ಬೆಂಗಳೂರು: ಕೇವಲ ಒಂದು ತಾಸು ಸುರಿವ ಮಳೆಗೆ ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು ಹೊಳೆಯಂತಾಗಿ ಉಕ್ಕಿ ಹರಿಯುವಂತಾಗಿದೆ.ಇದಕ್ಕೆ ಮೂಲ ಕಾರಣ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಟೆಂಡರ್ ಶ್ಯೂರ್ ರಸ್ತೆಗಳ ನಿರ್ವಹಣೆ ಕಾಲ ಕಾಲಕ್ಕೆ ಸರಿಯಾಗಿ ಮಾಡದೆ ಇರುವುದು, ವೈಟ್ ಟಾಪಿಂಗ್ ರಸ್ತೆಗಳು ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ಕ್ರಮಗಳೇ ಕಾರಣ ಎಂಬ ಮಾತುಗಳು ತಜ್ಞರಿಂದ ಕೇಳಿ ಬಂದಿದೆ.
ಬಹು ಕಾಲದಿಂದ ಬೆಂಗಳೂರಿನ ರಸ್ತೆಗಳನ್ನು ಕಾಡುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪ್ರಾಜೆಕ್ಟ್ ಟೆಂಡರ್ ಶ್ಯೂರ್ ಯೋಜನೆ ರಾಮಬಾಣ ಎನ್ನಲಾಗುತ್ತಿದೆ. ಆದರೆ, ಬಿಬಿಎಂಪಿ ಟೆಂಡರ್ ಶ್ಯೂರ್ ರಸ್ತೆಗಳ ನಿರ್ವಹಣೆ ಸರಿಯಾಗಿ ಮಾಡದೇ ಇರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಎಂದು ಮಳೆ ಸುರಿದರೆ ಹೆಸರಾಂತ ಮುಖ್ಯರಸ್ತೆಗಳಲ್ಲೇ ವಾಹನ ಸವಾರರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಲಿದೆ.
ಯಾವುದು ರಸ್ತೆ, ಯಾವುದು ಒಳಚರಂಡಿ ಮಾರ್ಗ, ಪಾದಚಾರಿ ಮಾರ್ಗ ಎಂಬುವುದೇ ತಿಳಿದಿರುವ ಪರಿಸ್ಥಿತಿ ಉಂಟಾಗುತ್ತದೆ. ನಗರದ ರಸ್ತೆ ಸಮಸ್ಯೆಗಳನ್ನು ತಪ್ಪಿಸಲು ಸಲುವಾಗಿ ಸರ್ಕಾರ ಈ ಹಿಂದೆ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಹೊಂಡಗಳಾಗಲಿ ಅಥವಾ ಒಂದಲ್ಲ ಒಂದು ನಾಗರಿಕ ಉದ್ದೇಶಕ್ಕಾಗಿ ರಸ್ತೆಗಳನ್ನು ಅಗೆಯುವ ಅವ್ಯಾಹತವಾಗಿ ಆಗಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಬೆಂಗಳೂರಿನ ರಸ್ತೆಗಳನ್ನು ನಿರ್ಮಿಸುವುದು ಟೆಂಡರ್ ಶ್ಯೂರ್‌ನ ಮುಖ್ಯ ಉದ್ದೇಶವಾಗಿದೆ. ಆದರೆ ಈಗ ಬಿಬಿಎಂಪಿ ಅಧಿಕಾರಿಗಳು ರಸ್ತೆ ನಿರ್ವಹಣೆಯ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯತೋರಿರುವ ಹಿನ್ನೆಲೆಯಲ್ಲಿ ಮಳೆ ಬಂದರೆ ರಾಜಧಾನಿಯ ರಸ್ತೆಗಳು ಹೊಳೆಯಂತೆ ರಸ್ತೆ ತುಂಬೆಲ್ಲ ಉಕ್ಕಿಹರಿಯುತ್ತವೆ. ರಾತ್ರಿ ಸವಾರರು ಜೀವವನ್ನು ಬಿಗಿಹಿಡಿದು ಸಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನಗರ ತಜ್ಞ ಅಮೃತರಾಜ್ ಹೇಳುತ್ತಾರೆ.
ಬಿಬಿಎಂಪಿ, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಹಿನ್ನೆಲೆ ಈ ಹಿಂದೆ ಟೆಂಡರ್ ಶ್ಯೂರ್ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ರಿಚ್ಮಂಡ್, ರೆಸಿಡೆನ್ಸಿ ರಸ್ತೆ, ವಿಠಲ್ ಮಲ್ಯ ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಕೂಡ ಸಣ್ಣ ಮಳೆ ಸುರಿದರೆ ರಸ್ತೆ ತುಂಬೆಲ್ಲ ನೀರು ಉಕ್ಕಿಹರಿಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ದೂರುತ್ತಾರೆ.
