Advertisement

ಬಿಡುಗಡೆಯಾಗದ ಅನುದಾನ; ಸಭಾತ್ಯಾಗ

06:47 AM Jul 01, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ಸೋಂಕು ತಡೆಗೆ ಪ್ರತಿ ವಾರ್ಡ್‌ಗೆ ತಲಾ 20ಲಕ್ಷ ಅನುದಾನ ಮೀಸಲಿಡಲಾಗಿದೆ. ಆದರೆ, ಈ ಮೊತ್ತ ತುರ್ತಾಗಿ ಬಿಡುಗಡೆ ಆಗುತ್ತಿಲ್ಲ ಹಾಗೂ ಪೌರಕಾರ್ಮಿಕರಿಗೆ ವಿಶ್ರಾಂತಿ ಕೇಂದ್ರ ನಿರ್ಮಾಣಕ್ಕೆ 4ಜಿ ವಿನಾಯಿತಿ ನೀಡುವ ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ನಗರದಲ್ಲಿ ಪ್ರತಿವಾರ್ಡಿನಲ್ಲೂ ಕೋವಿಡ್‌ 19 ತಡೆಗೆ ಸಕ್ರಿಯ ಯೋಜನೆ, ಪೂರಕ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗೂ ತಲಾ 20 ಲಕ್ಷ ರೂ. ಮೀಸಲಿಡಲಾಗಿದೆ.

Advertisement

ಜತೆಗೆ ಅಧಿಕಾರಿಗಳ ವಿಪತ್ತು ನಿರ್ವಹಣಾ ಸಮಿತಿ ರಚಿಸಿದ್ದು, ಇದಕ್ಕೆ ಪಾಲಿಕೆ ಸದಸ್ಯರೇ ಅಧ್ಯಕ್ಷರಾಗಿದ್ದಾರೆ. ಆದರೆ, ಅನುದಾನ ಮೀಸಲಿಟ್ಟು ತಿಂಗಳಾದರೂ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಸ್ವಪಕ್ಷದ ಸದಸ್ಯರಲ್ಲೇ ಭಿನ್ನರಾಗ!: ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ, ಕೋವಿಡ್‌ 19 ತಡೆಗೆ ಪ್ರತಿ ವಾರ್ಡ್‌ಗೂ 20 ಲಕ್ಷ  ಅನುದಾನ ಮೀಸಲಿಡಲಾಗಿದೆ. ಆದರೆ, ಇದನ್ನು ಹೇಗೆ ಹಾಗೂ ಯಾವುದಕ್ಕೆ ಬಳಸಬೇಕು ಎನ್ನುವ ಬಗ್ಗೆ ಸ್ಪಷ್ಟನೆ ಸಿಗುತ್ತಿಲ್ಲ. ವಲಯ ಜಂಟಿ ಆಯುಕ್ತರು ಸೇರಿದಂತೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಸಮಜಾಯಿಷಿ  ನೀಡಿದ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ, ವಿಪತ್ತು ನಿರ್ವಹಣಾ ಕೋಶವನ್ನು ಈಗಾಗಲೇ ರಚನೆ ಮಾಡಲಾಗಿದ್ದು, ಇದಕ್ಕೆ ಪಾಲಿಕೆಯ ಆಯಾ ವಾರ್ಡ್‌ನ ಸದಸ್ಯರೇ ಅಧ್ಯಕ್ಷರಾಗಿರುತ್ತಾರೆ. ಅನುದಾನವನ್ನು ಸೋಂಕು ತಡೆಗೆ ಹೇಗೆ ಬಳಸಿಕೊಳ್ಳಬೇಕು ಮತ್ತು ಯಾವುದಕ್ಕೆ ಮೀಸಲಿಡಬೇಕು ಎನ್ನುವ ಬಗ್ಗೆ ವಾರ್ಡ್‌ ಕಮಿಟಿಯಲ್ಲಿ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿವರಿಸಿದರು.

ಕಟ್ಟೆಸತ್ಯನಾರಾಯಣ, ಸಭೆ ಮಾಡುತ್ತಿದ್ದೇವೆ. ಆದರೆ, ಈ ಕಡತಗಳು ಮುಂದಕ್ಕೆ ಹೋಗುತ್ತಿಲ್ಲಎಂದು ಆಕ್ಷೇಪ ವ್ಯಕ್ತಪಡಿಸಿದರು. “ಪ್ರತಿ ವಾರ್ಡ್‌ಗೆ 20 ಲಕ್ಷರೂ. ಅನುದಾನದ ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡಿದರೆ ಉತ್ತಮ’ ಎಂದು  ಲಿಕೆ ಉಳಿದ ಸದಸ್ಯರು ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಎಂ. ಗೌತಮ್‌ಕುಮಾರ್‌, ಈ ಅನುದಾನವನ್ನು ಪಾಲಿಕೆ ಸದಸ್ಯರ ವಿವೇಚನೆಗೆ ಬಿಡಲಾಗಿದೆ ಎಂದು ಚರ್ಚೆಗೆ ತೆರೆ ಎಳೆದರು.

