Advertisement

ಊರಿಗೆ ಬಾರದ ಸಾರಿಗೆ, ಮಕ್ಕಳ ನಿತ್ಯ ಕಾಲ್ನಡಿಗೆ!

09:51 PM Sep 03, 2021 | Team Udayavani |

ಕಾರ್ಕಳ: ಜಪಾನ್‌ ದೇಶದಲ್ಲಿ ಒಬ್ಬ ವಿದ್ಯಾರ್ಥಿಗಾಗಿ ನಿತ್ಯವೂ ಒಂದು ರೈಲನ್ನೇ ಓಡಿಸಲಾಗುತ್ತಿತ್ತು. ನಮ್ಮಲ್ಲಿ ನೂರಾರು ವಿದ್ಯಾರ್ಥಿಗಳಿದ್ದರೂ ಶಾಲೆಗೆ ಹೋಗಲು ಬಸ್‌ ಇಲ್ಲದೆ ಪಾದಯಾತ್ರೆಯಲ್ಲೆ ಶಾಲೆಗೆ ಹೋಗುವ ಸ್ಥಿತಿಯಿದೆ.

Advertisement

ಕಾರ್ಕಳ ತಾ|ನ ಈದು ಪರಿಸರದ ಮಕ್ಕಳು ಶಾಲೆಗೆ ತೆರಳುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆಗೆ ಹೋಗಲು ವಾಪಸ್‌ ಮನೆ ತಲುಪಲು ಹತ್ತಾರು ಕಿ. ಮೀ. ದೂರ ದಾಟಿ ಹೋಗಬೇಕು. ಸೆ.1ರಿಂದ 9ರಿಂದ 12ನೇ ತರಗತಿ ತನಕ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ಮಕ್ಕಳು ಆರಂಭದಲ್ಲೇ ಸಮಸ್ಯೆಗೆ ಒಳಗಾಗಿದ್ದಾರೆ.

ಈದು ಗ್ರಾ.ಪಂ. ವ್ಯಾಪ್ತಿಯ ಮಾಪಾಲು, ಕನ್ಯಾಲ್‌, ಕುಂಟೊನಿ, ಕೂಡ್ಯೆ, ಗುಮ್ಮೆತ್ತು, ಮುಲಿಕೆರಪು, ನೂರಾಳ್‌ಬೆಟ್ಟು, ಲಾಮುದೆಲು, ಪೂಜಾಂಜೆ, ಕುಕ್ಕುಂಡಿ, ಚೇರೆ, ಪಿಜಿನಡ್ಕ, ಬಾರೆ, ಇಂಜಿನಡ್ಕ, ಮಂಗಳ ಫಾರ್ಮ್ ಈ ಪ್ರದೇಶಗಳ ಮಕ್ಕಳು ಸಮಸ್ಯೆ ಅನುಭವಿಸುತ್ತಿರುವವರು. ಪ್ರೌಢಶಾಲೆಗೆ 12 ಕಿ.ಮೀ. ದೂರದ ಹೊಸ್ಮಾರಿಗೆ, ಕಾಲೇಜಿಗೆ 35 ಕಿ.ಮೀ. ದೂರದ ಬಜಗೋಳಿಗೆ. ಉನ್ನತ ಶಿಕ್ಷಣ ಪಡೆಯಬೇಕಿದ್ದರೆ 40 ಕಿ.ಮೀ. ದೂರದ ಕಾರ್ಕಳಕ್ಕೆ ತೆರಳಬೇಕು. ಎಲ್ಲಿಗೆ ತೆರಳ ಬೇಕಿದ್ದರೂ ಹೊಸ್ಮಾರು ತನಕ ಬಂದೇ ಹೋಗಬೇಕು. ಈ ಪ್ರದೇಶಗಳಿಂದ
ಬರುವುದಕ್ಕೆ ಬಸ್‌ ವ್ಯವಸ್ಥೆಗಳಿಲ್ಲ.

ಗ್ರಾಮಕ್ಕೆ ಸಾರಿಗೆ ಬಸ್‌ ಇಲ್ಲದ ಕಾರಣ ವಿದ್ಯಾರ್ಥಿಗಳು ಜೀಪು, ಆಟೋ ಸೇರಿ ಬೇರೆ ವಾಹನದಲ್ಲಿ ತೆರಳಬೇಕಿದೆ. ದಿನದ ಮೂರು ಅವಧಿಯಲ್ಲಿ ಸೀಮಿತ ಸರ್ವಿಸ್‌ ಜೀಪುಗಳಿವೆ. ಅವು ತಪ್ಪಿದರೆ, ಪ್ರಯಾಣಿಕರು ತುಂಬಿದ್ದರೆ ಬಾಡಿಗೆ ವಾಹನವೇ ಗತಿ. ಜೀಪಿಗೆ, ಬಾಡಿಗೆ ವಾಹನಕ್ಕೆ ಹೆಚ್ಚು ಖರ್ಚಾಗುತ್ತದೆ. ಬಡ ಮಕ್ಕಳಿಗೆ ಪ್ರತೀ ದಿನ ಇಷ್ಟೊಂದು ಹಣ ಖರ್ಚು ಮಾಡಲು ಸಾಧ್ಯವಿಲ್ಲ.

