ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಪತಿಯೇ ಹತ್ಯೆಗೈದು, ಬಳಿಕ ಡೆತ್ ನೋಟ್ ಬರೆದಿಟ್ಟು ತಾನೂ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಡ್ಲುಗೇಟ್ ಎಎಸ್‌ಎಲ್ ಲೇಔಟ್ ನಿವಾಸಿ ಸಂಧ್ಯಾ (35) ಕೊಲೆಯಾದ ಮಹಿಳೆ, ಆಕೆಯ ಪತಿ ಆರೋಪಿ ಮನೀಶ್ ಕುಮಾರ್ (42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶನಿವಾರ ಮಧ್ಯಾಹ್ನ ಕೊಳೆತ ಸ್ಥಿತಿಯಲ್ಲಿ ಸಂಧ್ಯಾ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ಹೇಳಿದರು. ಬಿಹಾರ ಮೂಲದ ಮನೀಶ್ ಕುಮಾರ್ ಮತ್ತು ಸಂಧ್ಯಾ 2016ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ನಗರದ ಎಎಸ್‌ಎಲ್ ಲೇಔಟ್‌ನ ಅಪಾರ್ಟ್‌ಮೆಂಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮನೀಶ್ ಸ್ಥಳೀಯ ಗಾರ್ಮೆಂಟ್ಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಸಂಧ್ಯಾ ಮನೆಯಲ್ಲೇ ಇರುತ್ತಿದ್ದರು. ಮನೀಶ್ ಮದುವೆಗೊ ಮೊದಲು ದೆಹಲಿಯಲ್ಲಿ ವಾಸವಾಗಿದ್ದ. ಆಗ ಪಬ್‌ಗ ಹೋಗುವಾಗ ಕೆಲ ಯುವತಿಯರ ಜತೆ ಸಂಪರ್ಕ ಹೊಂದಿದ್ದ. ಮದುವೆ ಬಳಿಕವೂ ಆ ಯುವತಿಯರ ಜತೆ ಚಾಟಿಂಗ್ ಮಾಡುತ್ತಿದ್ದ. ಅದು ಪತ್ನಿಗೆ ಗೊತ್ತಾಗಿತ್ತು. ಅದೇ ವಿಚಾರವಾಗಿ ದಂಪತಿ ನಡುವೆ ಮೂರು ದಿನಗಳ ಹಿಂದೆ ಗಲಾಟೆಯಾಗಿತ್ತು.
ಈ ವೇಳೆ ಆಕ್ರೋಶಗೊಂಡ ಆರೋಪಿ ಪತ್ನಿಯನ್ನು ಹತ್ಯೆಗೈದಿದ್ದಾನೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿರುವ ಸಂಧ್ಯಾ ಕುಟುಂಬ ಸದಸ್ಯರು ಕರೆ ಮಾಡಿದ್ದಾರೆ. ಆದರೆ, ಆಕೆ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಮನೀಶ್ ಕುಮಾರ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಅನುಮಾನಗೊಂಡು ಹೊಂಗಸಂದ್ರದಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ಪುತ್ರಿಯ ಮನೆ ಬಳಿ ಹೋಗಿ ನೋಡಿ ಬರುವಂತೆ ಕೋರಿದ್ದಾರೆ. ಅದರಂತೆ ಸಂಬಂಧಿಕರು ಮನೆ ಬಳಿ ಹೋದಾಗ ಮನೆ ಒಳಗಿನಿಂದ ಲಾಕ್ ಆಗಿತ್ತು.
ಕಿಟಕಿಯಲ್ಲಿ ನೋಡಿದಾಗ ರಕ್ತ ಹರಿದಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಶೌಚಾಲಯದ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಒಳಗಿದ್ದ ಮನೀಶ್ ಬ್ಲೇಡ್ ತೋರಿಸಿ ಹತ್ತಿರ ಯಾರು ಬರಬೇಡಿ ಎಂದು ಕೈ ಕೊಯ್ದುಕೊಂಡು ಹೆದರಿಸಿದ್ದಾನೆ. ಬಳಿಕ ತಪ್ಪಿಸಿಕೊಂಡು ಮೂರನೇ ಮಹಡಿಯ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.