4ಜಿ ವಿನಾಯಿತಿಗೆ ಆಕ್ಷೇಪ: ನಗರದಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಕೇಂದ್ರ ನಿರ್ಮಾಣ ಮಾಡಲು 20 ಕೋಟಿ ರೂ. ಮೊತ್ತದ ಯೋಜನೆಗೆ “4ಜಿ ವಿನಾಯಿತಿ’ ಪ್ರಸ್ತಾವನೆಗೆ ಎಂ. ಶಿವರಾಜು ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಪಾಲಿಕೆ ಸದಸ್ಯರ ಗಮನಕ್ಕೆ ತರಬೇಕು. ಆದರೆ, ಪೌರಕಾರ್ಮಿಕರಿಗೆ ವಿಶ್ರಾಂತಿ ಕೇಂದ್ರ ನಿರ್ಮಾಣ ಮಾಡಲು 20 ಕೋಟಿ ರೂ. ಮೊತ್ತದ ಯೋಜನೆಗೆ 4ಜಿ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಲಾಗಿದೆ. ಇದೊಂದು ಹಗರಣವಾಗುವ ಸಾಧ್ಯತೆ ಇದೆ. ಇದು ಸದ್ಯದ ತುರ್ತು ಅಲ್ಲ. ಟೆಂಡರ್‌ ಮೂಲಕವೇ ಕಾಮಗಾರಿ ನಡೆಸಿ ಎಂದರು.

Advertisement

ಮಧ್ಯಪ್ರವೇಶಿಸಿದ ಪದ್ಮನಾಭರೆಡ್ಡಿ, “ಇದು ಕಾಂಗ್ರೆಸ್‌ ಮಾಡಿದ ಪಾಪ. ಕಾಂಗ್ರೆಸ್‌  ಅವಧಿಯಲ್ಲೇ ಶುಭ್ರ ಬೆಂಗಳೂರು ಪ್ರಸ್ತಾವನೆಯಲ್ಲಿ ಈ ವಿಷಯವೂ ಇತ್ತು’ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, “ಮೇಯರ್‌ ಮುಂದೆ ಬಂದು ಈ ಪ್ರಸ್ತಾವನೆ ಕೈಬಿಡಬೇಕು ಹಾಗೂ ಪ್ರತಿ ವಾರ್ಡ್‌ಗೂ ತಲಾ  20ಲಕ್ಷ ಅನುದಾನ ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು. ಮೇಯರ್‌ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋಣ’ ಎಂದು ಹೇಳಿದರೂ ಸ್ಪಂದಿಸದ ವಿರೋಧ ಪಕ್ಷದ ಸದಸ್ಯರು ಪ್ರಸ್ತಾವನೆ ಹಾಳೆಗಳನ್ನು ಹರಿದು ಬಿಸಾಕಿ  ಸಭಾತ್ಯಾಗ ಮಾಡಿದರು.

ನಗರದಲ್ಲಿ ಪ್ರತ್ಯೇಕ ಚಿತಾಗಾರಕ್ಕೆ ಮನವಿ: ನಗರದಲ್ಲಿ ಸೋಂಕಿತರ ಶವಸಂಸ್ಕಾರವನ್ನೂ ಈಗಿರುವ ಚಿತಾಗಾರದಲ್ಲೇ ಮಾಡಲಾಗುತ್ತಿದೆ. ಇದರಿಂದ ಸೋಂಕು ಹಬ್ಬುವ ಸಾಧ್ಯತೆ ಇದೆ. ಅಲ್ಲದೆ, ಈ ಕೇಂದ್ರಗಳಿಗೆ ಬರುವ ಶವಗಳ  ಸಂಸ್ಕಾರಕ್ಕೂ ಸಮಸ್ಯೆಯಾಗುತ್ತಿದೆ. ಪ್ರತಿ ಬಾರಿ ಚಿತಾಗಾರವನ್ನು ಸ್ಯಾನಿಟೈಸ್‌ ಮಾಡಬೇಕು ಮತ್ತು ಸಿಬ್ಬಂದಿ ಸಹ ಪಿಪಿಇ ಕಿಟ್‌ ಧರಿಸಿಕೊಳ್ಳ ಬೇಕು.ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಪಾಲಿಕೆ ಸದಸ್ಯ ಎಂ. ಶಿವರಾಜು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌ ಅನಿಲ್‌ಕುಮಾರ್‌, ನಗರದಲ್ಲಿ ಸೋಂಕಿತರ ಶವಸಂಸ್ಕಾರಕ್ಕೆ ಜಾಗದ ಕೊರತೆ ಉಂಟಾಗು ತ್ತಿದ್ದು, ನಗರದ ಹೊರ ವಲಯದಲ್ಲಿ ಜಾಗ ಗುರುತಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಕ್ರಮ  ಕೈಗೊಳ್ಳಲಾಗುವುದು ಎಂದರು.

