Advertisement
ಅಂದು ಜಯತೀರ್ಥ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದರು ಶಿವಮಣಿ. ಶಿವಮಣಿ ಮೆಚ್ಚುಗೆಗೆ ಕಾರಣ, ಚಿತ್ರದಿಂದ ಚಿತ್ರಕ್ಕೆ ಜಯತೀರ್ಥ ಮಾಡುತ್ತಿರುವ ಪ್ರಯೋಗಗಳು. ಸುಮ್ಮನೆ ಜಯತೀರ್ಥ ಅವರ ಸಿನಿಮಾಗಳ ಪಟ್ಟಿಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅವರ್ಯಾವತ್ತೂ ಒಂದೇ ಜಾನರ್‌ನ ಅಥವಾ ಒಂದೇ ತರಹದ ಸಿನಿಮಾಗಳನ್ನು ಮಾಡದಿರುವುದನ್ನು ಗಮನಿಸಬಹುದು. ಜಯತೀರ್ಥ ಅವರ ಮೊದಲ ಚಿತ್ರ “ಒಲವೇ ಮಂದಾರ’ ಒಂದು ಲವ್‌ಸ್ಟೋರಿಯಾಗಿತ್ತು. ನಂತರ ಬಂದ “ಟೋನಿ’, ಒಂದು ಥ್ರಿಲ್ಲರ್. ಮೂರನೆಯ ಚಿತ್ರ “ಬುಲೆಟ್ ಬಸ್ಯಾ’ ಒಂದು ಕಾಮಿಡಿ, “ಬ್ಯೂಟಿಫುಲ್ ಮನಸುಗಳು’ ಇನ್ನೊಂದು ಜಾತಿಯದು. ಹೀಗೆ ಚಿತ್ರದಿಂದ ಚಿತ್ರಕ್ಕೆ ಜಯತೀರ್ಥ ಏನನ್ನೋ ಹೊಸದನ್ನು ಪ್ರಯತ್ನಿಸುತ್ತಲೇ ಇದ್ದಾರೆ.
Related Articles
Advertisement
ಇನ್ನು ಇದರಲ್ಲಿ ರಿಸ್ಕ್ ಸಹ ಇರುತ್ತದೆ ಮತ್ತು ಅದನ್ನು ತೆಗೆದುಕೊಳ್ಳಲೇಬೇಕು ಎನ್ನುತ್ತಾರೆ ಶಶಾಂಕ್. “ನಿರ್ದೇಶನ ಮಾಡುವುದೇ ದೊಡ್ಡ ರಿಸ್ಕಾ. ಅಂಥದ್ದರಲ್ಲಿ ಬೇರೆ ಪ್ರಯತ್ನಗಳನ್ನು ಮಾಡುವಾಗ ಹೆದರುವುದರಲ್ಲಿ ಅರ್ಥವೇ ಇಲ್ಲ. ನಾನು “ಜರಾಸಂಧ’ ಮಾಡುವಾಗ, ಅದು ನನ್ನಿಂದ ಸಾಧ್ಯವಾ ಎಂದು ಎಲ್ಲರಿಗೂ ಪ್ರಶ್ನೆ ಇತ್ತು. ಒಮ್ಮೆ ಆ ತರಹದ ಪ್ರಯತ್ನ ಮಾಡಿದರೆ, ಯಾರೂ ಪ್ರಶ್ನೆ ಮಾಡುವುದಿಲ್ಲ. ನಾನು ಈ ತರಹದ ಚಿತ್ರ ಮಾಡಬಲ್ಲೆನಾ ಎಂಬ ಕ್ವಶ್ಚೆನ್ ಮಾರ್ಕ್ ಯಾರಲ್ಲೂ ಇರುವುದಿಲ್ಲ. ಹಾಗಾಗಿ ಮೊದಲು ನಾವು ಆ ಭಯವನ್ನು ದಾಟಿಬಿಟ್ಟರೆ, ನನ್ನಿಂದ ಬೇರೆ ಬೇರೆ ಜಾನರ್‌ಗಳ ಚಿತ್ರವನ್ನು ಮಾಡುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ಯಾರಿಗೂ ಇರುವುದಿಲ್ಲ’ ಎನ್ನುತ್ತಾರೆ ಶಶಾಂಕ್.
