ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು…
.
ಎಲ್ಲದಕ್ಕೂ ಮೊದಲಿಗೆ ಇದ್ದುದು ಕತ್ತಲೆಯೆ? ಬೆಳಕೆ?
ಮೊದಲಿಗೆ ಕತ್ತಲೆಯೆ ಇತ್ತು. ಅದು ಕತ್ತಲು ಎಂದು ತಿಳಿಯದಂತಹ ಸ್ಥಿತಿ. ಬೆಳಕು ಇದ್ದರಲ್ಲವೆ ಕತ್ತಲು ಏನು ಎಂಬುದು ಅರಿವಾಗುವುದು? ಬಳಿಕ ಬೆಳಕು ಉದ್ಭವಿಸಿತು. ಎಲ್ಲೆಲ್ಲಿ ಬೆಳಕಾಯಿತೋ ಅಲ್ಲಿಂದ ಕತ್ತಲು ದೂರ ಸರಿಯಿತು; ಬೆಳಕು ಹಿಂದೆ ಸರಿದಾಗ ಕತ್ತಲು ಆಕ್ರಮಿಸಿತು ಎಂದು ತರ್ಕಿಸಲು ಸಾಕಷ್ಟು ಕಾರಣಗಳು ಸಿಗುತ್ತವೆ. ಹಾಗಾಗಿ, ಕತ್ತಲು ಮತ್ತು ಬೆಳಕು ಅಣ್ಣತಮ್ಮಂದಿರು.
Advertisement
ಒಂದಂತೂ ಸತ್ಯ; ಜೀವಸಂಕುಲ, ಅದೇಕೆ, ನಾವು ಜೀವ ಹಿಡಿದುಕೊಂಡಿರುವ ಈ ಭೂಮಿ ಹುಟ್ಟುವುದಕ್ಕೆ ಮುನ್ನವೇ ಬೆಳಕು ಇತ್ತು..
ಕತ್ತಲು ಮತ್ತು ಬೆಳಕಿನ ಹಾಗೆಯೆ ಶಕ್ತಿ, ಶಾಖ ಕೂಡ ಬೆಳಕಿನ ಸಹೋದರರು. ಅವುಗಳಿಂದಾಗಿಯೇ ಭೂಮಿ ಸಹಿತ ಗ್ರಹಗಳ ಉಗಮವಾಯಿತು. ಬೆಳಕಿನ ಉಂಡೆ ಸೂರ್ಯನ ಸುತ್ತ ತಿರುಗುವ ಗ್ರಹಗಳ ಪೈಕಿ ಕೆಲವಕ್ಕೆ ಸೂರ್ಯನ ಶಾಖ ಮತ್ತು ಶಕ್ತಿ ಹೆಚ್ಚು ಸಿಗುತ್ತದೆ. ಕೊನೆಯ ಕೆಲವಕ್ಕೆ ಕಡಿಮೆ. ಭೂಮಿಗೆ ಮಾತ್ರ ಬೆಳಕು ಮತ್ತು ಶಾಖ ಯೋಗ್ಯ ಪ್ರಮಾಣದಲ್ಲಿ ಸಿಕ್ಕಿ ಇಲ್ಲಿ ಜೀವ ಉಗಮವಾಯಿತು. ಜೀವ ವಿಕಾಸ ಆಗಿ ನಾವು ಇಂದು ಕಾಣುವ ಹಂತದವರೆಗೆ ಬಂದು ನಿಲ್ಲುವುದಕ್ಕೂ ಬೆಳಕು; ಅದರ ಸಹೋದರ ಶಾಖ ಬೆನ್ನೆಲುಬು. ಸೂರ್ಯನಿಗೆ ಭೂಮಿಯ ಮೇಲೆ ಮಾತ್ರ ಗುಲಗಂಜಿ ಕಾಳಿನಷ್ಟು ಪ್ರೀತಿ ಹೆಚ್ಚೇಕೆ? ಇದು ಕೂಡ ಕಾಕತಾಳೀಯ ಅಲ್ಲ ಎಂದು ತರ್ಕಿಸಲು ಸಾಕಷ್ಟು ಕಾರಣಗಳು ಸಿಗುತ್ತವೆ.
.