ವಿಠಲ್ ಮಲ್ಯ, ರೆಸಿಡೆನ್ಸಿ ರಸ್ತೆಗಳಲ್ಲೇ ಪ್ರವಾಹ ಪರಿಸ್ಥಿತಿ: ನಗರದಲ್ಲಿ ಒಟ್ಟು 12 ರಸ್ತೆಗಳನ್ನು ಪಾಲಿಕೆ ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಿದೆ. ಟೆಂಡರ್ ಶ್ಯೂರ್ ಯೋಜನೆಯಡಿ ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆಗಳು, ವಿಠಲ್ ಮಲ್ಯ ಆಸ್ಪತ್ರೆ ರಸ್ತೆ, ಸೇಂಟ್ ಮಾರ್ಕ್‌ಸ್ ರಸ್ತೆ, ಕಮಿಸ್ಸರಿಯಟ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳನ್ನು ಟೆಂಡರ್ ಶ್ಯೂರ್‌ನ ಮೊದಲ ಹಂತದ ಯೋಜನೆಯಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ ಈ ಪ್ರದೇಶ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ಮಳೆ ನೀರು ಸುರಿದರು ನದಿಯಂತೆ ರಸ್ತೆಗಳಾಗಿ ನಿರ್ಮಾಣವಾಗುತ್ತದೆ ಎಂದು ಸಂಪಗಿ ರಾಮನಗರ ನಿವಾಸಿ ಸೆಲ್ವಕುಮಾರ್ ಆರೋಪಿಸುತ್ತಾರೆ. ಬಿಬಿಎಂಪಿ ಕೂಗಳೆತೆಯ ದೂರದಲ್ಲಿಯೇ ಇಂತಹ ಪರಿಸ್ಥಿತಿಯಿದ್ದರೂ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಉಳಿದ ಕಡೆಗಳಲ್ಲಿ ಪರಿಸ್ಥಿತಿ ಇದಕ್ಕೆ ಭಿನ್ನವಾಗಿರಲಿದೆ ಎಂದು ದೂರುತ್ತಾರೆ.
ಸಿಮೆಂಟ್ ರಸ್ತೆಗಳು ಅವಾಂತರಕ್ಕೆ ಕಾರಣ: ರಾಜಧಾನಿ ರಸ್ತೆಗಳು ಮಳೆ ಬಂದರೆ ತುಂಬಿ ಹರಿಯಲು ವೈಟ್-ಟಾಪಿಂಗ್ ರಸ್ತೆಗಳು ಕೂಡ ಕಾರಣವಾಗಿದೆ. ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 150 ಕಿ.ಮೀ.ಗೂ ಅಧಿಕ ರಸ್ತೆಗಳನ್ನು ವೈಟ್-ಟಾಪಿಂಗ್ ರಸ್ತೆಗಳನ್ನಾಗಿ ಅಭಿವೃದ್ದಿಪಡಿಸಲಾಗಿದೆ. ನೀರು ಇಂಗಲು ಅವಕಾಶವಿಲ್ಲದಿರುವುದು ಮತ್ತು ಒಳಚರಂಡಿ ಪ್ರವೇಶಿಸಲು ಕಿರುನೀರುಗಾಲುವೆ ವ್ಯವಸ್ಥೆ ವೈಜ್ಞಾನಿಕ ರೀತಿಯಲ್ಲಿ ಇರದೇ ಇರುವುದು ಕೂಡ ಪ್ರವಾಹ ಸೃಷ್ಟಿಸಲು ಕಾರಣವಾಗುತ್ತಿದೆ ಎಂದು ಸಿವಿಕ್ ಸಂಸ್ಥೆ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಹೇಳುತ್ತಾರೆ.
ವೈಟ್‌ಟಾಪಿಂಗ್ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ರಸ್ತೆಗಳಲ್ಲಿ ಒಳಚರಂಡಿಗಳಿಗೆ ಕಿರುಗಾಲುವೆಗಳ ವ್ಯವಸ್ಥೆಯಾಗಿಲ್ಲ. ಜತೆಗೆ ಚರಂಡಿ ಹಾಳಾದಲ್ಲಿ ಸಿಮೆಂಟ್ ತುಂಬಲಾಗುತ್ತಿದೆ. ಹೀಗಾಗಿ ನೀರು ಹರಿದು ಹೋಗುವುದು ಎಲ್ಲಿಂದ ಎಂದು ಪ್ರಶ್ನಿಸುತ್ತಾರೆ. ವಾರ್ಡ್ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣ ಸಮಿತಿ ರಚಿಸಬೇಕು. ಆ ಕೆಲಸವನ್ನು ಪಾಲಿಕೆ ಮಾಡಿಲ್ಲ. ಐರೋಪ್ಯ ಮಾದರಿಯ ರಸ್ತೆ ನಿರ್ಮಾಣಕ್ಕೆ ಕೈಹಾಕಿರುವುದೇ ಇಷ್ಟಕ್ಕೆ ಕಾರಣ ಎಂದು ಟೀಕಿಸುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಿರುವ ರಸ್ತೆಗಳು ಕೂಡ ವೈಜ್ಞಾನಿಕ ರೀತಿಯಲ್ಲಿ ಇಲ್ಲ ಎಂದು ದೂರುತ್ತಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಮಳೆ ಬೀಳುವ ಮುನ್ಸೂಚನೆ ಇರುವ ಕಾರಣ ಪಾಲಿಕೆ ವಲಯಗಳ ಆಯುಕ್ತರು, ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರುಗಳಿಗೆ ಮಳೆ ಅವಘಡಗಳನ್ನು ಎದುರಿಸಲು ಸಜ್ಜಾಗಿರುವಂತೆ ಸೂಚನೆ ನೀಡಲಾಗಿದೆ.
– ರಾಕೇಶ್ ಸಿಂಗ್, ಪಾಲಿಕೆ ಮುಖ್ಯ ಆಡಳಿತಾಧಿಕಾರಿ
-ದೇವೇಶ ಸೂರಗುಪ್ಪ