ಹೊಸದಿಲ್ಲಿ: ಬಾಂಗ್ಲಾದೇಶ (Bangladesh)ದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಕಡಿತಕ್ಕೆ ಆಗ್ರಹಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಭಾರಿ ಹಿಂಸಾಚಾರಕ್ಕೆ ತಿರುಗಿ ಪ್ರಧಾನಿ ಶೇಖ್ ಹಸೀನಾ (Sheikh Hasina) ರಾಜೀನಾಮೆ ಸಲ್ಲಿಸಿದ ಪರಿಣಾಮ ಅಲ್ಲಿನ ರಾಜಕೀಯ ಅರಾಜಕತೆಯು ಭಾರತ ಮೂಲದ ಕಂಪನಿಗಳ ವಾಣಿಜ್ಯ ಉದ್ಯಮಕ್ಕೆ ಹೊಡೆತ ನೀಡಿದೆ.
ಬಾಂಗ್ಲಾದೇಶದಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ಪರಿಣಾಮ ಭಾರಿ ಹಿಂಸಾಚಾರದಿಂದಾಗಿ ಅರಾಜಕತೆ ಉಂಟಾಗಿರುವುದು ಆರ್ಥಿಕತೆಗೂ ಹೊಡೆತ ಬಿದ್ದಿದೆ . ಬಾಂಗ್ಲಾದಲ್ಲಿ 2009ರಿಂದ ನಿರಂತರವಾಗಿ ಅಧಿಕಾರದಲ್ಲಿದ್ದ ಶೇಖ್ ಹಸೀನಾ ನೆರೆಯ ರಾಷ್ಟ್ರ ಭಾರತದೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಹೊಂದಿದ್ದರು. ಇದೀಗ ಅಧಿಕಾರದಿಂದ ಹಸೀನಾ ನಿರ್ಗಮನವು ಭಾರತ ಮೂಲದ ವ್ಯಾಪಾರ ಕಂಪನಿಗಳು ಆರ್ಥಿಕ ಸ್ಥಿರತೆ ಸಾಧಿಸುವಲ್ಲಿ ಅಲ್ಪಮಟ್ಟಿನ ಅಪಾಯ ಎದುರಾಗುವ ಸಾಧ್ಯತೆ ಇದೆ.
ಬಾಂಗ್ಲಾದಲ್ಲಿನ ರಾಜಕೀಯ ಪ್ರಕ್ಷುಬ್ದತೆಯಿಂದಾಗಿ ಅಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುವ ಭಾರತ ಮೂಲದ ಕೆಲವು ಕಂಪನಿಗಳಲ್ಲಿನ ಮಾರುಕಟ್ಟೆ ಶೇರುಗಳ ಮೌಲ್ಯವು ಕುಸಿತ ಕಂಡಿದೆ.
ಮಾರಿಕೋ: ಬಾಂಗ್ಲಾದಲ್ಲಿನ ಅರಾಜಕತೆಯಿಂದ ಮಾರಿಕೋ ಕಂಪನಿಯ ಉತ್ಪನ್ನವಾದ ಸಫೋಲಾ ಆಯಿಲ್ ವ್ಯವಹಾರದಲ್ಲಿ ಶೇ.4 ಕುಸಿತ ಕಂಡಿದೆ. ಈ ಕಂಪನಿಗೆ ಬಾಂಗ್ಲಾದೇಶದಿಂದ ಶೇ.11 ರಿಂದ 12 ಆದಾಯವು ಬರುತ್ತಿತ್ತು. ಈಗ ಪ್ರಸ್ತುತ ಬಿಕ್ಕಟ್ಟಿನಿಂದಾಗಿ ವ್ಯಾಪಾರದಲ್ಲಿ ಕುಸಿತ ಕಾಣಲಿದೆ.
ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್: ಈ ಕಂಪನಿಗೆ ಬಾಂಗ್ಲಾದೇಶದಿಂದ ಶೇ.25ರಷ್ಟು ಆದಾಯ ಹರಿದು ಬರುತ್ತಿತ್ತು. ಪ್ರಸ್ತುತ ಪರಿಸ್ಥಿತಿಯಿಂದ ಕಂಪನಿಯ ಶೇರು ಮೌಲ್ಯವು ಶೇ.3 ಕುಸಿತ ಕಂಡಿದೆ. ಬಾಂಗ್ಲಾದಲ್ಲಿ ಅಶಾಂತಿ, ಕರ್ಫ್ಯೂನಿಂದಾಗಿ ಈ ಕಂಪನಿಯು ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿದೆ.
ಇಮಾಮಿ: ಬಾಂಗ್ಲಾದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳಲ್ಲಿ ಇಮಾಮಿ ಪ್ರಮುಖ ಸಂಸ್ಥೆ. ಈ ಕಂಪನಿಯ ಆದಾಯದಲ್ಲಿಯೂ ಶೇ.೪ ಕುಸಿತ ಕಂಡಿದೆ. ಹಾಗೆಯೇ ಇನ್ನಿತರ ಭಾರತದ ಕಂಪನಿಗಳಾದ ಬಾಯರ್ ಕಾರ್ಪ್, ಜಿಸಿಪಿಎಲ್, ಬ್ರಿಟಾನಿಯಾ, ವಿಕಾಸ್ ಲೈಫ್ ಕೇರ್, ಡಾಬರ್, ಏಷ್ಯನ್ ಪೈಂಟ್ಸ್, ಪಿಡಿಯಾಲೈಟ್, ಜ್ಯುಬಿಲೆಂಟ್ ಫುಡ್ ವರ್ಕ್ಸ್ ಹಾಗೂ ಬಜಾಜ್ ಆಟೋ ಕಂಪನಿಗಳು ಈ ರಾಜಕೀಯ ಅರಾಜಕತೆಯಿಂದ ವ್ಯಾಪಾರ – ವ್ಯವಹಾರದಲ್ಲಿ ಆರ್ಥಿಕವಾಗಿ ಹೊಡೆತ ಅನುಭವಿಸುತ್ತಿವೆ.