ಹೋಲಿಕೆ, ದೃಷ್ಟಾಂತ, ರೂಪಕಗಳಿಲ್ಲದೆ ನಮ್ಮ ಪಾಲಿಗೆ ಯಾವುದೂ ಇಲ್ಲ. ಆತ ತಿಂದದ್ದು ನಾಯಿಯ ಹಾಗೆ ಎಂದು ತಿನ್ನುವಿಕೆಯನ್ನು ವಿವರಿಸುವುದು. ಕಳವು ಬೇಡ ಎನ್ನಲು ಪಂಚತಂತ್ರದ ಒಂದು ಕತೆ. ಆಕೆಯ ಬೆರಳು ಗುಲಾಬಿ ಎಸಳು.
ಕತ್ತಲು ಮತ್ತು ಬೆಳಕು ಕೂಡ ಹಾಗೆಯೆ. ಕತ್ತಲು ಜೀವನದ ನಿರಾಶೆ, ಕಷ್ಟ, ದುಃಖ, ಬವಣೆ, ಬನ್ನ, ದುಮ್ಮಾನ, ದುಗುಡಗಳು, ಬೆಳಕು ಹರ್ಷ, ಸಂತಸ ಮತ್ತು ಸುಖ. ಯೋಚನೆಗಳ ಕೋಲಿ¾ಂಚು ಹೊಳೆದದ್ದು-ನಿರಾಶೆಯ ಕತ್ತಲು ಕವಿದದ್ದು. ಆದರೆ ಹೀಗೇಕೆ? ಕತ್ತಲಿಗೆ ದುಗುಡವನ್ನೂ ಬೆಳಕಿಗೆ ಲಘುವನ್ನೂ ಆರೋಪಿಸಿದವರು ಯಾರು?
ಸೃಷ್ಟಿರಹಸ್ಯ ಎಲ್ಲಡಗಿದೆ ಹೇಳಿ? ಕತ್ತಲಿನಲ್ಲಲ್ಲವೆ? ಕತ್ತಲಿನ ಕೋಣೆಯಲ್ಲಿ ಬಯಲಾಗುತ್ತೇವೆ; ಸೃಷ್ಟಿಕಾರ್ಯ ನಡೆಯುತ್ತದೆ. ಒಳಗೆ ಬೆಳಕಿದ್ದೀತು; ಆದರೆ ಬಾಗಿಲು ಮುಚ್ಚಿದ್ದು ಕತ್ತಲು. ಅಗೋ! ಮತ್ತದೇ ಹೋಲಿಕೆ; ರೂಪಕ! ಮತ್ತೆ ಬಂದು ನಿಂತದ್ದು ಅಲ್ಲಿಗೇ; ಕತ್ತಲಿನಿಂದ. ಸೃಷ್ಟಿಯ ಬೆಳಕು ಉಗಮಿಸಿದಲ್ಲಿಗೇ! ಆದರೆ ಮನುಷ್ಯನ ಹೊರತು ಉಳಿದ ಜೀವರಾಶಿಗೆ ಸೃಷ್ಟಿಗೆ ಕತ್ತಲು ಬೇಡ.
ಈ ಗುಣಗಳನ್ನೆಲ್ಲ ಗಂಟುಕಟ್ಟಿ ಕತ್ತಲು ಮತ್ತು ಬೆಳಕಿನ ಬೆನ್ನಿಗೆ ಹೊರಿಸಿದವರು ಯಾರು?
.
ಭೂಮಿಯ ಮಟ್ಟಿಗಂತೂ ಸೂರ್ಯನ ಬೆಳಕು; ಚಂದ್ರ ಸೂರ್ಯನಿಂದ ಎರವಲು ಪಡೆದ ಬೆಳಕು; ಮಿಂಚಿನ ಹೊಳಪು; ಕೆಲವು ಜೀವಿಗಳ ಮಿಣುಕು ಬೆಳಕು. ಕೃತಕ ಬೆಳಕು ಮನುಷ್ಯ ಹುಟ್ಟಿದ ಮೇಲೆ ನಿರ್ಮಿಸಿದ್ದು: ಅವನ ಅಗತ್ಯಕ್ಕೆ ಮಾತ್ರ. ಗುಹೆಗಳಲ್ಲಿದ್ದ ಕಾಲದಲ್ಲಿ ಸೂರ್ಯ ಮುಳುಗಿದ ಮೇಲೆ ಚಟುವಟಿಕೆ ಇಲ್ಲ; ನಿದ್ದೆ. ಮರುಬೆಳಗಿಗೇ ಎಲ್ಲ ಚಟುವಟಿಕೆ. ಬೆಳದಿಂಗಳ ಹೊತ್ತಿಗೆ ಬೇಟಿ ಇತ್ತೋ ಏನೋ. ಮಾಂಸವನ್ನು ಬೆಂಕಿಯಲ್ಲಿ ಬೇಯಿಸಿ ಅದೇ ಬೆಳಕಿನಲ್ಲಿ ಜಗಿಯುತ್ತಿದ್ದ ಒಂದು ದಿನ ತಲೆಯಲ್ಲಿ ಆಲೋಚನೆಯ ಬೆಳಕು ಹರಿಯಿತು.
