Advertisement

ನಿಲ್ಲದ ಚಿರತೆ ಕಾಟ…;ಕಂಗಾಲಾದ ಕೊರಟಗೆರೆ ತಾಲೂಕಿನ ಜನತೆ

07:07 PM Jan 12, 2023 | Team Udayavani |

ಕೊರಟಗೆರೆ : ಕಳೆದ ಒಂದು ತಿಂಗಳಿನಿಂದ ಚಿರತೆಗಳ ಕಾಟ ತಾಲೂಕಿನಾದ್ಯಂತ ಹೆಚ್ಚಾಗಿ ಕಂಡುಬರುತ್ತಿದ್ದು ಕಾಡಿನಿಂದ ಚಿರತೆಗಳು ನಾಡಿಗೆ ಬರುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ.

Advertisement

ಕಳೆದ ತಿಂಗಳಿನಲ್ಲಿ ತಾಲೂಕಿನ ಇರಸಂದ್ರ ಕಾಲೋನಿಯಲ್ಲಿ ಚಿರತೆಗಳ ಕಾಟದಿಂದ ಇಬ್ಬರು ಮಕ್ಕಳು,ಇಬ್ಬರು ಹಿರಿಯರ ಮೇಲೆ ದಾಳಿ ನಡೆಸಿತ್ತು, ನಂತರ ಕಳೆದ ವಾರದಲ್ಲಿ ಕೊರಟಗೆರೆ ಪಟ್ಟಣದ ಬಸವನ ಬೆಟ್ಟದಲ್ಲಿ ಒಂದು ತಿಂಗಳಿನಿಂದ  ಜಾನುವಾರುಗಳನ್ನು ತಿನ್ನುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಕೊರಟಗೆರೆ ತಾಲೂಕಿಗೆ ಹೊಂದಿಕೊಂಡಂತೆ ತಿಮ್ಮಲಾಪುರ ಅರಣ್ಯ ಪ್ರದೇಶ ಮತ್ತು ದೇವರಾಯನ ದುರ್ಗ ಪ್ರದೇಶಗಳಿದ್ದು,  ಚಿರತೆಗಳ ಮತ್ತು ಕರಡಿಗಳ ಸಂತತಿ ಹೆಚ್ಚಿದ್ದು, ಆಹಾರ ಅರಸಿ ನಾಡಿಗೆ ಬರುವುದು ಮಾಮೂಲಿಯಾಗಿದ್ದು ಇತ್ತೀಚೆಗೆ ವಾತಾವರಣದಲ್ಲಿ ವ್ಯತಿರಿಕ್ತ ಪರಿಣಾಮವಾಗಿ ಮಾಘ ಮಾಸದಲ್ಲಿ ಹೆಚ್ಚಿನ ರಾತ್ರಿ ಅವಧಿ ಇರುವುದರಿಂದ ಚಿರತೆಗಳು ನಾಡಿಗೆ ಬರುವುದು ಹೆಚ್ಚಾಗಿದೆ.

ತಾಲೂಕಿನ ಹೊಳವನಹಳ್ಳಿ ಹೋಬಳಿಯ,ಸೋಂಪುರ ಗ್ರಾಮದ ಕೆರೆಯ ಸುತ್ತಮುತ್ತಲಿನ ಕಳೆದ 4 ದಿನಗಳಿಂದ ರೈತರ  ಜಮೀನುಗಳಲ್ಲಿ ಚಿರತೆಯ ಓಡಾಡಿರುವಂತಹ ಹೆಜ್ಜೆ ಗುರುತುಗಳು ಗ್ರಾಮಸ್ಥರ ನಿದ್ದೆಗೆಡಿಸಿದ್ದು ಗ್ರಾಮಸ್ಥರು ಮನೆಯಿಂದ ಹೊರ ಬರಲು  ಭಯಭೀತರಾಗಿದ್ದಾರೆ.

ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರನ್ನು  ಗ್ರಾಮಸ್ಥರು ಭೇಟಿಮಾಡಿ ಸಮಸ್ಯೆಯ ಬಗ್ಗೆ ವಿವರಿಸಿದ್ದ ಹಿನ್ನೆಲೆಯಲ್ಲಿ  ಗ್ರಾಮಸ್ಥರ ಜೊತೆಯಲ್ಲಿ  ಸೋಂಪುರ ಗ್ರಾಮದ ರೈತ ವಿಶ್ವೇಶ್ವರಯ್ಯರವರ ಜಮೀನಿಗೆ ಭೇಟಿಕೊಟ್ಟು ಅಲ್ಲಿ ಪತ್ತೆಯಾದ ಹೆಜ್ಜೆ ಗುರುತುಗಳನ್ನು ಕಂಡು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಆದಷ್ಟು ಬೇಗ ಚಿರತೆ ಸೆರೆಹಿಡಿಯಲು ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿರುವ ಘಟನೆ ನಡೆದಿದೆ.

Advertisement

ಅರಣ್ಯ ಇಲಾಖೆಗೆ ಏನು ಮಾಡುತ್ತಿದೆ ?

ನಿರಂತರವಾಗಿ ತಾಲೂಕಿನ ಒಂದಿಲ್ಲೊಂದು ಭಾಗದಲ್ಲಿ ಚಿರತೆಗಳ ಓಡಾಟ ಮತ್ತು ದಾಳಿಗಳು ಕಾಣಸಿಗುತ್ತಿದ್ದು ಅರಣ್ಯ ಇಲಾಖೆ ಇನ್ನೂ ದಾಳಿ ಮಾಡಿದ ಸಂದರ್ಭದಲ್ಲಿ, ಗ್ರಾಮಸ್ಥರ ಮನವಿಗೆ ಬೋನುಗಳನ್ನು ಇಡುತ್ತಾರೆ ಆದರೆ ಎರಡು ಮೂರು ದಿನವಾದ ನಂತರ ತೆಗೆದುಕೊಂಡು ಹೋಗುತ್ತಾರೆ ತಾಲೂಕಿನಲ್ಲಿ ಇಲ್ಲಿಯವರೆಗೆ ಎರಡು ಚಿರತೆ ಮಾತ್ರ ಸೆರೆ ಸಿಕ್ಕಿದ್ದು 5 ಕ್ಕೂ ಚಿರತೆಗಳು ಕೊರಟಗೆರೆ ಪಟ್ಟಣದ ಸನಿಹದ ಬಸವನ ಬೆಟ್ಟದಲ್ಲಿಯೇ ಇವೆ ಎಂದು ರೈತರು ಹೇಳುತ್ತಿದ್ದು ರೈತರಿಗೆ ಕೇವಲ ಒಂದು ಚಿರತೆಯನ್ನು ಹಿಡಿದರೆ  ಸಾಲದು ಇವುಗಳಿಂದ ನಮಗೆ ರಕ್ಷಣೆ ಬೇಕು ಎಂದು ಅವಲತ್ತುಕೊಳ್ಳುತ್ತಿದ್ದಾರೆ.

