ಬಳ್ಳಾರಿ: ಮಹಾನಗರ ಪಾಲಿಕೆ ಮೇಯರ್ ಆಯ್ಕೆ ದಿನಕ್ಕೊಂದು ವಿವಾದಕ್ಕೀಡಾಗುತ್ತಿದ್ದು, ಇದರಿಂದ ಬೂದಿಮುಚ್ಚಿದ ಕೆಂಡದಂತಿರುವ ಸದಸ್ಯರಲ್ಲಿನ ಅಸಮಾಧಾನ ಮೇ 18ರಂದು ನಡೆಯಲಿರುವ ಮೊದಲ ಸಾಮಾನ್ಯ ಸಭೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅತೃಪ್ತ ಸದಸ್ಯರು ಷರತ್ತಿನ ಮೇರೆಗೆ ಸಭೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿರುವ ಜಿಲ್ಲಾ ಕಾಂಗ್ರೆಸ್, ಮೇಯರ್ ಆಯ್ಕೆಯಿಂದ ಸದಸ್ಯರಲ್ಲಿ ಮೂಡಿರುವ ಅಸಮಾ ಧಾನವನ್ನು ಶಮನ ಮಾಡುವಲ್ಲಿ ವಿಫಲವಾಗಿದೆ. ಹಿಂದೆ ಸಾಮಾನ್ಯಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನದ ಆಕಾಂಕ್ಷಿಗಳಿಗೆ ಮೀಸಲಾತಿ ಬದಲಾವಣೆಯಿಂದ ಕೈತಪ್ಪಿದ್ದರೂ, ಹಾಲಿ ಮೇಯರ್ ಆಯ್ಕೆ ಮಾಡುವಾಗ ಅತೃಪ್ತ ಸದಸ್ಯರು ಸೂಚಿಸಿದ ಮೂವರು ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ.
ಇದರಿಂದ ಬೇಸತ್ತಿದ್ದ 6ನೇ ವಾರ್ಡ್ ಸದಸ್ಯೆ ಪದ್ಮರೋಜಾ ಮತ್ತವರ ಪತಿ ಎಂ. ವಿವೇಕಾನಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮುನ್ನ ಅತೃಪ್ತ ಸದಸ್ಯರು ಪಕ್ಷದ ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಅತೃಪ್ತ ಸದಸ್ಯರ ಅಸಮಾಧಾನ ಶಮನಗೊಳ್ಳದಿರಲು ಕಾರಣವಾಗಿದೆ. ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರಿಗೆ ಸಾಮಾನ್ಯ ಸಭೆ ಸುಗಮವಾಗಿ ನಡೆಯಬೇಕಿದೆ.
ಸ್ಥಾಯಿ ಸಮಿತಿ ಅಧ್ಯಕ್ಷಗಿರಿಗೆ ಪಟ್ಟು
ಮೇಯರ್‌ಗಿರಿ ಕಳೆದುಕೊಂಡಿರುವ ಅತೃಪ್ತಿಯಲ್ಲಿರುವ ಬಳ್ಳಾರಿ ನಗರ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ಸದಸ್ಯರು ಇದೀಗ ಮೂರೂ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ತಮ್ಮವರಿಗೆ ನೀಡಬೇಕು ಎಂಬ ಷರತ್ತು ವಿಧಿ ಸಿದ್ದಾರೆ. ಸಾಮಾನ್ಯ ಸಭೆಯ ಅಜೆಂಡಾಗಳು ಚರ್ಚೆಗೆ ಬರುವ ಮುನ್ನವೇ ಈ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ವಿಚಾರ ನಿರ್ಧಾರ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪಾಲಿಕೆ ಕಚೇರಿಯಲ್ಲಿಯೇ ರಾತ್ರಿ ಸಭೆ ನಡೆಸಿರುವ ಅತೃಪ್ತ ಸದಸ್ಯರು ನಗರ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ 26ನೇ ವಾರ್ಡ್‌ನ ಡಿ. ಸುಕುಮ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ 8ನೇ ವಾರ್ಡ್‌ನ ರಾಮಾಂಜಿನೇಯಲು, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ 5ನೇ ವಾರ್ಡ್‌ನ ರಾಜಶೇಖರ್ ಅವರನ್ನು ಆಯ್ಕೆಮಾಡಬೇಕು ಎಂಬ ಬೇಡಿಕೆಯನ್ನು ಮೇಯರ್, ಶಾಸಕ ಬಿ. ನಾಗೇಂದ್ರ ಅವರಿಗೆ ನೀಡಲಾಗಿದೆ. ಅದರಂತೆ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿದರಷ್ಟೇ ಅತೃಪ್ತ ಸದಸ್ಯರು ಪಾಲಿಕೆ ಸಭಾಂಗಣದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲವಾದರೆ ಸಾಮಾನ್ಯ ಸಭೆಯಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇತ್ತ ಮೇಯರ್, ಶಾಸಕ ಸಹಿತ ಈ ಪಟ್ಟಿಗೆ ಬಹುತೇಕ ಒಪ್ಪಿಗೆ ಸೂಚಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಿಳಿದು ಬಂದಿದೆ.
ಆಸೀಫ್ ನಡೆ ನಿಗೂಢ
ಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್ ಮುಖಂಡ ಟಿ.ಜಿ. ಎರ್ರಿಸ್ವಾಮಿ ಎನ್ನುವವರಿಗೆ 3.5 ಕೋಟಿ ರೂ. ನೀಡಿರುವುದಾಗಿ ಆರೋಪಿಸಿ ದೂರು ನೀಡಿರುವ 30ನೇ ವಾರ್ಡ್ ಸದಸ್ಯ ಎನ್.ಎಂ.ಡಿ.ಆಸೀಫ್ ಅವರು ಮೇ 18ರ ಮೊದಲ ಸಾಮಾನ್ಯ ಸಭೆಗೆ ಬರುತ್ತಾರಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅಲ್ಲದೆ ಪೊಲೀಸ್ ಇಲಾಖೆ ನೀಡಿರುವ ನೋಟಿಸ್‌ನ ಗಡುವು ಸಹ ಮುಗಿದಿದೆ. ಹಣ ಪಡೆದ ಆರೋಪ ಹೊತ್ತ ಟಿ.ಜಿ. ಎರ್ರಿಸ್ವಾಮಿ ಮತ್ತು ಆಸೀಫ್ ನಡುವೆ ಮಾತುಕತೆಗಳು ನಡೆದಿದ್ದು, ಎಲ್ಲವೂ ಶೀಘ್ರದಲ್ಲೇ ಸುಖಾಂತ್ಯ ಕಾಣಲಿದೆ ಎಂಬ ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿಬರುತ್ತಿದ್ದು, ಸದ್ಯ ಆಸೀಫ್ ನಡೆ ಕುತೂಹಲ ಮೂಡಿಸಿದೆ.
ನಾವು (ಅತೃಪ್ತ ಸದಸ್ಯರು) ಸೂಚಿಸುವ ಮೂವರು ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಮೇಯರ್, ಶಾಸಕರು ಭರವಸೆ ನೀಡಿದ್ದಾರೆ. ಮೇ 18ರಂದು ಮೊದಲು ಬೇಡಿಕೆ ಈಡೇರಿದ ಬಳಿಕವೇ ಸಾಮಾನ್ಯ ಸಭೆ ನಡೆಸಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಎಲ್ಲ ಅಸಮಾಧಾನವೂ ಶಮನವಾಗಿದೆ.
–ಪ್ರಭಂಜನ್ ಕುಮಾರ್ 3ನೇ ವಾರ್ಡ್ ಸದಸ್ಯರು ಬಳ್ಳಾರಿ