Advertisement

Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.

08:35 AM Nov 20, 2024 | Team Udayavani |

ಬೆಳ್ತಂಗಡಿ: ಪಟ್ಟಣದಲ್ಲಿ ಈಗಾಗಲೇ ದ್ರವ ತ್ಯಾಜ್ಯ ಸಂಸ್ಕರಣೆ ಘಟಕವಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಬಳಸಿದ ನೀರನ್ನು ಶುದ್ಧೀಕರಣ ಮಾಡಿ ಮರುಬಳಕೆ ಮಾಡುವ ಸಲುವಾಗಿ ಅಮೃತ ನಗರೋತ್ಥಾನ ಯೋಜನೆಯಡಿ 1.18 ಕೋ.ರೂ. ಮೀಸಲಿರಿಸಲು ಚಿಂತಿಸಲಾಗಿದೆ ಎಂದು ಅಧ್ಯಕ್ಷ ಜಯಾನಂದ ಗೌಡ ತಿಳಿಸಿದರು.

Advertisement

ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಸಭಾಂಗಣದಲ್ಲಿ ನ.19ರಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದಸ್ಯ ಜಗದೀಶ್‌ ಡಿ. ಪಟ್ಟಣ ಪಂಚಾಯತ್‌ ಘನತ್ಯಾಜ್ಯ ಘಟಕದ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿ, ಪ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲ. ಆದರೆ ಅರಳಿಯ ಘನತ್ಯಾಜ್ಯ ಘಟದಲ್ಲಿ ಪ್ರತೀ ವರ್ಷ ಕಸ ದೂಡಲು 3 ಲಕ್ಷ ರೂ. ಇರಿಸುತ್ತೀರಿ. ಆದರೆ ಸಿಬಂದಿ ಕೊರತೆಯಿಂದಾಗಿ ಕಸವನ್ನು ಸರಿಯಾಗಿ ವಿಲೇ ಮಾಡುತ್ತಿಲ್ಲ. ಸರಕಾರದ ಹಣ ಪೋಲಾಗುತ್ತಿದೆ. ಇಲ್ಲಿ 6 ಮಂದಿ ನೌಕರರಲ್ಲಿ 4 ಮಂದಿ ಮಾತ್ರ ಇದ್ದಾರೆ. ಆದರೆ ವೇತನ ಆರು ಮಂದಿಗೆ ಆಗುತ್ತಿದೆ. ಕಸಕ್ಕೆ ಬೆಂಕಿ ಇಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಮುಖ್ಯಾಧಿಕಾರಿ ರಾಜೇಶ್‌ ಕೆ. ಪ್ರತಿಕ್ರಿಯಿಸಿ, ಘನತ್ಯಾಜ್ಯ ಘಟಕದಲ್ಲಿ ಕಸ ವಿಲೇಗೆ ಜಾಗದ ಸಮಸ್ಯೆಯಿದ್ದು, ಇದರ ವಿಸ್ತರಣೆಗೆ ಅನುದಾನ ಬಂದಿದೆ. ಕಸವನ್ನು ಸಮರ್ಪಕ ನಿರ್ವಹಣೆ ಮಾಡಲಾ ಗುತ್ತಿದೆ. ಆರು ಮಂದಿ ಕೆಲಸಗಾರರಿದ್ದು, ನಿರ್ವಹಣೆ ಟೆಂಡರ್‌ನಲ್ಲಿ ವಹಿಸಿಕೊಂಡವರು ಹಸಿ ಮತ್ತು ಒಣ ಕಸ ಪ್ರತ್ಯೇಕಿಸುತ್ತಾರೆ. ಅವರು ತಿಂಗಳಿಗೆ 16 ಸಾವಿರ ರೂ. ಕೊಡುತ್ತಿದ್ದಾರೆ ಎಂದರು.

ಬೆಳ್ತಂಗಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಮೆಸ್ಕಾಂ ಹಳೆ ವಿದ್ಯುತ್‌ ಲೈನ್‌ ತೆರವು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

Advertisement

ಉಪಾಧ್ಯಕ್ಷೆ ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷ ಶರತ್‌ಕುಮರ್‌, ಎಂಜಿನಿಯರ್‌ ಮಹಾವೀರ ಹಾಗೂ ಸದಸ್ಯರು, ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು.