ಬೆಳಗ್ಗೆ ಸರ್ವಿಸ್‌ ವಾಹನಗಳು ಸಿಗುತ್ತದೆ. ಈಗ ಕೋವಿಡ್‌ನಿಂದ ಶಾಲಾ ಕಾಲೇಜುಗಳು ಮಧ್ಯಾಹ್ನ ತನಕವಷ್ಟೇ ಇರುವುದು. ಕಡಿಮೆ ಸಂಖ್ಯೆಯ ಪ್ರದೇಶಕ್ಕೆ ತೆರಳುವ ಮಕ್ಕಳು ಸರ್ವಿಸ್‌ ವಾಹನ ಹೊರಡುವ ತನಕ ಹೊಸ್ಮಾರಿನಲ್ಲಿ ಕಾಯಬೇಕು. ಒಮ್ಮೊಮ್ಮೆ ಸಂಜೆವರೆಗೆ ಬಸ್‌ನಿಲ್ದಾಣದಲ್ಲಿ, ಅಂಗಡಿಗಳ ಮುಂದೆ ಕಾದು ನಿಲ್ಲುವ ಸ್ಥಿತಿಯೂ ಇದೆ.

Advertisement

ಇದನ್ನೂ ಓದಿ:ಅಂಟಾಲಿಯಾ ಪ್ರಕರಣ: ಮಾಜಿ ಪೊಲೀಸ್‌ ಅಧಿಕಾರಿ ಸೇರಿ 10 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಎಲ್ಲರಿಗೂ ಪಾದಯಾತ್ರೆಯೇ ದಾರಿ
ಈದು ಪರಿಸರದ ಗ್ರಾಮಾಂತರ ಪ್ರದೇಶಕ್ಕೆ ಹಿಂದೆ ಖಾಸಗಿ ಬಸ್‌ ಸೌಲಭ್ಯವಿತ್ತು. ರಸ್ತೆ ಸರಿಯಿಲ್ಲ ಎಂದು ಅವು ಸಂಚಾರ ನಿಲ್ಲಿಸಿದ್ದವು. ಅನಂತರದಲ್ಲಿ ರಸ್ತೆಗಳು ಅಭಿವೃದ್ಧಿಗೊಂಡಿವೆ. ಖಾಸಗಿ ಬಸ್‌ಗಳು ಈ ಭಾಗದ ಪ್ರದೇಶಗಳಿಗೆ ತೆರಳುವ ಮನಸ್ಸು ಮಾಡಿಲ್ಲ. ಗಾಮೀಣ ಸಾರಿಗೆಯಂತೂ ತಾ|ನಲ್ಲೆ ಇಲ್ಲ. ಎಲ್ಲರಿಗೂ ಪಾದಯಾತ್ರೆಯೇ ಗತಿ.

ಸರ್ವಿಸ್‌ ವಾಹನದಲ್ಲಿ ಇಂತಿಷ್ಟೆ ಪ್ರಯಾಣಿಕರನ್ನು ಕರೆದೊಯ್ಯಬೇಕು ಎನ್ನುವ ನಿಯಮವಿದೆ. ಸರ್ವಿಸ್‌ ವಾಹನದವರಿಗೆ ಮಿತಿಗಿಂತ ಹೆಚ್ಚು ಮಂದಿ ಪ್ರಯಾಣಿಕರನ್ನು ಕರೆದೊಯ್ಯದೆ ವಿಧಿಯಿಲ್ಲ. ಮಕ್ಕಳಿಗೂ ಹೆತ್ತ ವ‌ರಿಗೂ ಪ್ರಯಾಣ ಅನಿವಾರ್ಯ. ಕಿಕ್ಕಿರಿದು ತುಂಬಿದ ವಾಹನದಲ್ಲಿ ಪ್ರಯಾಣಿಸುವಾಗ ಸ್ವಲ್ಪ ಹೆಚ್ಚುಕಡಿಮೆ ಆದರೂ ಅನಾಹುತ ಆಗುವ ಸಾಧ್ಯತೆ ಇರುತ್ತದೆ. ಸರಕಾರ ಶಾಲೆ ಆರಂಭಿಸಿದ್ದರೂ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೇಗೆ ಬರಬೇಕು ಎನ್ನುವ ಬಗ್ಗೆ ಯೋಜಿಸಿಯೇ ಇಲ್ಲ ಎಂಬ ಆಕ್ರೋಶವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಅಭದ್ರತೆ
ಊರಿಗೆ ತೆರಳುವ ಸಮಯಕ್ಕೆ ಸರಿಯಾಗಿ ವಾಹನ ವ್ಯವಸ್ಥೆಗಳಿಲ್ಲದೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೊಸ್ಮಾರು ಬಸ್‌ ನಿಲ್ದಾಣದಲ್ಲಿ, ಅಂಗಡಿ ಮುಂದೆಲ್ಲ ವಿಶ್ರಾಂತಿ ಪಡೆಯುತ್ತಿರುತ್ತಾರೆ. ನಿಲ್ದಾಣದಲ್ಲಿ ಶುಚಿತ್ವ ಕೊರತೆ, ಶೌಚಾಲಯ ವ್ಯವಸ್ಥೆ ಇಲ್ಲದಿರುವುದು, ಕುಡುಕರ ಹಾವಳಿಯ ಮಧ್ಯೆ ಮಕ್ಕಳಿಗೆ ಅಭದ್ರತೆ ಕಾಡುತ್ತಿದೆ.

