Advertisement

ಬಗೆಹರಿಯದ ಗ್ರಂಥಾಲಯದ ಜಾಗದ ಸಮಸ್ಯೆ

09:02 PM Nov 13, 2019 | Team Udayavani |

ಸಕಲೇಶಪುರ: ತಾಲೂಕು ಗ್ರಂಥಾಲಯ ಕಟ್ಟಲು ಬಂದಿರುವ ಅನುದಾನ ಜಾಗದ ಸಮಸ್ಯೆಯಿಂದಾಗಿ ಅನುದಾನ ಹಿಂತಿರುಗಿ ಹೋಗುವ ಸಾಧ್ಯತೆ ಇದ್ದು ಇದರಿಂದ ಸುಂದರ ಗ್ರಂಥಾಲಯ ಕಟ್ಟಡ ತಾಲೂಕಿಗೆ ಮತ್ತೊಮ್ಮೆ ಮರೀಚಿಕೆಯಾಗುವ ಸಾಧ್ಯತೆಯಿದೆ.

Advertisement

ಪಟ್ಟಣದ ಇಂದಿರಾ ಕ್ಯಾಂಟೀನ್‌ ಪಕ್ಕ ಸುಮಾರು 2 ಗುಂಟೆಯಷ್ಟು ಗ್ರಂಥಾಲಯಕ್ಕೆ ಮೀಸಲಾದ ಜಾಗವನ್ನು ಎತ್ತಿನಹೊಳೆ ಯೋಜನೆ ಕಚೇರಿಗೆ ನೀಡಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಕಚೇರಿ ಪಕ್ಕದಲ್ಲೇ ಇದ್ದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರುವ ಹೆಂಚಿನ ಮನೆಯೊಂದನ್ನು ಗ್ರಂಥಾಲಯಕ್ಕಾಗಿ ಕೆಡವಿ ಆ ಜಾಗದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟುವ ತೀರ್ಮಾನಕ್ಕೆ ಬರಲಾಗಿತ್ತು.

ಈ ಹಿನ್ನೆಲೆಯಲ್ಲಿ ಗ್ರಂಥಾಲಯದ ಮುಖ್ಯ ಪಾಲಕ ಚಂದ್ರಕುಮಾರ್‌ ಶಾಸಕ ಎಚ್‌.ಕೆ. ಕುಮಾರಸ್ವಾಮಿರವರ ಜೊತೆ ನಿರಂತರ ಶ್ರಮ ಹಾಕಿ ಸುಮಾರು 30 ಲಕ್ಷ ರೂ. ಅನುದಾನವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಬಿಡುಗಡೆ ಮಾಡಿಸಿದ್ದರು.

ಇದೀಗ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು 30 ಲಕ್ಷ ರೂ. ಅನುದಾನ ಸಿದ್ಧವಿದೆ. ಆದರೆ ಲೋಕೋಪಯೋಗಿ ಇಲಾಖೆಯವರು ಇದೀಗ ನಾವು ಸಂಪೂರ್ಣ ಜಾಗ ಬಿಟ್ಟುಕೊಡುವುದಿಲ್ಲ, ಅರ್ಧ ಜಾಗ ಮಾತ್ರ ಬಿಟ್ಟು ಕೊಡುತ್ತೇವೆ ಎನ್ನುತ್ತಿದ್ದು ಇದರಿಂದ ಬಂದಿರುವ ಹಣ ಹಿಂತಿರುಗಿ ಹೋಗುವ ಸಾಧ್ಯತೆಗಳಿದೆ.

ಅನುದಾನ ವಾಪಸ್‌: ಈ ಹಿಂದೆಯೂ ಒಮ್ಮೆ ಇದೇ ರೀತಿ ಗೊಂದಲ ಉಂಟಾಗಿ ಹಣ ಹಿಂತಿರುಗಿ ಹೋಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಇದೇ ರೀತಿ ಗೊಂದಲ ಮುಂದುವರಿದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಂಥಾಲಯ ನಿರ್ಮಾಣಕ್ಕೆ ಯಾವುದೇ ಅನುದಾನ ಬರುವುದಿಲ್ಲ.

