Advertisement

ನಿಲ್ಲದ ಮಣಿಪುರ ಹಾಹಾಕಾರ -ಇಂದು ಮಣಿಪುರ ಶಾಸಕರಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ

09:43 PM Jun 17, 2023 | Pranav MS |

ಮಣಿಪುರ/ಕೋಲ್ಕತ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಹಿಂಸಾಚಾರಕ್ಕೆ ಕೊನೆಯೇ ಇಲ್ಲದಂತಾಗಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಿಜೆಪಿ ನಾಯಕರ ನಿವಾಸಗಳಿಗೆ ಬೆಂಕಿ ಹಚ್ಚುವ ಘಟನೆ ನಡೆದಿದ್ದರೆ, ಕಿಡಿಗೇಡಿಗಳ ಜತೆಗಿನ ಘರ್ಷಣೆಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ಆರ್‌.ಕೆ.ರಂಜನ್‌ ಸಿಂಗ್‌ ನಿವಾಸಕ್ಕೆ ಬೆಂಕಿ ಹಚ್ಚಿ ದಾಂಧಲೆ ನಡೆದ ಬೆನ್ನಲ್ಲೇ ಈ ಘಟನೆ ನಡೆದಿದೆ.

Advertisement

ಬಿಷ್ಣುಪುರ ಜಿಲ್ಲೆಯ ಕ್ವಾಕ್ತಾ ಎಂಬಲ್ಲಿ ಬಿಜೆಪಿ ನಾಯಕರೊಬ್ಬರ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸುವ ಯತ್ನ ನಡೆದಿದೆ. ಇದರ ಜತೆಗೆ ಶನಿವಾರ ಬೆಳಗ್ಗಿನ ಜಾವದವರೆಗೆ ಸ್ವಯಂಚಾಲಿತ ರೈಫ‌ಲ್‌ಗ‌ಳಿಂದ ಗುಂಡು ಹಾರಾಟವೂ ನಡೆದಿದೆ. ಇದಲ್ಲದೆ ಚುರಾಚಾಂದ್‌ಪುರ್‌ ಜಿಲ್ಲೆಯ ಕಂಗಾವಿ ಎಂಬಲ್ಲಿ ಸ್ಥಳೀಯ ಶಾಸಕರ ಮನೆಗೆ ನುಗ್ಗಲು ಯತ್ನಿಸಲಾಗಿದೆ.

ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಅಧಿಕಾರಿಮರಿಯುಂ ಶಾರದಾ ದೇವಿ ಅವರ ನಿವಾಸಕ್ಕೆ ಅಕ್ರಮವಾಗಿ ನುಗ್ಗುವ ಪ್ರಯತ್ನ ಮಾಡಲಾಗಿದೆ. ಆದರೆ, ಭೂಸೇನೆ ಮತ್ತು ಆರ್‌ಎಎಫ್ನ ಯೋಧರು ಅದನ್ನು ತಡೆದಿದ್ದಾರೆ. ಮಣಿಪುರ ವಿವಿ ಕ್ಯಾಂಪಸ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಜನರು ಗುಂಪು ಸೇರಿದ್ದ ಹಲವು ಘಟನೆಗಳು ನಡೆದಿವೆ. ಇಂಫಾಲ್‌ನ ಆಸ್ಪತ್ರೆಯೊಂದರ ಸಮೀಪ 1 ಸಾವಿರಕ್ಕೂ ಅಧಿಕ ಮಂದಿ ಸೇರಿ ದೊಂಬಿ ಎಬ್ಬಿಸಲು ಮುಂದಾಗುತ್ತಿರುವ ಬಗ್ಗೆ ಸುಳಿವು ಸಿಕ್ಕಿದ ಕೂಡಲೇ ಭೂಸೇನೆ, ಆರ್‌ಎಎಫ್ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿವೆ.

ಶಸ್ತ್ರಾಸ್ತ್ರ ಲೂಟಿಗೆ ಯತ್ನ: ಇಂಫಾಲ ಪಶ್ಚಿಮ ಜಿಲ್ಲೆಯ ಪೊಲೀಸ್‌ ಠಾಣೆಗೆ ನುಗ್ಗಿದ 300ರಿಂ0ದ 400 ಮಂದಿ ಜನರು ಅಲ್ಲಿ ಇದ್ದ ಶಸ್ತ್ರಾಸ್ತ್ರಗಳನ್ನು ದೋಚಲು ಪ್ರಯತ್ನ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು, ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಇಂದು ಪ್ರಧಾನಿ ಭೇಟಿ:
ಮಣಿಪುರ ವಿಧಾನಸಭೆಯ ಸ್ಪೀಕರ್‌ ತಾಕ್‌ಚೋಮ್‌ ಸತ್ಯವ್ರತ ಸಿಂಗ್‌ ನೇತೃತ್ವದಲ್ಲಿ ಹಲವು ಶಾಸಕರು ಭಾನುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂಫಾಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಚಿಸಲಾಗಿದ್ದ ಶಾಂತಿ ಸಮಿತಿಯ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ.

Advertisement

ಪರಿಸ್ಥಿತಿ ಸುಧಾರಿಸದಿದ್ದರೆ…
ಮಣಿಪುರದಲ್ಲಿ ಹಿಂಸಾ ಸ್ಥಿತಿಯನ್ನು ಸುಧಾರಿಸಲು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಆದ್ಯತೆ ನೀಡಲೇಬೇಕು. ಇಲ್ಲದಿದ್ದರೆ, ಆ ಪಕ್ಷದ ಜತೆಗೆ ಹೊಂದಿರುವ ಮೈತ್ರಿಯನ್ನು ಮರು ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾಷನಲ್‌ ಪೀಪಲ್‌ ಪಾರ್ಟಿ (ಎನ್‌ಪಿಪಿ)ಯ ಉಪಾಧ್ಯಕ್ಷ ಮತ್ತು ನಿವೃತ್ತ ಡಿಜಿಪಿ ಯುಮ್‌ನಾಮ್‌ ಜಯಕುಮಾರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮೌನ ಪ್ರೇಕ್ಷಕರಾಗಿ ಇರಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ರಾಜ್ಯದಲ್ಲಿನ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ರಾಜ್ಯ ಸರ್ಕಾರ ಜನರ ರಕ್ಷಣೆ ಮಾಡುವಲ್ಲಿ ವಿಫ‌ಲಗೊಂಡಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next