ಮತ್ತೆ ವರದಿ ಅಪೂರ್ಣ!: ಟೋಟಲ್‌ ಸ್ಟೇಷನ್‌ ಸರ್ವೇಯ ಅವ್ಯವಹಾರದ ಬಗ್ಗೆ ಈ ಬಾರಿಯ ಮಾಸಿಕ ಸಭೆಯಲ್ಲೂ ಸಮಗ್ರ ಮಾಹಿತಿ ಲಭ್ಯವಾಗಲಿಲ್ಲ. ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಈ ವಿಷಯ ಪ್ರಸ್ತಾಪಿಸಿದರು.  ಇದಕ್ಕೆ ಉತ್ತರಿಸಿದ ಆಯುಕ್ತರು, ಇನ್ನೂ ವರದಿ ಅಪೂರ್ಣವಾಗಿದೆ. ಈ ಬಗ್ಗೆ ನನಗೇ ಸಮಾಧಾನವಿಲ್ಲ. ಒಟ್ಟು 251 ಕೋಟಿ ರೂ. ನಷ್ಟವಾಗಿರುವುದು ಕಂಡುಬಂದಿದೆ. 2017-18ನೇ ಸಾಲಿನವರೆಗೆ ವರದಿ ಪರಿಷ್ಕರಿಸಲಾಗಿದೆ. ಮಾಹಿತಿ ಶೀಘ್ರ ನೀಡಲಾಗುವುದು ಎಂದರು.

ನಮಗೆ ಟ್ಯಾಬ್‌ ಬೇಡ!: “ನಮಗೆ ಟ್ಯಾಬ್‌(ಐ ಪಾಡ್‌) ಬೇಡ. ಪಾಲಿಕೆ ತೆಗೆದುಕೊಳ್ಳುವ ನಿರ್ಣಯಗಳು, ಅಜೆಂಡಾ ಹಾಗೂ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಸಾಕು, ನಾವು ಪಾಲಿಕೆಗೆ ಹೊರೆ ಹಾಕಲು ಇಚ್ಛಿಸುವುದಿಲ್ಲ…’ ಎಂಬ ಉದ್ಗಾರ  ನಾಮನಿರ್ದೇಶಿತ ಸದಸ್ಯರಿಂದ ಬಂತು. “ಪಾಲಿಕೆ ಸಭೆಯಲ್ಲಿ ನಮ್ಮನ್ನು ಹೊರಗಿನವರಂತೆ ಕಾಣಲಾಗು ತ್ತಿದೆ. ನಾವು ಮಾಹಿತಿಗಾಗಿ ಟ್ಯಾಬ್‌ ಕೇಳಿದ್ದೇವೆ. ಕಾಗದದಲ್ಲೇ ಮಾಹಿತಿ ನೀಡುವುದಾದರೆ, ನಮಗೆ ಟ್ಯಾಬ್‌ ಬೇಡ. ಅದೇ  ರೀತಿ,  ಕಾಂಗ್ರೆಸ್‌-ಜೆಡಿಎಸ್‌ ಆಡಳಿತ ಅವಧಿಯಲ್ಲಿ 20 ಜನ ನಾಮನಿರ್ದೇಶಿತ ಸದಸ್ಯರಿಗೆ ಟ್ಯಾಬ್‌ ನೀಡಲಾಗಿದೆ. ಇವರಿಂದ ಟ್ಯಾಬ್‌ ಹಿಂಪಡೆದಿಲ್ಲ. ಈ ಬಗ್ಗೆ ಸಭೆಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ  ಮೇಯರ್‌, ಕೌನ್ಸಿನ್‌ ಕಾರ್ಯದರ್ಶಿ ಮೂಲಕ ಮಾಹಿತಿ ನೀಡಲು ಕ್ರಮ ವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next