ಪ್ಲಾಸ್ಟಿಕ್‌ ನಿಷೇಧ
ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧಿಸುವ ಕುರಿತು ಚರ್ಚೆನ ನಡೆಯಿತು. ಈಗಾಗಲೇ ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ ಬಗ್ಗೆ ಜನರಲ್ಲಿ ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಪ್ರತೀ ಮನೆಗಳಿಗೆ ಬಟ್ಟೆ ಚೀಲಗಳನ್ನು ಕೊಡುವ ವ್ಯವಸ್ಥೆ ಪಂಚಾಯತ್‌ನಿಂದ ಮಾಡಲಾಗುವುದು. ಇದಕ್ಕೆ 1.15 ಲಕ್ಷ ರೂ. ಇರಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸದಸ್ಯರು ಪ್ರತಿಕ್ರಿಯಿಸಿ ಪ್ಲಾಸ್ಟಿಕ್‌ ಚೀಲಗಳನ್ನು ಮಾರಾಟ ಮಾಡುವವರಿಗೂ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು. ಪ್ಲಾಸಿಕ್‌ ಬ್ಯಾಗ್‌ ಮಾರಾಟ ಮಾಡುವವರು ಬಟ್ಟೆ ಚೀಲ ಮಾರಾಟ ಮಾಡುವಂತೆ ಅವರಲ್ಲಿ ಮನವರಿಕೆ ಮಾಡುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.

ರುದ್ರಭೂಮಿಗೆ ಮರುಜೀವ ನೀಡಿ
ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ರುದ್ರಭೂಮಿಗಳ ಅವ್ಯವಸ್ಥೆ ಹೆಚ್ಚಿದೆ. ಪಟ್ಟಣದಕ್ಕೆ 40 ಲಕ್ಷ ರೂ. ಇರಿಸಲಾಗಿದ್ದು, ಕ್ರಿಯಾಯೋಜನೆ ಆಗಿದೆ ಎನ್ನಲಾಗುತ್ತಿದೆ. ಅನುದಾನ ಕಡಿಮೆ ಇದ್ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮನವಿ ಸಲ್ಲಿಸೋಣ ಎಂದು ಸದಸ್ಯ ಜಗದೀಶ್‌ ಹೇಳಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಟೆಂಡರ್‌ ಆಗಿದೆ. ಜಿಲ್ಲಾಧಿಕಾರಿ ಹಂತದಲ್ಲಿದ್ದು, ಲಾಗಿನ್‌ ಆದ ಕೂಡಲೇ ಕಾಮಗಾರಿ ನಡೆಸುವುದಾಗಿ ತಿಳಿಸಿದೆ.

ಜನರೇಟರ್‌ ನಿರುಪಯುಕ್ತ
ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಜನರೇಟರ್‌ ಇದೆ. ಅದು ಕಾರ್ಯನಿರ್ವಹಿಸುತ್ತಿಲ್ಲ, ಇದರ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂದು ಜಗದೀಶ್‌ ಪ್ರಶ್ನಿಸಿದಾಗ ಉತ್ತರಿಸಿದ ಮುಖ್ಯಾಧಿಕಾರಿಯವರು ನಗರದಲ್ಲಿ ಐದು ಕಡೆಗಳಲ್ಲಿ ಜನರೇಟರ್‌ ಅಳವಡಿಸಲಾಗಿತ್ತು. ಆದರೆ ಈಗ ನಗರದಲ್ಲಿ ವಿದ್ಯುತ್‌ ಸಮಸ್ಯೆ ಇಲ್ಲ. ಇದರಿಂದ ಇದು ನಿರುಪಯುಕ್ತವಾಗಿದೆ ಎಂದು ತಿಳಿಸಿದರು. ನಗರಕ್ಕೆ ಎರಡು ಜನರೇಟರ್‌ನ್ನು ಇಟ್ಟುಕೊಂಡು ಉಳಿದ ಜನರೇಟರನ್ನು ಏಲಂ ಮಾಡುವ ಈ ಬಗ್ಗೆ ಕ್ರಮ ಕೈಗೊಳ್ಳೋಣ ಎಂದು ಅಧ್ಯಕ್ಷ ಜಯಾನಂದ ಅವರ ಸಲಹೆಯಂತೆ ಸದಸ್ಯರು ಸಮ್ಮತಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next