ಹಾಸನ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರಮೋದಿ ಅವರ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಭಾನುವಾರ ಹಾಸನ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಜೆ 5 ಗಂಟೆಗೆ ಮನೆಯಿಂದ ಹೊರ ಬಂದ ಜನರು ಚಪ್ಪಾಳೆ, ಗಂಟೆ ಬಾರಿಸಿ, ಶಂಖ ಊದಿ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಬೆಳಗ್ಗೆ ಹಾಲಿನ ಮಳಿಗೆಗಳು ಮತ್ತು ಔಷಧಿ ಅಂಗಡಿಗಳು ತೆರೆದಿದ್ದು ಬಿಟ್ಟರೆ ಇಡೀ ದಿನ ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು, ಮಧ್ಯಾಹ್ನದ ವೇಳೆಗೆ ಔಷಧಿ ಅಂಗಡಿಗಳೂ ಮುಚ್ಚಿದ್ದವು. ರೈಲು ಸಂಚಾರ, ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ರೈಲ್ವೆ ನಿಲ್ದಾಣ, ಸಾರಿಗೆ ಬಸ್ ನಿಲ್ದಾಣ, ಖಾಸಗಿ ವಾಹನ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ರಸ್ತೆಗಳು ಖಾಲಿ: ವಾಹನಗಳು, ಜನರಿಂದ ಗಿಜಿಗಿಡುತ್ತಿದ್ದ ಹಾಸನದ ಬಿ.ಎಂ.ರಸ್ತೆ, ಎನ್.ಆರ್.ವೃತ್ತ, ನಗರ ಸಾರಿಗೆ ಬಸ್ ನಿಲ್ದಾಣ ರಸ್ತೆ, ಹಿಮ್ಸ್ ಆಸ್ಪತ್ರೆ ಆವರಣ ಸೇರಿದಂತೆ ಪ್ರಮುಖ ರಸ್ತೆಗಳು, ಕಟ್ಟಿನಕೆರೆ ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳು ಜನರಿಲ್ಲದೇ ಖಾಲಿಯಾಗಿದ್ದವು. ಪೂರ್ವಭಾವಿ ನಿರ್ಧಾರದಂತೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ, ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಟ್ಯಾಕ್ಸಿಗಳ ಸಂಚಾರವೂ ಇರಲಿಲ್ಲ. ಆಟೋಗಳ ಸಂಚಾರ ವಿರಳವಾಗಿತ್ತು.
ಮಾರುಕಟ್ಟೆ ಬಂದ್: ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶವಿತ್ತು. ಹಾಸನದ ಚರ್ಚ್‌ಗಳಲ್ಲಿ ಜನರು ಪ್ರಾರ್ಥನೆಗೆ ಸೇರಲಿಲ್ಲ. ಜಿಲ್ಲಾ ಕ್ರೀಡಾಂಗಣದ ಗೇಟಿಗೆ ಬೀಗ ಹಾಕಲಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಕಟ್ಟಿನ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಿದ್ದರು.
ಬಾಳೆಹಣ್ಣು ವರ್ತಕರು ಕೂಡ ಬೆಂಬಲ ಸೂಚಿಸಿ ವ್ಯಾಪಾರ ಮಾಡಲಿಲ್ಲ. ಮಹಾರಾಜ ಉದ್ಯಾನದ ಬಳಿ ಇರುವ ಹೇಮಾವತಿ ಪ್ರತಿಮೆ ಮುಂಭಾಗದ ಪ್ರದೇಶವೂ ಬಿಕೋ ಎನ್ನುತ್ತಿತ್ತು. ಕೊರೊನಾ ಮಹಾ ಮಾರಿಯನ್ನು ತಡೆಗಟ್ಟಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಜನರು ಜನರು ಸ್ವಯಂ ಪ್ರೇರಿತವಾಗಿ ಸ್ಪಂದಿಸಿ ಜನತಾ ಕರ್ಫ್ಯೂ ಯಸ್ವಿಗೊಳಿಸಿದರು.