Advertisement

ಅವೈಜ್ಞಾನಿಕ ಕಾಮಗಾರಿ; ರೈತರಿಗೆ ಕಿರಿಕಿರಿ

06:57 PM Jul 07, 2021 | Team Udayavani |

ರಾಯಚೂರು: ಸಕಾಲಕ್ಕೆ ಮಳೆ ಬಾರದಿದ್ದರೆ ಪೇಚಾಡುವ ರೈತರು, ಎಪಿಎಂಸಿ ಧಾನ್ಯ ತಂದಾಗ ಮಳೆ ಬಾರದಿರಲಿ ಎಂದು ಬೇಡುವಂತಾಗಿದೆ. ಜೋರು ಮಳೆ ಬಂದರೆ ನೀರೆಲ್ಲ ನುಗ್ಗಿ ಧಾನ್ಯಕ್ಕೆ ಕುತ್ತುಂಟಾಗುವ ಸ್ಥಿತಿ ಪ್ರತಿ ವರ್ಷ ಎದುರಾಗುತ್ತಿದೆ.

Advertisement

ಪ್ರತಿ ವರ್ಷ ಈ ಸಮಸ್ಯೆ ಎದುರಾಗುತ್ತಿದ್ದರೂ ಎಪಿಎಂಸಿ ಆಡಳಿತ ಮಂಡಳಿ ಮಾತ್ರ ಮೌನಕ್ಕೆ ಶರಣಾದಂತಿದೆ. ಮಳೆ ನೀರು ಹೀಗೆ ನುಗ್ಗಲು ಇಲ್ಲಿ ನಿರ್ವಹಣೆಗೊಂಡ ಚರಂಡಿಯ ಅವೈಜ್ಞಾನಿಕ ಕಾಮಗಾರಿ ಒಂದೆಡೆಯಾದರೆ; ಇನ್ನೂ ಅನೇಕ ಕಾರಣಗಳಿವೆ ಎಂದು ಎಪಿಎಂಸಿ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ. ಸೋಮವಾರ ಕೂಡ ಮಳೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ಭತ್ತ, ಈರುಳ್ಳಿ ಸೇರಿ ವಿವಿಧ ಬೆಳೆಗೆ ಆತಂಕ ಎದುರಾಗಿತ್ತು. ಕಳೆದ ವರ್ಷ ಕೂಡ ಇಂತಹದ್ದೇ ಸನ್ನಿವೇಶ ಏರ್ಪಟ್ಟಾಗ, ಸಮಜಾಯಿಷಿ ನೀಡಿದ್ದ ಅಧಿಕಾರಿಗಳು ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವ ಮಾತನ್ನಾಡಿದ್ದರು.

ಹಲವು ಕಾರಣಗಳು: ಈ ರೀತಿ ಸಮಸ್ಯೆ ಎದುರಾಗಲು ಕೇವಲ ಚರಂಡಿಯೊಂದೇ ಕಾರಣವಲ್ಲ. ಮೇಲೆ ನಿರ್ಮಿಸಿದ ಶೆಡ್‌ಗಳು ಕೂಡ ಅಲ್ಲಲ್ಲಿ ರಂಧ್ರ ಬಿದ್ದಿದ್ದು, ನೀರು ಸೋರಿಯಾಗುತ್ತಿದೆ. ಇದರಿಂದ ಧಾನ್ಯಗಳಿಗೆ ಸಮಸ್ಯೆ ಎದುರಾಗುತ್ತಿದೆ. ಇನ್ನೂ ಎಪಿಎಂಸಿ ಮೇಲ್ಭಾಗದಲ್ಲಿ ಸಾಕಷ್ಟು ಕಡೆ ಸ್ಥಳ ಒತ್ತುವರಿಯಾಗಿದ್ದು, ಚರಂಡಿಗಳ ಮೇಲೆಲ್ಲ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಇದರಿಂದ ಚರಂಡಿಗಳ ಸಮರ್ಪಕ ನಿರ್ವಹಣೆ ಕೂಡ ಆಗುತ್ತಿಲ್ಲ. ಇನ್ನೂ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಸರಿಯಾಗಿಲ್ಲ. ಇದರಿಂದ ಮಳೆ ಬಂದಾಗ ನೀರು ಶೇಖರಣೆಯಾಗಿ ಎಪಿಎಂಸಿಗೆ ನುಗ್ಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗುತ್ತಿದೆ.