Advertisement

ಶಿಥಿಲ ಕಟ್ಟಡದಲ್ಲಿ ಗ್ರಂಥಾಲಯ: ಈಗಿರುವ ಗ್ರಂಥಾಲಯ ಕಟ್ಟಡವು ಸ್ಕೌಟ್‌ ಮತ್ತು ಗೈಡ್ಸ್‌ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುಸುತ್ತಿದೆ. ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ನೀರು ಸೋರುವುದರಿಂದ ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳು ಹಾಳಾಗಿವೆ. ಕಟ್ಟಡ ಯಾವುದೇ ಸಂಧರ್ಭದಲ್ಲಿ ಬೀಳುವ ಸಾಧ್ಯತೆಯಿದ್ದು ಈ ನಿಟ್ಟಿನಲ್ಲಿ ನೂತನ ಕಟ್ಟಡದ ಅವಶ್ಯಕತೆಯಿದೆ. ಇದೇ ವೇಳೆ ಶಾಸಕರು ಸಮಸ್ಯೆಯನ್ನು ಬಗೆಹರಿಸಲು ಮುಂದಾಗದೇ ಗುದ್ದಲಿ ಪೂಜೆಯನ್ನು ಮಾಡಲು ಹೊರಟಿದ್ದು ಮುಂದೇನೆಂದು ಕಾದು ನೋಡಬೇಕಾಗಿದೆ.

ಒಟ್ಟಾರೆಯಾಗಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕು ಕೇಂದ್ರದಲ್ಲೆ ಸುಸಜ್ಜಿತ ಗ್ರಂಥಾಲಯದ ಭಾಗ್ಯ ಇಲ್ಲದಂತಾಗಿದ್ದು ಕೂಡಲೇ ಶಾಸಕರು ಇತ್ತ ಗಮನಹರಿಸಿ ಜಾಗದ ಸಮಸ್ಯೆಯನ್ನು ಬಗೆಹರಿಸಿ ಬಂದಿರುವ ಅನುದಾನ ಹಿಂತಿರುಗಿ ಹೋಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಹಾಗೂ ಗ್ರಂಥಾಲಯ ಕಟ್ಟಡದ ನಿರ್ಮಾಣಕ್ಕೆ ಇನ್ನು ಹೆಚ್ಚಿನ ಅನುದಾನ ತರಲು ಶ್ರಮ ವಹಿಸಬೇಕಾಗಿದೆ.

ಬದಲಿ ನಿವೇಶನ ನೀಡಿಲ್ಲ: ಗ್ರಂಥಾಲಯಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಈ ಹಿಂದೆ ಎತ್ತಿನಹೊಳೆ ಯೋಜನೆಯವರಿಗೆ ನೀಡಲಾಯಿತು. ಇದರ ಬದಲಿ ಜಾಗವಾಗಿ ಪಕ್ಕದ ಜಾಗವನ್ನು ನೀಡಲು ಗುರುತಿಸಲಾಗಿತ್ತು. ಇದೀಗ ಲೋಕೋಪಯೋಗಿ ಇಲಾಖೆಯವರು ಪೂರ್ತಿ ಜಾಗ ನೀಡಲು ಮುಂದಾಗುತ್ತಿಲ್ಲ. ಕಟ್ಟಡ ಕಾಮಗಾರಿ ಆರಂಭಿಸದಿದ್ದಲ್ಲಿ ಬಂದಿರುವ ಅನುದಾನ ಹಿಂತಿರುಗಿ ಹೋಗುತ್ತದೆ ಎಂದು ಸಕಲೇಶಪುರ ಕೇಂದ್ರ ಗ್ರಂಥಾಲಯ ಗ್ರಂಥಪಾಲಕ ಚಂದ್ರಕುಮಾರ್‌ ತಿಳಿಸಿದ್ದಾರೆ.

ಗ್ರಂಥಾಲಯ ಕಟ್ಟಡ ನಿರ್ಮಾಣವಾಗಲು ಜಾಗದ ಸಮಸ್ಯೆಯನ್ನು ಕೂಡಲೇ ಶಾಸಕರು ಬಗೆಹರಿಸಬೇಕು. ಜಾಗದ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು.
-ನಾರಾಯಣ ಆಳ್ವ, ಸಮಾಜ ಸೇವಕರು

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next