ಇಲ್ಲಿ ಜಾನರ್ ಮುಖ್ಯವಲ್ಲ, ನಾವು ಮಾಡುವ ಕಥೆ ಮುಖ್ಯ ಎನ್ನುವುದು ರಿಷಭ್ ಶೆಟ್ಟಿ ಅಭಿಪ್ರಾಯ. ರಿಷಭ್ ಮೊದಲು ನಕ್ಸಲಿಸಂ ಹಿನ್ನೆಲೆಯ “ರಿಕ್ಕಿ’ ಮಾಡಿದರು. ಆ ನಂತರ ಕಾಲೇಜ್ ಲವ್‌ಸ್ಟೋರಿ “ಕಿರಿಕ್ ಪಾರ್ಟಿ’. ಅದು ಮುಗಿಯುತ್ತಿದ್ದಂತೆಯೇ ಮಕ್ಕಳ ಚಿತ್ರದ ನಿರ್ದೇಶನ. ಹೀಗೆ ಪ್ರತಿ ಚಿತ್ರಕ್ಕೂ ಒಂದು ಹೊಸ ಪ್ರಯತ್ನ ಮಾಡುತ್ತಲೇ ಬರುತ್ತಿದ್ದಾರೆ ರಿಷಭ್. ಈ ಕುರಿತು ಅವರನ್ನು ಕೇಳಿದರೆ, “ಆರಂಭದಲ್ಲಿ ನನಗೆ ಈ ಜಾನರ್ ಬಗ್ಗೆ ಗೊತ್ತಿರಲಿಲ್ಲ. ನನ್ನ ಚಿತ್ರ ಯಾವ ಜಾನರ್‌ಗೆ ಸೇರುತ್ತದೆ ಎಂದು ಹೇಳುವುದಕ್ಕೂ ಬರುತ್ತಿರಲಿಲ್ಲ. ನಾನು ಯಾವತ್ತೂ ಒಂದು ಜಾನರ್‌ನ ಮಾಡಬೇಕು ಎಂದು ಮಾಡುವುದೇ ಇಲ್ಲ. ನನಗೆ ಒಂದು ಕಥೆ ಎಕ್ಸೆ„ಟ್ ಆಗಬೇಕು, ಅದು ಎಲ್ಲರಿಗೂ ಇಷ್ಟವಾಗಬೇಕು, ಹಾಗಾದಾಗ ಮಾತ್ರ ಒಂದು ಕಥೆಯನ್ನು ತೆಗೆದುಕೊಳ್ಳುತ್ತೇನೆ. ಆ ನಂತರ ಅದು ಯಾವ ಜಾನರ್‌ಗೆ ಸೇರಬೇಕು ಎಂಬ ತೀರ್ಮಾನ. ಅದು ಬಿಟ್ಟು ಇಂಥದ್ದೇ ಜಾನರ್‌ನ ಸಿನಿಮಾ ಮಾಡಬೇಕು ಎಂದು ಯಾವತ್ತೂ ಮಾಡುವುದಿಲ್ಲ. ಇಷ್ಟಕ್ಕೂ ಒಂದು ಕಥೆಯನ್ನು ಆರಂಭದಲ್ಲೇ ಇಂಥದ್ದೊಂದು ಜಾನರ್‌ಗೆ ಸೇರಿಸುವುದಕ್ಕೆ ಸಾಧ್ಯವಿಲ್ಲ. ಚಿತ್ರೀಕರಣವಾಗಬೇಕು, ಎಡಿಟಿಂಗ್ ಆಗಬೇಕು, ಎಲ್ಲವೂ ಫೈನಲ್ ಆದಮೇಲೆ ಅದಕ್ಕೊಂದು ಜಾನರ್ ಎಂಬ ಹಣೆಪಟ್ಟಿ ಬೀಳಬಹುದು. ನನ್ನ ಪ್ರಕಾರ ಜಾನರ್ ಎನ್ನುವುದು ಮುಖ್ಯವಲ್ಲ. ನಮ್ಮ ಸಿನಿಮಾ ಯಾವ ತರಹದ್ದು ಎಂದು ಹೇಳುವುದಕ್ಕೆ ಅದೊಂದು ಮಾಧ್ಯಮ ಅಷ್ಟೇ’ ಎನ್ನುತ್ತಾರೆ ರಿಷಭ್.
ಒಟ್ಟಿನಲ್ಲಿ ಇದೊಂದು ಒಳ್ಳೆಯ ಬೆಳವಣಿಗೆ. ಹೀಗೆ ಪ್ರತಿ ಚಿತ್ರದಲ್ಲೂ ಒಂದೊಂದು ಹೊಸ ಪ್ರಯೋಗ ಮಾಡಿದಾಗಲಷ್ಟೇ, ನಿರ್ದೇಶಕರಿಗಷ್ಟೇ ಅಲ್ಲ, ಪ್ರೇಕ್ಷಕರಿಗೂ ಹೊಸ ಅನುಭವವಾಗುತ್ತದೆ. ಚಿತ್ರರಂಗಕ್ಕೂ ಒಂದಿಷ್ಟು ಒಳ್ಳೆಯ ಚಿತ್ರಗಳು ಸಿಕ್ಕಂತಾಗುತ್ತದೆ.
ಚೇತನ್ ನಾಡಿಗೇರ್