ಅಭಿವೃದ್ಧಿಗೆ ಹಣಾಭಾವ: ಎಪಿಎಂಸಿಗೆ ಮುಖ್ಯವಾಗಿ ಬರುತ್ತಿದ್ದ ಆದಾಯ ನಿಂತು ಹೋಗಿದೆ. ಎಪಿಎಂಸಿ ಖಾಸಗೀಕರಣ ಮಸೂದೆ  ಜಾರಿಯಾದಾಗಿನಿಂದ ಸಾಕಷ್ಟು ಪ್ರಮಾಣದ ಆದಾಯ ನಿಂತು ಹೋಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಸಿಬ್ಬಂದಿಗೆ ವೇತನ, ಮೂಲ ಸೌಲಭ್ಯಗಳಿಗೆ ಅನುದಾನ ಸಾಲದಾಗಿದೆ. ಇನ್ನೂ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಇದೆ ಎನ್ನುವುದು ಮೂಲಗಳ ವಿವರಣೆ. ಆದರೆ, ರೈತರ ಸಮಸ್ಯೆ ವಿಚಾರಕ್ಕೆ ಬಂದಾಗ ಜಿಲ್ಲಾಡಳಿತ ಇಲ್ಲವೇ ನಗರಾಡಳಿತ ಕೂಡಲೇ ಈ ಸಮಸ್ಯೆ ಪರಿಷ್ಕಾರ ಕಂಡುಕೊಳ್ಳಬೇಕು ಎಂಬುದು ರೈತ ಮುಖಂಡರ ಒತ್ತಾಸೆ.

ಎಪಿಎಂಸಿಯಲ್ಲಿ ಮಳೆ ಬಂದರೆ ಈ ರೀತಿ ಸಮಸ್ಯೆ ಎದುರಾಗುವ ವಿಚಾರ ನನ್ನ ಗಮನಕ್ಕಿರಲಿಲ್ಲ. ನಮ್ಮ ಸಿಬ್ಬಂದಿ ಮಾಹಿತಿ ನೀಡಿದ್ದರೆ ಏನಾದರೂ ಕ್ರಮ ವಹಿಸುತ್ತಿದ್ದೆ. ಮುಖ್ಯವಾಗಿ ಚರಂಡಿಯದ್ದೇ ಸಮಸ್ಯೆ ಇದೆ. ಅದರ ಜತೆಗೆ ಮೇಲೆ ಅಳವಡಿಸಿರುವ ಶೆಡ್‌ಗಳು ಕೂಡ ಸೋರಿಕೆಯಾಗುತ್ತಿವೆ. ಅಲ್ಲಿ ಬಿದ್ದಿರುವ ರಂಧ್ರಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗುವುದು. ಇನ್ನೂ ಮೇಲ್ಭಾಗದಲ್ಲಿ ಚರಂಡಿಗಳ ಮೇಲೆಲ್ಲ ಕಟ್ಟಡ ನಿರ್ಮಿಸಿದ್ದರಿಂದ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು.
ಬಿ.ಎಂ.ಶ್ರೀನಿವಾಸ, ಎಪಿಎಂಸಿ ಕಾರ್ಯದರ್ಶಿ

Advertisement

ಪ್ರತಿ ವರ್ಷ ಇದೇ ಸಮಸ್ಯೆಯಾಗಿದೆ. ಬೆಳೆ ಹೊಲದಲ್ಲಿದ್ದಾಗ ಮಳೆ ಬರದೆ ಪರದಾಡಬೇಕು. ಬೆಳೆ ಎಪಿಎಂಸಿಗೆ ತೆಗೆದುಕೊಂಡ ಬಂದರೆ ಮಳೆ ಬಂದರೆ ಗೊಳಾಡಬೇಕು. ಅ ಧಿಕಾರಿಗಳಿಗೆ ಪದೇಪದೇ ಹೇಳುವುದಕ್ಕೆ ಆಗುವುದಿಲ್ಲ. ರೈತರ ಪರಿಸ್ಥಿತಿಯನ್ನು ಅವರೇ ಅರ್ಥ ಮಾಡಿಕೊಳ್ಳಲಿ. ಇನ್ನಾದರೂ ಚರಂಡಿ ವ್ಯವಸ್ಥೆ ಸರಿ ಮಾಡಿ ಸಮಸ್ಯೆ ಬಗೆ ಹರಿಸಲಿ.
ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next