Advertisement

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

01:03 AM May 04, 2024 | Team Udayavani |

ಮಂಗಳೂರು: ಸದ್ಯಕ್ಕೆ ಅಧಿಕೃತ ಸಿಆರ್‌ಝಡ್‌ ವಲಯದ ಮರಳು ಸಿಗುವ ಸಾಧ್ಯತೆ ಕಡಿಮೆ.ಕರ್ನಾಟಕ ರಾಜ್ಯ ಕರಾವಳಿ ನಿರ್ವಹಣ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಗಳಿಗೆ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಬ್ಬಗಳ ತೆರವು ಮಾಡುವ ಬಗ್ಗೆ ಸ್ಪಷ್ಟ ನಿಲುವು ಇಲ್ಲದಿರುವುದು ಇದಕ್ಕೆ ಕಾರಣ. ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭವಾದರೆ ಹೇಗೂ ಸಿಆರ್‌ಝಡ್‌ ಮರಳು ತೆರವಿಗೆ ನಿಷೇಧವಿರುತ್ತದೆ. ಹಾಗಾಗಿ ಬಹುತೇಕ ಇನ್ನೂ ಆರೇಳು ತಿಂಗಳು ಸಿಆರ್‌ಝಡ್‌ ಮರಳು ಕನಸಾದೀತು.

Advertisement

ಮರಳು ದಿಬ್ಬಗಳಿಂದ ಮರಳು ತೆಗೆಯುವ ಕುರಿತು ಅನುಸರಿಸಬೇಕಾದ ಕ್ರಮಗಳೇನು ಎಂದು ಸೂಕ್ತ ನಿರ್ದೇಶನ ಕೋರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರನ್ನು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕೋರಲಾಗಿತ್ತು. ಈ ಬಗ್ಗೆ ಸರಕಾರದ ಅರಣ್ಯ, ಪರಿಸರ ಇಲಾಖೆಯ ಕಾರ್ಯದರ್ಶಿಗಳು ಉತ್ತರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಹೊರಡಿಸುವ ಆದೇಶವನ್ನು ನಿರೀಕ್ಷಿಸುವಂತೆ ತಿಳಿಸಿದ್ದಾರೆ. ಹಾಗಾಗಿ ಈ ವಿಚಾರವೀಗ ಮತ್ತಷ್ಟು ಜಟಿಲಗೊಂಡಿದೆ.

ಈ ಮೊದಲು ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ಸಂಗ್ರಹಗೊಂಡು ದಿಬ್ಬಗಳಾಗಿ ಮಾರ್ಪಟ್ಟು ಮೀನುಗಾರಿಕೆ/ ಜನಸಾಮಾನ್ಯರು ಓಡಾಡುವ ದೋಣಿಗಳ ಸಂಚಾರಕ್ಕೆ ತಡೆ ಒಡ್ಡುವ 8 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಕರ್ನಾಟಕ ಕರಾವಳಿ ನಿರ್ವಹಣ ಪ್ರಾಧಿಕಾರ, ಅರಣ್ಯ, ಪರಿಸರ ಇಲಾಖೆಯು 06-12-2023ರಂದು ಆದೇಶ ನೀಡಿತ್ತು. ಆ ಬಳಿಕ 17-01-2024ರಂದು ನಡೆದ ಜಿಲ್ಲೆಯ 7 ಸದಸ್ಯರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿತ್ತು.

ಕರ್ನಾಟಕ ರಾಜ್ಯ ಕರಾವಳಿ ನಿರ್ವಹಣ ಪ್ರಾಧಿಕಾರವು ನೀಡಿರುವ ನಿರಾಕ್ಷೇಪಣ ಪತ್ರದಲ್ಲಿ ಹೆಚ್ಚುವರಿ ಷರತ್ತು ಎಂಬ ಶೀರ್ಷಿಕೆಯಡಿಯಲ್ಲಿ “ರಾಷ್ಟ್ರೀಯ ಹಸುರು ಪೀಠ ನ್ಯಾಯ ಮಂಡಳಿಯು ಒ.ಎ. ನಂ. 252/2017 ರಲ್ಲಿ ನೀಡಿರುವ ಆದೇಶ ಹಾಗೂ ಸರ್ವೋಚ್ಚ ನ್ಯಾಯಾಲಯದ ಮಧ್ಯಾಂತರ ಆದೇಶವನ್ನು ಪಾಲನೆ ಮಾಡಿ ತೆರವುಗೊಳಿಸಬಹುದಾಗಿದೆ’ ಎಂದು ತಿಳಿಸಲಾಗಿತ್ತು.

