Advertisement
ನಗರದ ಜನರಿಗೆ ಮಾಹಿತಿ ತಂತ್ರಜ್ಞಾನ ಸೇವೆ ಬಳಕೆಗೆ ಸಹಕಾರಿಯಾದ ಒಎಫ್ಸಿ ಕೇಬಲ್‌ಗಳನ್ನು ಅಳವಡಿಸುತ್ತಿರುವ ಸಂಸ್ಥೆಗಳು ಲಾಭಕ್ಕಾಗಿ ಸಾವಿರಾರು ಕಿ.ಮೀ ಉದ್ದದ ಒಎಫ್ಸಿ ಡಕ್ಟ್ಗಳನ್ನು ಅಳವಡಿಸುತ್ತಿದ್ದು, ನಿಯಮ ಬಾಹಿರವಾಗಿ ರಸ್ತೆ, ಪಾದಚಾರಿ ಮಾರ್ಗ, ಮರಗಳು, ವಿದ್ಯುತ್ ಕಂಬಗಳ ಮೂಲಕ ಹಾದು ಹೋಗಿರುವ ಕೇಬಲ್‌ಗಳು ನೇತುಬಿದ್ದು ಸಾರ್ವಜನಿಕರಿಗೆ ಮಾರಕವಾಗಿವೆ.
Related Articles
Advertisement
ಶಿಫಾರಸ್ಸುಗಳು ಪಾಲನೆಯಾಗಿಲ್ಲ: ನಗರದಲ್ಲಿ ಸಾರ್ವಜನಿಕರಿಗ ತೊಂದರೆಯಾಗುವಂತೆ ಒಎಫ್ಸಿ ಸಂಸ್ಥೆಗಳು ಅಳವಡಿಸುತ್ತಿರುವ ಎಲ್ಲ ಕೇಬಲ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕೆಂದು ಪಾಲಿಕೆಯ ಒಎಫ್ಸಿ ಸಮಿತಿ ವರದಿ ನೀಡಿದೆ.
2012ರ ನೇಮಿಸಿದ ಒಎಫ್ಸಿ ಸಮಿತಿ ಅನಧಿಕೃತ ಒಎಫ್ಸಿ ಅಳವಡಿಕೆಯಿಂದ ಪಾಲಿಕೆಗೆ ಉಂಟಾಗುವ ನಷ್ಟ ಹಾಗೂ ಮರಗಳ ಮೂಲಕ ತೆಗೆದುಕೊಂಡು ಹೋಗುವ ಕೇಬಲ್‌ಗಳಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿರುವ ಅಂಶವನ್ನು ಉಲ್ಲೇಖೀಸಿ, ಇಂತಹ ಕೇಬಲ್‌ಗಳ ಯಾವುದೇ ಮುನ್ಸೂಚನೆ ನೀಡಿದೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ವರದಿ ಸಲ್ಲಿಸಿ, ನಾಲ್ಕೈದು ವರ್ಷಗಳು ಕಳೆದರೂ ಅದನ್ನು ಜಾರಿಗೊಳಿಸಲು ಪಾಲಿಕೆ ಮುಂದಾಗಿಲ್ಲ.
ಹೆಲ್ಮೆಟ್ ಇಲ್ಲದಿದ್ದರೆ ಕಣ್ಣೇ ಹೋಗಿತ್ತು…: “ಅಂದು ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ನೃಪತುಂಗ ರಸ್ತೆಯಲ್ಲಿನ ಮರವೊಂದರಲ್ಲಿ ನೇತಾಡುತ್ತಿದ್ದ ಕೇಬಲ್ ಜೋರಾಗಿ ಮುಖಕ್ಕೆ ಬಡಿಯಿತು. ಅಂದು ನಾನೇನಾದರೂ ಹೆಲ್ಮೆಟ್ ಧರಿಸದೇ ಇದ್ದಿದ್ದರೆ ಕೇಬಲ್ ನೇರವಾಗಿ ನನ್ನ ಕಣ್ಣೊಳಗೇ ಹೋಗಿ, ನನ್ನ ಕಣ್ಣೇ ಹೋಗುತ್ತಿತ್ತು.
