Advertisement

Udupi ಉಭಯ ಜಿಲ್ಲೆಗಳಲ್ಲಿ ಬಗೆಹರಿಯದ ಮರಳು ಸಮಸ್ಯೆ

12:56 AM Dec 14, 2023 | Team Udayavani |

ಉಡುಪಿ: ಹಲವು ವರ್ಷಗಳಿಂದ ಬಗೆಹರಿಯದ ಕರಾವಳಿ ಮರಳು ಸಮಸ್ಯೆ ಪ್ರಸ್ತುತ ರಾಜಸ್ವ ಸಂಗ್ರಹದ ಮೇಲೂ ಪರಿಣಾಮ ಬೀರಿದ್ದು, ಈ ವರ್ಷ ಶೇ. 60 ರಷ್ಟು ಕುಸಿದಿದೆ.

Advertisement

ಕರಾವಳಿಗೆ ಪ್ರತ್ಯೇಕ ಮರಳು ನೀತಿಯ ಬೇಡಿಕೆ ಇದ್ದರೂ ಈವರೆಗೂ ಜಾರಿಯಾಗಿಲ್ಲ. ಮರಳು ತೆಗೆಯಲು ತಾತ್ಕಾಲಿಕ ಪರವಾನಿಗೆ ಅಥವಾ ಗುತ್ತಿಗೆ ನೀಡದ ಕಾರಣ ಮರಳು ಗಣಿಗಾರಿಕೆಯೇ ಉಭಯ ಜಿಲ್ಲೆಗಳಲ್ಲಿ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 60 ರಷ್ಟು ರಾಜಸ್ವ ಸಂಗ್ರಹ ಕುಸಿತವಾಗಿದೆ.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಮತ್ತು ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿ (ನಾನ್‌ ಸಿಆರ್‌ಝಡ್‌) ಪ್ರದೇಶದಲ್ಲಿ ಸಾಂಪ್ರದಾಯಿಕ ಮರಳು ಗಾರಿಕೆಗೆ 86 ಪ್ರದೇಶಗಳನ್ನು ಗುರುತಿಸಲಾಗಿದೆ. ಸಿಆರ್‌ಝಡ್‌ ವಿಭಾಗದಲ್ಲಿ ಉಡುಪಿಯ 9, ದಕ್ಷಿಣಕನ್ನಡದ 19 ಹಾಗೂ ಉ.ಕ.ದ 6 ಮತ್ತು ನಾನ್‌ ಸಿಆರ್‌ಝಡ್‌ ವಿಭಾಗದಲ್ಲಿ ಉಡುಪಿಯ 3 ಮತ್ತು ಉತ್ತರ ಕನ್ನಡದ 49 ಪ್ರದೇಶ ಪತ್ತೆ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಯಾವುದೂ ಇಲ್ಲ.

ಸಿಆರ್‌ಝಡ್‌ ವ್ಯಾಪ್ತಿಯ ಪ್ರಕರಣ ಹಸುರು ಪೀಠದಲ್ಲಿರುವ ಕಾರಣ ಮರಳು ಎತ್ತುವಳಿಯಾಗಿಲ್ಲ. ನದಿ ಪಾತ್ರಗಳಲ್ಲಿ ಮಂಜೂರು ಮಾಡಿರುವ ಗುತ್ತಿಗೆ ಪ್ರದೇಶದಿಂದ ಆಗಸ್ಟ್‌ನಿಂದ ಇದುವರೆಗೆ ನಾನ್‌ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡದಲ್ಲಿ 21,663 ಮೆ. ಟನ್‌, ಉಡುಪಿಯಲ್ಲಿ 10,994 ಮೆ ಟನ್‌ ಮರಳು ತೆಗೆದು ವಿಲೇವಾರಿ ಮಾಡಲಾಗಿದೆ.