ನಾನ್‌ ಸಿಆರ್‌ಝಡ್‌ ಮರಳು ಮಾತ್ರ ಗತಿ
ಜಿಲ್ಲೆಯ ನಾನ್‌ ಸಿಆರ್‌ಝಡ್‌ ಪ್ರದೇಶದಲ್ಲಿ 29 ಬ್ಲಾಕ್‌ಗಳನ್ನು ಈಗಾಗಲೇ ಗುರುತಿಸಿ ಗುತ್ತಿಗೆ ನೀಡಲಾಗಿದ್ದು, ಅದರ ಮರಳನ್ನು ಬಳಸಬಹುದು ಎನ್ನುತ್ತಾರೆ ಅಧಿಕಾರಿಗಳು. ನಿರ್ಮಾಣ ಚಟುವಟಿಕೆಗಳಿಗೆ ಈ ಮರಳು ಬಳಸಬಹುದು ಎನ್ನುತ್ತಾರಾದರೂ ಗುತ್ತಿಗೆದಾರರ ಪ್ರಕಾರ ಈ ಮರಳು ಒಳಪ್ರದೇಶಗಳಿಂದ ಬರುವ ಕಾರಣ ದರ ಜಾಸ್ತಿ.
ಸದ್ಯಕ್ಕೆ ಗುತ್ತಿಗೆದಾರರು ರಾತ್ರಿ ಅಕ್ರಮವಾಗಿ ಬರುವ ಸಿಆರ್‌ಝಡ್‌ನ‌ ಮರಳನ್ನೇ ನೆಚ್ಚಿಕೊಂಡಿದ್ದಾರೆ. ಈ ಮರಳು ಉತ್ತಮ ದರ್ಜೆಯದ್ದು, ಅಲ್ಲದೆ ದರವೂ ಕಡಿಮೆ ಎನ್ನುವ ಕಾರಣಕ್ಕೆ ಅದನ್ನೇ ಬಳಸುವುದು ಜಾಸ್ತಿ.

Advertisement

ಒಂದು ವರ್ಷದಿಂದ ಸಿಆರ್‌ಝಡ್‌ ಮರಳಿಲ್ಲ
2023ರ ಮೇ ಬಳಿಕ ಜಿಲ್ಲೆಯಲ್ಲಿ ಸಿಆರ್‌ಝಡ್‌ ಪ್ರದೇಶದ ಮರಳು ತೆಗೆಯುವುದು ಸಾಧ್ಯವಾಗಿಲ್ಲ. ಸಿಆರ್‌ಝಡ್‌ ಪ್ರದೇಶದ ಮರಳನ್ನು ವಾಣಿಜ್ಯವಾಗಿ ಮಾರಾಟ ಮಾಡುವುದಕ್ಕೆ ಹಿಂದೆ ಸಿಆರ್‌ಝಡ್‌ ನಿಯಮಗಳ ಪ್ರಕಾರ ಅವಕಾಶ ಇರಲಿಲ್ಲ. ಕೇವಲ ಮರಳು ದಿಬ್ಬಗಳ ಮರಳನ್ನು ತೆರವು ಮಾಡಿ, ನದಿಯಲ್ಲೇಇರುವ ಹೊಂಡಗಳಿಗೆ ತುಂಬುವುದಕ್ಕೆ ಮಾತ್ರ ಅವಕಾಶ. ಮಾರಾಟ ಮಾಡುವಂತಿಲ್ಲ. ಪ್ರಸ್ತುತ ಹೊಸ ಸಿಆರ್‌ಝಡ್‌ ನಿಯಮಗಳು ಜಾರಿಗೆ ಬಂದಿದ್ದರೂ ಮರಳು ತೆರವಿನ ಕುರಿತು ಮಾರ್ಗಸೂಚಿಗಳು ಇನ್ನೂ ಬಾರದಿರುವುದು ಸಮಸ್ಯೆಗೆ ಕಾರಣ. ಈ ಎಲ್ಲ ಕಾರಣಗಳಿಂದ ಈ ಸೀಸನ್‌ನಲ್ಲೂ ಸಿಆರ್‌ಝಡ್‌ ಮರಳು ಸಿಗುವ ಸಾಧ್ಯತೆ ಕಡಿಮೆ. ಏನಿದ್ದರೂ ಕೇಂದ್ರ ಪರಿಸರ ಸಚಿವಾಲಯದಿಂದ ಮಾರ್ಗಸೂಚಿ ಬರಬೇಕಿದೆ.

ಸಿಆರ್‌ಝಡ್‌ ವ್ಯಾಪ್ತಿ ಇರುವ ದ.ಕ. ಜಿಲ್ಲೆ ಹಾಗೂ ಉಡುಪಿಯಲ್ಲಿ ಮರಳು ತೆಗೆಯುವಂತಿಲ್ಲ, ಆದರೆ ಕಾರವಾರದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಮಾತ್ರ ಮರಳು ತೆರವಿಗೆ ಆದೇಶ ಮಾಡಿದ್ದಾರೆ. ಅವರು ಯಾವ ಮಾನದಂಡ ಅನುಸರಿಸಿದ್ದಾರೆ ತಿಳಿಯದು. ಅಲ್ಲಿ ಕೊಡುವಾಗ ಇಲ್ಲಿ ಯಾಕಿಲ್ಲ ಎನ್ನುವುದು ಕೆಲವು ಮರಳು ತೆಗೆಯುವವರ ಪ್ರಶ್ನೆ.

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next