ ಜೂನ್‌ವರೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಎರಡೂ ಜಲಾಶಯಗಳಿಂದ ಸದ್ಯ ನಿತ್ಯ 1,350 ಎಂಎಲ್‌ಡಿ ನೀರು ಪಂಪ್‌ ಮಾಡಲಾಗುತ್ತಿದ್ದು, ಮಾ.18ರಿಂದ ನಿತ್ಯ ಹೆಚ್ಚುವರಿಯಾಗಿ 10 ರಿಂದ 15 ಎಂಎಲ್‌ಡಿ ನೀರು ಪಂಪ್‌ ಮಾಡಲಾಗುತ್ತಿದೆ. ಪರ್ಯಾಯ ಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಂಡಳಿ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳಿಗೆ ಹೆಚ್ಚುವರಿ ಪೈಪ್‌ ಅಳವಡಿಕೆ, ದುರಸ್ತಿಗೆ ಕಾರ್ಯಗಳಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. 

ಇದರೊಂದಿಗೆ 110 ಹಳ್ಳಿಗಳ ಪೈಕಿ ಮೊದಲ ಹಂತದಲ್ಲಿ 60 ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆ ಚಾಲ್ತಿಯಲ್ಲಿದ್ದು, ಈಗಾಗಲೇ 17 ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜಿಗೆ ಅರ್ಜಿ ಆಹ್ವಾನಿಸಲಾಗಿದೆ. ಉಳಿದ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಕಾಮಗಾರಿ 2019ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೆಂಪರಾಮಯ್ಯ ತಿಳಿಸಿದರು. 

ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರು ಶುದ್ಧೀಕರಣಕ್ಕಾಗಿ ಮೊದಲ ಹಂತದಲ್ಲಿ 14 ಹಾಗೂ 2ನೇ ಹಂತದಲ್ಲಿ 10 ಎಸ್‌ಟಿಪಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಒಟ್ಟು 1057 ಎಂಎಲ್‌ಡಿ ನೀರನ್ನು ನಿತ್ಯ ಶುದ್ಧೀಕರಿಸಲಾಗುತ್ತಿದೆ. ಜತೆಗೆ ಮೆಗಾಸಿಟಿ ಯೋಜನೆಯಡಿ 9 ಎಸ್‌ಟಿಪಿ ನಿರ್ಮಿಸಲಾಗುತ್ತಿದ್ದು, ಇದರಿಂದ 440 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆಯಾಗಲಿದೆ ಎಂದು ಸಭೆಗೆ ತಿಳಿಸಿದರು. 

Advertisement

ನೀರು ಮಾರಾಟಕ್ಕೆ ಅವಕಾಶವಿಲ್ಲ: ಬೇಸಿಗೆಯಲ್ಲಿ ನಗರದಲ್ಲಿರುವ 25 ನೆಲಮಟ್ಟದ ಜಲಾಗಾರಗಳಿಂದ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಬಹುದಾಗಿದೆ. ಆದರೆ, ಬೇಸಿಗೆಯಲ್ಲಿ ಖಾಸಗಿ ಟ್ಯಾಂಕರ್‌ಗಳ ಮಾಲೀಕರು ಜಲಮಂಡಳಿಗೆ ಟ್ಯಾಂಕರ್‌ಗಳನ್ನು ನೀಡಲು ಮುಂದಾಗುತ್ತಿಲ್ಲ. ಕಳೆದ ವರ್ಷ ಟ್ಯಾಂಕರ್‌ಗಳನ್ನು ನೀಡುವಂತೆ ಕೋರಿದಾಗ ಕೇವಲ 25 ಟ್ಯಾಂಕರ್‌ಗಳನ್ನು ಮಾತ್ರ ನೀಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. 

ಜಲಮಂಡಳಿ ವಿರುದ್ಧ ಆಕ್ರೋಶ: ಬೇಸಿಗೆಯ ಆರಂಭದಲ್ಲಿಯೇ ಹಲವೆಡೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜಲಮಂಡಳಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪಕ್ಷಬೇಧ ಮರೆತು ಎಲ್ಲ ಪಾಲಿಕೆ ಸದಸ್ಯರು ಜಲಮಂಡಳಿ ಅಧಿಕಾರಿಗಳ ವಿರುದ್ಧ ಮುಗಿಬಿದ್ದರು. 

ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ನಗರದಲ್ಲಿ ಈಗಾಗಲೇ ನೀರಿನ ಸಮಸ್ಯೆ ಎದುರಾಗಿದ್ದು, 198 ವಾರ್ಡ್‌ಗಲ್ಲಿನ ಒಟ್ಟು 90 ಸಾವಿರ ಕೊಳವೆಬಾವಿಗಳ ಪೈಕಿ 2,500 ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಹೀಗಾಗಿ ಜಲಮಂಡಳಿ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು. 

ಪ್ರತಿಪಕ್ಷನಾಯಕ ಪದ್ಮನಾಭ ರೆಡ್ಡಿ ದನಿಗೂಡಿಸಿ, ಜಲಮಂಡಳಿಯು ಕುಡಿಯುವ ನೀರು ಪೂರೈಕೆಯಲ್ಲಿ ತಾರತಮ್ಯ ತೋರುತ್ತಿದ್ದು, 198 ವಾರ್ಡ್‌ಗಳಿಗೆ ಸಮಾನವಾಗಿ ನೀರು ಹರಿಸುತ್ತಿಲ್ಲ ಎಂದರು. ಕೂಡಲೇ ಜಲಮಂಡಳಿಯ ಸಹಾಯಕ ಎಂಜಿನಿಯರ್‌ಗಳು ಪ್ರತಿ ವಾರ್ಡ್‌ಗೆ ತೆರಳಿ ನೀರಿನ ಸಮಸ್ಯೆ ಬಗ್ಗೆ ಸರ್ವೆ ನಡೆಸಬೇಕು. ಆದರೆ, ಅವರು ಸರ್ವೆ ನಡೆಸುತ್ತಿಲ್ಲ.

ಈ ಬಗ್ಗೆ ಕೂಡಲೇ ಸರ್ವೆ ನಡೆಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮೇಯರ್‌ಗೆ ಮನವಿ ಮಾಡಿದರು. ಮೇಯರ್‌ ಆರ್‌.ಸಂಪತ್‌ರಾಜ್‌ ಮಾತನಾಡಿ, ಸದಸ್ಯರು ಹೇಳಿದ ಎಲ್ಲ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. 

ರಾಜಕೀಯ ಮಾತನಾಡುವುದು ಬೇಡ: ಪಾಲಿಕೆ ಸಭೆ ಆರಂಭಕ್ಕೂ ಮೊದಲೇ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತ ವಿಜಯ್‌ಶಂಕರ್‌, ಸದಸ್ಯರಿಗೆ ಶಾಸನ ಬದ್ಧ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶವಿಲ್ಲ. ಜತೆಗೆ ರಾಜಕೀಯ ವಿಚಾರಗಳನ್ನು ಮಾತನಾಡಲು ಸಹ ಅವಕಾಶವಿಲ್ಲ. ಹೀಗಾಗಿ ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವಂತೆ ತಿಳಿಸಿದರು. 

ಜಲಮಂಡಳಿ ಅಧಿಕಾರಿಗಳು ಪ್ರತಿ ತಿಂಗಳು ಬಿಲ್‌ ಕೊಡಲು ಮನೆ ಮನೆಗೆ ಹೋಗುತ್ತಾರೆ. ಎಷ್ಟು ಮನೆಯಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗಿದೆ ಎಂಬ ವರದಿ ಸಿದ್ಧಪಡಿಸಿ ನೀಡುವಂತೆ ಸೂಚಿಸಿ.
-ಬಿ.ಎಸ್‌.ಸತ್ಯನಾರಾಯಣ, ಮಾಜಿ ಮೇಯರ್‌ 

ಒಳಚರಂಡಿ ನೀರನ್ನು ಜಲಮಂಡಳಿಯು ಪಾಲಿಕೆಯ ಮಳೆನೀರು ಕಾಲುವೆಗಳಿಗೆ ಹರಿಸುತ್ತಿದೆ. ಹೀಗಾಗಿ ಜಲಮಂಡಳಿ ಸಂಗ್ರಹಿಸುವ ಒಳಚರಂಡಿ ತೆರಿಗೆಯನ್ನು ಪಾಲಿಕೆಗೆ ನೀಡಬೇಕು.
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ

ಕೊಳವೆ ಬಾವಿಯಲ್ಲಿ ನೀರು ಬಂದರೂ, ಬರದಿದ್ದರೂ ಕೊಳವೆ ಬಾವಿ ಇರುವ ಮನೆಗಳಿಗೆ ಶುಲ್ಕ ಸಂಗ್ರಹ ಮಾಡಲಾಗುತ್ತಿರುವುದು ಸರಿಯಲ್ಲ. 
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ 

Advertisement

Udayavani is now on Telegram. Click here to join our channel and stay updated with the latest news.

Next