ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಹಿಡಿದಿರುವ “ಗ್ರಹಣ’ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಚುನಾವಣೆ ನಡೆದ ಕಡೆ ಜನಪ್ರತಿನಿಧಿಗಳ ಕೈಗೆ ಅಧಿಕಾರ ಸಿಕ್ಕಿಲ್ಲ. ಚುನಾವಣೆ ನಡೆಯಬೇಕಿರುವ ಕಡೆ ಇನ್ನೂ ಕಾನೂನು ವ್ಯಾಜ್ಯ ಬಗೆಹರಿಯುತ್ತಿಲ್ಲ. ಈ ನಡುವೆ ರಾಜ್ಯ ಚುನಾವಣಾ ಆಯುಕ್ತರು ಸೋಮವಾರ ನಿವೃತ್ತಿ ಹೊಂದಿದ್ದಾರೆ.
ಮಂಗಳವಾರದಿಂದ (ಜೂ.11) ರಾಜ್ಯ ಚುನಾವಣಾ ಆಯೋಗಕ್ಕೆ ಮುಖ್ಯಸ್ಥರು ಇಲ್ಲದಂತಾಗುತ್ತದೆ. ಹೀಗಿರುವಾಗ ಯಾವುದೇ ಚುನಾವಣೆ ಪ್ರಕ್ರಿಯೆಗಳನ್ನು ನಡೆಸಲು ಬರುವುದಿಲ್ಲ. ಹೊಸ ಆಯುಕ್ತರ ನೇಮಕವಾಗುವವರೆಗೆ ಚುನಾವಣಾ ಸಂಬಂಧಿ ಎಲ್ಲ ಪ್ರಕ್ರಿಯೆಗಳು ಸ್ಥಗಿತಗೊಳ್ಳಲಿದ್ದು, ಸಂಪುಟ ಸಭೆಯಲ್ಲಿ ತೀರ್ಮಾನವಾಗಿ ಹೊಸದಾಗಿ ಆಯುಕ್ತರ ನೇಮಕಾತಿ ಆಗಬೇಕೆಂದರೆ ಕನಿಷ್ಠ ಒಂದು ತಿಂಗಳು ಸಮಯ ಹಿಡಿಯುತ್ತದೆ.
ರಾಜ್ಯ ಚುನಾವಣಾ ಆಯುಕ್ತರಾಗಿ 2014ರಿಂದ ಸೇವೆ ಸಲ್ಲಿಸುತ್ತಿದ್ದ ಪಿ.ಎನ್. ಶ್ರೀನಿವಾಸಾಚಾರಿ ಜೂ.10ಕ್ಕೆ ನಿವೃತ್ತರಾಗಿದ್ದಾರೆ. ನಿಯಮದಲ್ಲಿ 5 ವರ್ಷ ಅಧಿಕಾರವಧಿ ಪೂರ್ಣಗೊಂಡರೆ ಅಥವಾ 65 ವರ್ಷ ಮುಗಿದರೆ ಎಂದಿದೆ. ಅದರಂತೆ, 4 ವರ್ಷ ಎಂಟು ತಿಂಗಳು ಸೇವೆ ಸಲ್ಲಿಸಿರುವ ಶ್ರೀನಿವಾಸಾಚಾರಿ ಅವರಿಗೆ 65 ವರ್ಷ ಆಗಿರುವ ಹಿನ್ನೆಯೆಲ್ಲಿ ಅವರು ನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ನಿವೃತ್ತಿಯ ಬಗ್ಗೆ ಅವರು ಎರಡು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದರು, ಆದರೆ, ಸರ್ಕಾರ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.
ಇದರಿಂದಾಗಿ 2019ರ ಮಾರ್ಚ್ ಮತ್ತು ಜೂನ್‌ನಲ್ಲಿ ಅವಧಿ ಮುಕ್ತಾಯಗೊಂಡು ಸದ್ಯ ಚುನಾವಣೆ ನಡೆಯಲು ಬಾಕಿಯಿರುವ ರಾಜ್ಯದ 39 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗ್ರಹಣ ಹಿಡಿದಂತಾಗಿದೆ. ಈ 39 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 25 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೈಕೋರ್ಟ್ ಬೆಂಗಳೂರು ನ್ಯಾಯಪೀಠ ಹಸಿರು ನಿಶಾನೆ ತೋರಿಸಿದೆ. ಆದರೆ, ಕಲಬುರಗಿ ಮತ್ತು ಧಾರವಾಡ ನ್ಯಾಯಪೀಠದಲ್ಲಿ ಚುನಾವಣಾ ವ್ಯಾಜ್ಯ ಹೊಂದಿರುವ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಮಧ್ಯೆ ಆಯುಕ್ತರು ಸಹ ನಿವೃತ್ತರಾಗಿದ್ದಾರೆ. ಆಯುಕ್ತರಿಲ್ಲದೆ ಚುನಾವಣಾ ಅಧಿಸೂಚನೆ ಹೊರಡಿಸಲು ಬರುವುದಿಲ್ಲ.