ಮರಳಿನ ಕೊರತೆ
ಕಳೆದ ವರ್ಷ ಉಭಯ ಜಿಲ್ಲೆಗಲ್ಲಿ ಮರಳುಗಾರಿಕೆಗೆ ಯಾವುದೆ ಸಮಸ್ಯೆ ಇರಲಿಲ್ಲ. ಉಡುಪಿಯಲ್ಲಿ 1.41 ಲಕ್ಷ ಮೆಟ್ರಿಕ್‌ ಟನ್‌, ದಕ್ಷಿಣ ಕನ್ನಡದಲ್ಲಿ 1.75 ಲಕ್ಷ ಮೆ.ಟನ್‌ ಮರಳು ಲಭ್ಯವಾಗಿತ್ತು. ಈ ಸಾಲಿನಲ್ಲಿ ಉಡುಪಿಯಲ್ಲಿ 36,786 ಮೆ.ಟನ್‌ ಹಾಗೂ ದಕ್ಷಿಣ ಕನ್ನಡದಲ್ಲಿ 80,700 ಮೆ.ಟನ್‌ ಮರಳು ಮಾತ್ರ ಲಭ್ಯವಾಗಿದೆ. ಹಾಗಾಗಿ ಒಂದೇ ವರ್ಷದಲ್ಲಿ ದಕ್ಷಿಣ ಕನ್ನಡದಲ್ಲಿ ಸುಮಾರು 94 ಸಾವಿರ ಮೆ.ಟನ್‌, ಉಡುಪಿಯಲ್ಲಿ 1.4 ಲಕ್ಷ ಮೆ.ಟನ್‌ ಮರಳು ಕೊರತೆಯಾಗಿದೆ.

Advertisement

ನಿರ್ಮಾಣ ವಲಯದ
ಮೇಲೆ ಪರಿಣಾಮ
ಮರಳು ಕೊರತೆಯು ಉಭಯ ಜಿಲ್ಲೆಗಳ ನಿರ್ಮಾಣ ವಲಯದ ಮೇಲೆ ನೇರ ಪರಿಣಾಮ ಬೀರಿದ್ದು, ಕಟ್ಟಡ, ಮನೆ ನಿರ್ಮಾಣ ಸಹಿತ ಹಲವು ಕಾಮಗಾರಿಗಳಿಗೆ ತೊಡಕಾಗಿದೆ. ಆದರೆ ನಾನ್‌ ಸಿಆರ್‌ಝಡ್‌ ವ್ಯಾಪ್ತಿಯ ಮರಳನ್ನು ಬಹುಪಾಲು ಸರಕಾರಿ ಕಾಮಗಾರಿಗೆ ಬಳಸಿಕೊಳ್ಳುವ ಕಾರಣ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಅಡ್ಡಿಯಾಗಿಲ್ಲ. ಮರಳಿನ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ನಿರ್ಮಾಣ ವಲಯದವರ ಆಗ್ರಹ.

7 ಕೋ.ರೂ. ಅಧಿಕ
ರಾಜಸ್ವ ಸಂಗ್ರಹ
ಉಭಯ ಜಿಲ್ಲೆಗಳಲ್ಲಿ 2022-23ನೇ ಸಾಲಿನಲ್ಲಿ ದಕ್ಷಿಣ ಕನ್ನಡದಲ್ಲಿ 2.58 ಕೋ.ರೂ., ಉಡುಪಿಯಲ್ಲಿ 2.62 ಕೋ.ರೂ. ಸಂಗ್ರಹವಾಗಿತ್ತು. ಆದರೆ ಈ ವರ್ಷದಲ್ಲಿ ಅನುಕ್ರಮವಾಗಿ 1.53 ಕೋ.ರೂ. ಹಾಗೂ 58 ಲಕ್ಷ ರೂ. ಸಂಗ್ರಹವಾಗಿದೆ. ಕಳೆದ ವರ್ಷ 5.20 ಲಕ್ಷ ರೂ. ಸಂಗ್ರಹವಾಗಿದ್ದರೆ, ಈ ಬಾರಿ 2. 11 ಕೋಟಿ ರೂ. ಗೆ ಇಳಿದಿದೆ.

ಈಗಾಗಲೇ ಗುರುತಿಸಲಾಗಿರುವ ಮರಳು ದಿಬ್ಬಗಳು ಮತ್ತು ಬ್ಲಾಕ್‌ ಪ್ರದೇಶಗಳಲ್ಲಿ ತಾತ್ಕಾಲಿಕ ಪರವಾನಿಗೆ ಅಥವಾ ಗುತ್ತಿಗೆ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ. ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ತೆಗೆದಿರುವ ಮರಳು ವಿಲೇವಾರಿ ನಡೆದಿದೆ. ಸಿಆರ್‌ಝಡ್‌ನ‌ಲ್ಲಿ ಯಾವುದೇ ಎತ್ತುವಳಿಯಾಗಿಲ್ಲ.
-ಎಸ್‌.ಎಸ್‌. ಮಲ್ಲಿಕಾರ್ಜುನ,
ಗಣಿ, ಭೂವಿಜ್ಞಾನ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next