ಹೆಚ್ಚಾಗಿ ಚಿರತೆಗಳು ಹಿಂದೆ ಕೆರೆಯ ಪೊದೆಗಳಲ್ಲಿ ವಾಸ ಮಾಡುತ್ತಿದ್ದವು. ಇತ್ತೀಚೆಗೆ ಮಳೆ ಹೆಚ್ಚಾಗಿ ಬಹುತೇಕ ಕೆರೆಗಳು ನೀರಿನಿಂದ ತುಂಬಿದ್ದು ಚಿರತೆಗಳು ಕೆರೆ ಪೊದೆಗಳ ಆಶ್ರಯ ಇಲ್ಲದಂತಾಗಿದ್ದು ಇವುಗಳು ಹಳ್ಳಿಗಳ ಸನಿಹದಲ್ಲಿರವಂತಹ ಪೊದೆಗಳಲ್ಲಿ ವಾಸ ಮಾಡಲು ಪ್ರಾರಂಭಿಸಿದ್ದು ಎಲ್ಲಿಯಾದರೂ ಹೊಂದಿಕೊಂಡು ಬದುಕುವಂತಹ ಸ್ವಭಾವ ಚಿರತೆ ಇರುವುದರಿಂದ ಅವು ಎಲ್ಲೆಡೆ ಬದುಕುತ್ತಿದ್ದು ಇದರ ಜೊತೆಗೆ ವರ್ಷಕ್ಕೆ ಚಿರತೆ  ಎರಡು ಬಾರಿ ತಲಾ ಎರಡೆರಡು ಮರಿ ಹಾಕುವುದರಿಂದ ಚಿರತೆಗಳ ಸಂತತಿ ಹೆಚ್ಚುತ್ತಿದ್ದು ಇದರಿಂದ ಚಿರತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ತಾಲೂಕು ಬಹುತೇಕ ಅರಣ್ಯ ಪ್ರದೇಶಗಳಿಂದ ಸುತ್ತು ವರೆದಿದೆ.ಹಿರೇಬೆಟ್ಟ, ಕುರಂಕೋಟೆ, ಮಿಂಚಗಲ್ಲು, ದೊಡ್ಡವಾಡಿ, ಕವರಗಲ್ಲು, ಸೋಳೇಕಲ್ಲು, ಸೇರಿದಂತೆ ತಿಮ್ಮಲಾಪುರ, ದೇವರಾಯನ ದುರ್ಗ  ಅರಣ್ಯದಲ್ಲಿ ಹೆಚ್ಚಾಗಿ ಚಿರತೆಗಳು ಕಂಡು ಬರುತ್ತಿದೆ ನಮ್ಮಲ್ಲಿ 4 ಬೋನುಗಳು ಇದ್ದು ಎಲ್ಲಿ ಜನರಿಗೆ ಚಿರತೆ ಇರುವ ಮಾಹಿತಿ ಸಿಕ್ಕಿದರೆ ಅಲ್ಲಿ ಇರುವಂತಹ ಪ್ರಯತ್ನ ಮಾಡುತ್ತಿದ್ದೇವೆ ಈಗಾಗಲೇ ಎರಡು ಚಿರತೆಗಳನ್ನು ಹಿಡಿದಿದ್ದೇವೆ ಸಾರ್ವಜನಿಕರು ಇವಕ್ಕೆ ಹೆದರದೇ ಇರಬೇಕು ಇವು ದಿನಕ್ಕೆ 10 ರಿಂದ 20 ಮೀ ಸಂಚಾರ ಮಾಡುತ್ತವೆ. ಯಾರು ಹೆದರುವ ಅವಶ್ಯಕತೆಯಿಲ್ಲ.-ಸುರೇಶ್, ಸಹಾಯಕ ನಿರ್ದೇಶಕ ವಲಯ ಅರಣ್ಯಾಧಿಕಾರಿ, ಕೊರಟಗೆರೆ

ನಾವು ನಿತ್ಯ ಕೃಷಿ ಕೆಲಸಕ್ಕೆ ಹೋಗುತ್ತೇವೆ. ಈ ಚಿರತೆಗಳ ದಾಳಿಯನ್ನು ಎಲ್ಲೆಡೆ ನೋಡುತ್ತಿದ್ದರೆ ನಮಗೆ ಭಯವಾಗುತ್ತದೆ ನಮಗೆ ಅರಣ್ಯ ಇಲಾಖೆಯವರು ಇವುಗಳನ್ನು ನಿಯಂತ್ರಿಸುವಂತಹ ಅಥವಾ ಬೇರೆಡೆಗೆ ಸ್ಥಳಾಂತರಿಸುವ ಇತರೆ ಯಾವುದಾರೂ ಮಾರ್ಗೋಪಾಯಗಳನ್ನು ಕಂಡು ಹಿಡಿದು ನಮಗೆ ಇವುಗಳ ಉಪಟಳದಿಂದ ಮುಕ್ತಿ ಕೊಡಬೇಕಿದೆ.-ರಾಮಣ್ಣ, ರೈತ, ಸೋಂಪುರ

ವರದಿ-ಸಿದ್ದರಾಜು. ಕೆ ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next