ಸದ್ಯ ಚುನಾವಣೆ ಅನುಮಾನ?: ಎರಡನೇ ಹಂತದಲ್ಲಿ ಚುನಾವಣೆ ನಡೆಯಬೇಕಿದ್ದ ರಾಜ್ಯದ 103 ನಗರಸ್ಥಳೀಯ ಸಂಸ್ಥೆಗಳ ಪೈಕಿ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಇದ್ದ 39 ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯೋಗ ಮೇ 2ರಂದು ಅಧಿಸೂಚನೆ ಹೊರಡಿಸಿತ್ತು. 39 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಾದರೆ ಇನ್ನೂ ಕೆಲವು ನಗರ ಸ್ಥಳೀಯ ಸಂಸ್ಥೆಗಳ ಕಾನೂನು ವ್ಯಾಜ್ಯ ಇತ್ಯರ್ಥಗೊಂಡಿಲ್ಲ. ಈಗ ಆಯುಕ್ತರೇ ನಿವೃತ್ತರಾಗಿದ್ದಾರೆ. ಮೇಲಾಗಿ, ಈಗಷ್ಟೇ ಶೈಕ್ಷಣಿಕ ವರ್ಷ ಆರಂಭವಾಗಿದ್ದರಿಂದ 39 ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲಿ ಚುನಾವಣೆ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
10 ತಿಂಗಳಾದರೂ ಅಧಿಕಾರ ಸಿಕ್ಕಿಲ್ಲ: ಮೊದಲ ಹಂತದಲ್ಲಿ 2018ರ ಆಗಸ್ಟ್‌ನಲ್ಲಿ ರಾಜ್ಯದ 109 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು 10 ತಿಂಗಳಾದರೂ ಚುನಾಯಿತ ಜನಪ್ರತಿನಿಧಿಗಳ ಕೈಗೆ ಅಧಿಕಾರ ಸಿಕ್ಕಿಲ್ಲ. ಈ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸ್ಥಗಿತಗೊಂಡಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದು, ಸದ್ಯ ಹೈಕೋರ್ಟ್ ತಡೆ ನೀಡಿದೆ. ಈ ತಡೆ ತೆರವುಗೊಳಿಸಲು ಸರ್ಕಾರ ಅಷ್ಟೊಂದು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಈ ಬಗ್ಗೆ ವಿಚಾರಿಸಿದಾಗ “ಕೋರ್ಟ್ ಶೀಘ್ರ ತಡೆಯಾಜ್ಞೆ ತೆರವುಗೊಳಿಸುತ್ತದೆ’ ಎಂಬ ವಿಶ್ವಾಸವಿದೆ ಎಂದಷ್ಟೇ ಅಧಿಕಾರಿಗಳು ಹೇಳುತ್ತಾರೆ.
ನನ್ನ ಅಧಿಕಾರವಧಿ ಸೋಮವಾರಕ್ಕೆ (ಜೂ.10) ಮುಗಿದಿದೆ. ಆಯುಕ್ತರಿಲ್ಲದೆ ಯಾವುದೇ ಅಧಿಸೂಚನೆಗಳನ್ನು ಹೊರಡಿಸಲು ಬರುವುದಿಲ್ಲ. ನನ್ನ ನಿವೃತ್ತಿ ಬಗ್ಗೆ ಎರಡು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದೆ. ನಿಯಮದಂತೆ ಗರಿಷ್ಠ ಒಂದು ತಿಂಗಳಲ್ಲಿ ಖಾಲಿ ಹುದ್ದೆ ತುಂಬಬೇಕು.
-ಪಿ.ಎನ್. ಶ್ರೀನಿವಾಸಾಚಾರಿ, ನಿರ್ಗಮಿತ ರಾಜ್ಯ ಚುನಾವಣಾ ಆಯುಕ್ತ
* ರಫೀಕ್ ಅಹ್ಮದ್