Advertisement

ಸಾರಿಗೆ ಸಿಬಂದಿಗೆ ವೇತನರಹಿತ ಕಡ್ಡಾಯ ರಜೆ?

01:10 AM Jun 01, 2020 | Sriram |

ಬೆಂಗಳೂರು: ಪ್ರತಿ ತಿಂಗಳ ವೇತನ ಪಾವತಿಗೂ ಪರ ದಾಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರ್ಥಿಕ ಹೊರೆ ತಗ್ಗಿಸಲು ಶೇ.50 ಸಿಬಂದಿಯನ್ನು ಮುಂದಿನ 4 ತಿಂಗಳ ಕಾಲ ವೇತನ ರಹಿತ ಕಡ್ಡಾಯ ರಜೆಯ ಮೇಲೆ ಕಳುಹಿಸಲು ಚಿಂತನೆ ನಡೆಸಿವೆ.

Advertisement

ಕೋವಿಡ್ -19 ದಿಂದಾಗಿ ನಷ್ಟದ ಬಾಬ್ತು ಹೆಚ್ಚಿದೆ. ಈಗ ವೇತನ ಪಾವತಿ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶೇ. 50 ಸಿಬಂದಿಯನ್ನು ವೇತನ ರಹಿತ ಕಡ್ಡಾಯ ರಜೆ ಮೇಲೆ ಕಳುಹಿಸುವ ಚಿಂತನೆ ನಡೆದಿದೆ.

ನಾಲ್ಕೂ ನಿಗಮಗಳಲ್ಲಿ ಒಟ್ಟಾರೆ ಸುಮಾರು 1.20 ಲಕ್ಷ ನೌಕರರಿದ್ದು, ಒಂದು ವೇಳೆ ಇದು ಜಾರಿಗೆ ಬಂದರೆ, ಅರ್ಧಕ್ಕರ್ಧ ಸಿಬಂದಿಗೆ ಆಘಾತ ತರಲಿದೆ. ಆದರೆ ಇದು ಯಾವ ರೂಪದಲ್ಲಿ ಅನುಷ್ಠಾನಗೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೊಟೇಶನ್‌ ಮಾದರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಬಹುದು. ಇದರಿಂದ ಎಲ್ಲರಿಗೂ “ಡ್ಯೂಟಿ ‘ ಸಿಕ್ಕಂತಾಗಲಿದೆ ಮತ್ತು ವೇತನ ದೊರೆಯಲಿದೆ. ಮತ್ತೂಂದೆಡೆ ನಿಗಮಗಳಿಗೂ ಹೊರೆ ಆಗುವುದಿಲ್ಲ ಎಂಬ ಲೆಕ್ಕಾಚಾರ ಇದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇನ್ನೂ ಮೂರ್ತರೂಪದಲ್ಲಿಲ್ಲ : ಎಂಡಿ
ನಿಗಮದ ವೆಚ್ಚಗಳು ಸದ್ಯ ನಿಗಮಕ್ಕೆ ಹೊರೆ ಆಗುತ್ತಿವೆ. ಇದನ್ನು ತಗ್ಗಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬಂದಿಗೆ ವೇತನ ರಹಿತ ಕಡ್ಡಾಯ ರಜೆ ನೀಡಲು ಸಾಧ್ಯವೇ ಎಂಬ ಚಿಂತನೆಯೂ ನಡೆದಿದೆ. ಕಂತುಗಳಲ್ಲಿ ವೇತನ ಪಾವತಿ ಮಾಡಿ ರೊಟೇಶನ್‌ನಲ್ಲಿ ರಜೆ ನೀಡುವ ಯೋಚನೆಯೂ ಇದೆ. ಆದರೆ ಇನ್ನೂ ಇದು ಮೂರ್ತರೂಪ ಪಡೆದಿಲ್ಲ ಎಂದು ಕೆಎಸ್ಸಾರ್ಟಿಸಿ ಎಂಡಿ ಶಿವಯೋಗಿ ಕಳಸದ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ನಿಗಮಗಳ ಆರ್ಥಿಕ ಸಶಕ್ತೀಕರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಸುಧಾರಣ ಕ್ರಮಗಳ ಬಗ್ಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌ ಈಚೆಗೆ ನೀಡಿದ ಸಲಹೆಗಳಲ್ಲಿಯೂ ನಾಲ್ಕು ತಿಂಗಳ ವೇತನ ರಹಿತ ಕಡ್ಡಾಯ ರಜೆ ಪ್ರಸ್ತಾವ ಇದೆ. ಶೇ. 50ರಷ್ಟು ವೇತನ ತಡೆಹಿಡಿಯುವ ಸಂಬಂಧ ಎಂಪ್ಲಾಯೀಸ್‌ ಯೂನಿಯನ್‌ಗಳೊಂದಿಗೆ ಮಾತುಕತೆ ನಡೆಸುವ ಅಗತ್ಯವಿದೆ ಎಂದೂ ತಿಳಿಸಿದ್ದಾರೆ.

Advertisement

ನಿಗಮಗಳ ಮುಂದಿರುವ ಆಯ್ಕೆಗಳು
– ಮುಂದಿನ ಎರಡು-ಮೂರು ತಿಂಗಳ ಮಟ್ಟಿಗೆ ಶೇ. 50ರಷ್ಟು ಸಿಬಂದಿಗೆ ವೇತನರಹಿತ ರಜೆ.
– ಎಲ್ಲ ಸಿಬಂದಿಗೆ ಶೇ. 50ರಷ್ಟು ವೇತನ ಪಾವತಿಸಿ, ಉಳಿದ ವೇತನ ತಾತ್ಕಾಲಿಕ ತಡೆ. ಬಳಿಕ ಕಂತಿನಲ್ಲಿ ಪಾವತಿಸುವುದು.
– ಸಿಬಂದಿ ನೇಮಕಾತಿ ತಡೆಹಿಡಿದು ಉಳಿತಾಯ.
– ಭದ್ರತೆ ಮತ್ತಿತರ ವಿಭಾಗಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿರುವ ಅನಗತ್ಯ ಸಿಬಂದಿ ಕಡಿತ (ಶೇ. 10ಕ್ಕಿಂತಲೂ ಅಧಿಕ ಕಡಿತದ ಚಿಂತನೆ).
– ಹವಾನಿಯಂತ್ರಿತ ಬಸ್‌ಗಳ ಪ್ರಯಾಣ ದರವನ್ನು ಶೇ. 30-50ರಷ್ಟು ಹೆಚ್ಚಳ ಮಾಡುವುದು.
– ಹೆಚ್ಚುವರಿ ಭತ್ತೆ ನೀಡದಿರುವುದು.
– ನಿಗಮಗಳ ವ್ಯಾಪ್ತಿಯಲ್ಲಿರುವ ಜಾಗಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಅಭಿವೃದ್ಧಿಪಡಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next