ಗುಂಡಿಯಲ್ಲಿ
ಬಿಎಸ್ಸೆನ್ನೆಲ್‌ ಟವರ್‌ !
ಈದು ಗ್ರಾ.ಪಂ.ಗೆ ಒಳಪಟ್ಟ ನೂರಾಲ್‌ಬೆಟ್ಟು, ಮುಳಿಕಾರು ಈ ಎರಡೂ ಗ್ರಾಮದಲ್ಲಿ ಮೊಬೈಲ್‌ ಸಿಗ್ನಲ್‌ ಸಮಸ್ಯೆಯಿದೆ. ಬಿಎಸ್ಸೆನ್ನೆಲ್‌ ಟವರಿದ್ದರೂ ಅದು ಗುಂಡಿ ಎನ್ನುವ ಸ್ಥಳದಲ್ಲಿ ಗುಂಡಿಯಲ್ಲಿದ್ದು ಸಿಗ್ನಲ್‌ ಆಸುಪಾಸಿನ ಎಲ್ಲ ಪ್ರದೇಶಕ್ಕೂ ದೊರಕುತ್ತಿಲ್ಲ. ಟವರ್‌ ಸಮಸ್ಯೆ ಕುರಿತು ಸ್ಥಳೀಯ ಸಂಪತ್‌ಕುಮಾರ್‌ ಜೈನ್‌ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಸ್ಥಳೀಯರ ಒತ್ತಾಯಕ್ಕೆ ಗುಮ್ಮೆತ್ತುವಿನಲ್ಲಿ ಖಾಸಗಿ ಟವರ್‌ ನಿರ್ಮಿಸಲಾಗಿತ್ತು. ಎರಡೂ ಸಮರ್ಪಕವಾಗಿಲ್ಲದೆ ಈ ಭಾಗದ ಮಕ್ಕಳ ಆನ್‌ಲೈನ್‌ ಕಲಿಕೆಗೂ ಸಮಸ್ಯೆಯಾಗುತ್ತಿದೆ.

ಪರಿಹಾರಕ್ಕೆ ಪ್ರಯತ್ನ
ಬಸ್‌ ಇಲ್ಲದೆ ಸಮಸ್ಯೆಯಾಗುತ್ತಿದೆ ನಿಜ. ಖಾಸಗಿಯವರು ನಷ್ಟದಲ್ಲಿ ಓಡಿಸಲು ಒಪ್ಪುತ್ತಿಲ್ಲ. ಗ್ರಾಮೀಣ ಸಾರಿಗೆಯಂತೂ ಇಲ್ಲ. ಪರಿಹಾರಕ್ಕೆ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದೇವೆ.
-ವಿಜಯಕುಮಾರ್‌ ಜೈನ್‌, ಉಪಾಧ್ಯಕ್ಷ
ಅಧ್ಯಕ್ಷ ಗ್ರಾ.ಪಂ. ಈದು

ನಡೆದೇ ಹೋಗಬೇಕು
ನಮಗೆ ನಿತ್ಯವೂ ಶಾಲೆಗೆ ಹೋಗುವುದಕ್ಕೆ ಬಸ್ಸೇ ಇಲ್ಲ. ಹೀಗಾಗಿ ನಡೆದುಕೊಂಡೇ ಹೋಗುತ್ತೇವೆ. ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪುವುದು ಕಷ್ಟವಾಗುತ್ತದೆ.
-ಚೈತ್ರಾ ಕೂಡ್ಯೆ, ವಿದ್ಯಾರ್ಥಿನಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next