Advertisement

ಬಗೆಹರಿದಿಲ್ಲ ಸಮಸ್ಯೆ; ಅಂತ್ಯವಾಗದ ಹೋರಾಟ

09:08 PM Sep 08, 2022 | Shwetha M |

ಮುದ್ದೇಬಿಹಾಳ: ಪುರಸಭೆ ಕಚೇರಿ ಎದುರು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ಪ ಶಿವಪುರ ಮತ್ತು ಸದಸ್ಯ ಮಹೆಬೂಬ ಗೊಳಸಂಗಿ ಅವರು ಮುಖ್ಯಾಧಿಕಾರಿ ಅಮಾನತ್ತುಗೊಳಿಸುವುದೂ ಸೇರಿ 12 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು. 19ರಿಂದ ನಡೆಸುತ್ತಿರುವ ವಿವಿಧ ಹಂತಗಳ ಧರಣಿ ಅಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ.

Advertisement

ಬುಧವಾರ ಸಂಜೆ ಧರಣಿ ಅಂತ್ಯಗೊಳ್ಳುವ ಭರವಸೆಯೊಂದಿಗೆ ಇಲ್ಲಿಗೆ ಆಗಮಿಸಿದ್ದ ವಿಜಯಪುರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ಅವರು ಧರಣಿ ನಿರತರ ಬೇಡಿಕೆಯಂತೆ ತನಿಖಾ ವರದಿ ಮತ್ತು ಧರಣಿ ಅಂತ್ಯಗೊಳಿಸುವ ಉಲ್ಲೇಖಗಳ ಪತ್ರವನ್ನು ಧರಣಿ ನಿರತರಿಗೆ ಹಸ್ತಾಂತರಿಸಿ ಧರಣಿ ಅಂತ್ಯಕ್ಕೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸದ ಧರಣಿ ನಿರತರು ಮುಖ್ಯಾಧಿಕಾರಿ ಅಮಾನತು ಇಲ್ಲವೆ ಅವರನ್ನು ಇಲ್ಲಿಂದ ಬೇರೆ ಕಡೆ ನಿಯೋಜನೆಗೊಳಿಸುವ ಪತ್ರ ಕೊಟ್ಟಲ್ಲಿ ಮಾತ್ರ ಧರಣಿ ಕೈಬಿಡುವುದಾಗಿ ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಡಂಬಳ ಅವರು ಸೋಮವಾರ ನಾನು ಇಲ್ಲಿಗೆ ಬಂದಿದ್ದಾಗ ತನಿಖಾ ವರದಿ ಕೊಟ್ಟರೆ ಧರಣಿ ಅಂತ್ಯಗೊಳಿಸುವುದಾಗಿ ತಿಳಿಸಿದ್ದರಿಂದ ನಾನು ತನಿಖಾ ವರದಿ ಸಮೇತ ಇಲ್ಲಿಗೆ ಇಂದು ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ನಮಗೆ ಸರ್ಟಿಫೈಡ್‌ ಕಾಪಿ ಬೇಕು, ಡಿಎಂಇ ಅವರಿಂದ ಮುಖ್ಯಾಧಿಕಾರಿ ವಿರುದ್ಧ ಕೈಗೊಂಡ ಕ್ರಮದ ಕುರಿತು ಸ್ಪಷ್ಟ ಮಾಹಿತಿ ಬೇಕು. ಅಂದರೆ ಮಾತ್ರ ಧರಣಿ ಅಂತ್ಯಗೊಳಿಸುತ್ತೇವೆ ಎಂದು ಪಟ್ಟು ಹಿಡಿದರು.

Advertisement

ಡಂಬಳ ಅವರ ಧರಣಿ ನಿರತರಿಗೆ ತನಿಖಾ ವರದಿ ಹಸ್ತಾಂತರಿಸಿದರೂ, ಧರಣಿ ಅಂತ್ಯಗೊಳಿಸಲು ಬಹು ಹೊತ್ತಿನವರೆಗೆ ಹಗ್ಗ ಜಗ್ಗಾಟ ನಡೆದರೂ ಸ್ಪಂದನೆ ಸಿಗದ ಕಾರಣ ಮತ್ತೂಮ್ಮೆ ಅವರು ಬಂದ ದಾರಿಗೆ ಸುಂಕವಿಲ್ಲದಂತೆ ಸ್ಥಳದಿಂದ ನಿರ್ಗಮಿಸಿದರು. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರಾದ ಮಹ್ಮದರಫೀಕ್‌ ದ್ರಾಕ್ಷಿ, ಅಲ್ಲಾಭಕ್ಷ ಢವಳಗಿ, ಡಿಎಸ್‌ ಎಸ್‌ ಮುಖಂಡ ಹರೀಶ ನಾಟೀಕಾರ, ಮುಖಂಡರಾದ ಕಾಮರಾಜ ಬಿರಾದಾರ, ಹುಸೇನ್‌ ಮುಲ್ಲಾ, ಸದಾಶಿವ ಮಠ, ಸಂಗಪ್ಪ ಮೂಲಿಮನಿ, ರಾಜು ವಡ್ಡರ, ಯಾಸೀನ ಅತ್ತಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next