Related Articles
Advertisement
ಹೀಗೂ ಮಾಡಬಹುದಲ್ಲ, ಚಟುವಟಿಕೆಯ ಸಮಯವನ್ನು ವಿಸ್ತರಿಸಬಹುದಲ್ಲ ಎಂದು ತಿಳಿದ ಮೇಲೆ ಬೆಳಕಿನ ಕೃತಕ ಮೂಲವನ್ನು ಇನ್ನಷ್ಟು ಉತ್ತಮಪಡಿಸಲು ಏಕೆ ತಡ? ಹೆಚ್ಚು ಮಸಿ ಕಾರದ ಎಣ್ಣೆ, ಹೆಚ್ಚು ಹೊತ್ತು ಉರಿಯುವ ಎಣ್ಣೆ, ಭೂಮಿಯ ಆಳದಿಂದ ತೆಗೆದ ಕಲ್ಲೆಣ್ಣೆ, ಅದನ್ನು ಸಂಸ್ಕರಿಸಿ ತೆಗೆದ ಬೇರೆ ಬೇರೆ ಕಾರ್ಯಕ್ಷಮತೆಯ ಎಣ್ಣೆಗಳು, ವಿದ್ಯುತ್, ವಿವಿಧ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್… ಬೆಳಕಿನ ಮೂಲಗಳು ಹೀಗೆ ಆವಿಷ್ಕಾರದ ಬೇರೆ ಬೇರೆ ಹಾದಿಗಳಲ್ಲಿ ಹೊತ್ತು ಹೊರಟವು. ಬೆಳಕು ಕತ್ತಲನ್ನು ಆದಷ್ಟು ದೂರ; ಆದಷ್ಟು ಹೊತ್ತು ತಡೆಹಿಡಿಯಿತು. ಈಗ ವಿದ್ಯುತ್ ಇದ್ದಲ್ಲೆಲ್ಲ ಕತ್ತಲು ಇಲ್ಲವೇ ಇಲ್ಲ ಎಂಬ ಸ್ಥಿತಿ..
ಕಾಲದ ಯಾವುದೋ ಒಂದು ಬಿಂದುವಿನಿಂದ ಆರಂಭವಾದದ್ದು ಬೆಳಕಿನ ಹಬ್ಬ ದೀಪಾವಳಿ. ಕತ್ತಲಿದ್ದರೆ ಮಾತ್ರ ದೀಪಾವಳಿಗೆ ಅರ್ಥ. ಕತ್ತಲೆಯ ನಡುವೆ ಹಣತೆ, ದೀಪ ಹೆಚ್ಚಿ , ಮೋಂಬತ್ತಿ ಉರಿಸಿ, ಪಟಾಕಿ, ಸುರ್‌ಬತ್ತಿಯ ಬೆಳಕನ್ನು ಚಿಮ್ಮಿಸುವುದು. ಜೊತೆಗೆ ಜ್ಞಾನ, ಸಂಪತ್ತು, ಸಮೃದ್ಧಿಗಳನ್ನು ನೀಡು ಎಂದು ನಂಬಿದ ಶಕ್ತಿಯನ್ನು ಪ್ರಾರ್ಥಿಸುವುದು.
.
ಅಗೋ! ಮತ್ತೆ ಹೋಲಿಕೆ ಮತ್ತು ರೂಪಕ! ದೀಪಾವಳಿ ಎಂದರೆ ಕತ್ತಲಾದ ಬಳಿಕ ಒಂದಿಷ್ಟು ಬೆಳಕು ಮಾಡುವ ಹಬ್ಬ ಎನ್ನಬಾರದೆ? ಯಾರು ಗುಣಗಳನ್ನು ಕತ್ತಲು ಮತ್ತು ಬೆಳಕಿಗೆ ಆರೋಪಿಸಿದವರು? ಯಾರು? – ಎಸ್‌ಜಿ