ಮರಗಳಲ್ಲಿ ನೇತಾಡುವ ಕೇಬಲ್‌ಗಳು ತುಂಬಾ ಅಪಾಯಕಾರಿಯಾಗಿದ್ದು, ಕೆಲವೊಮ್ಮೆ ಬೈಕ್‌ಗೆ ಅಥವಾ ಬೈಕ್ ಸವಾರರಿಗೆ ಸಿಕ್ಕಿಕೊಂಡು ಬಿದ್ದು ಅನಾಹುತ ಸಂಭವಿಸಿದ ಉದಾಹರಣೆಗಳಿವೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನಗರದಲ್ಲಿ ನೇತಾಡುವ ಕೇಬಲ್‌ಗಳನ್ನು ತೆರವುಗೊಳಿಸಬೇಕು,’ ಎನ್ನುತ್ತಾರೆ ಕೆಂಗೇರಿಯ ಮಹದೇವ್.
ದೂರು ನೀಡಿದರೂ ತೆರವು ಗೊಳಿಸಿಲ್ಲ: “ಮಗುವನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬರುವ ಸಂದರ್ಭದಲ್ಲಿ ಪಾದಚಾರಿ ಮಾರ್ಗದಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಕೇಬಲ್‌ಗೆ ಎಡವಿ ನೆಲಕ್ಕೆ ಬಿದ್ದು ಮೊಣಕೈಗೆ ಗಾಯ ಮಾಡಿಕೊಂಡಿದ್ದೇನೆ. ವಿಪರ್ಯಾಸವೆಂದರೆ ಈ ಘಟನೆ ನಡೆದಿದ್ದು ಬಿಬಿಎಂಪಿ ಕೇಂದ್ರ ಕಚೇರಿಯ ಎದುರಲ್ಲೇ.
ತಮ್ಮ ಕಚೇರಿ ಎದುರಲ್ಲಿರುವ ಅನಧಿಕೃತ ಕೇಬಲ್ ತೆರವುಗೊಳಿಸದ ಪಾಳಿಕೆ ಅಧಿಕಾರಿಗಳು ಇನ್ನು ನಗರದಾದ್ಯಂಥ ಇರುವ ಓಎಫ್ಸಿ ಕೇಬಲ್ ತೆರವುಗೊಳಿಸುತ್ತಾರೆ ಎಂದು ನಂಬುವುದಾದರೂ ಹೇಗೆ? ಅಂದಿನ ಘಟನೆ ಕುರಿತು ಖುದ್ದು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದ್ದೇನೆ. ಆದರೆ, ಕೇಬಲ್ ತೆರವಾಗಿಲ್ಲ. ಅಂದು ನನ್ನ ಅದೃಷ್ಟ ಚೆನ್ನಾಗಿತ್ತು. ಒಂದೊಮ್ಮೆ ಮಕ್ಕಳು ಹೀಗೆ ಬಿದ್ದರೆ ಗತಿಯೇನು? ಅದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದವರು ಸಂಪಂಗಿರಾಮನಗರದ ರೇಣುಕಾ.
ಹಲ್ಗಲೆ ನಡೆಸಿದ ಪ್ರಕರಣಗಳು ಸಾಕಷ್ಟಿವೆ: “ರಾತ್ರಿ 10 ಗಂಟೆ ನಂತರ ಏಜೆನ್ಸಿಗಳು ಅನಧಿಕೃತವಾಗಿ ಡಕ್ಟ್, ಕೇಬಲ್ ಅಳವಡಿಸುವ ಕೆಲಸ ಆರಂಭಿಸುತ್ತಾರೆ. ಯಾರಾದರೂ ಕಾಮಗಾರಿ ತಡೆಯಲು ಬರುತ್ತಾರೆಂದು ಏಜೆನ್ಸಿಯು ಕಾಮಗಾರಿ ನಡೆಯುವ ಸ್ಥಳದಲ್ಲಿ 5-10 ಜನರನ್ನು ನಿಯೋಜಿಸಿರುತ್ತಾರೆ.
ಕಾಮಗಾರಿಯನ್ನು ಯಾರಾದರೂ ತಡೆಯಲು ಮುಂದಾದರೆ ಎಲ್ಲರೂ ಏಕಾಏಕಿ ಅವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಅನಧಿಕೃತ ಕೇಬಲ್ ಅಳವಡಿಕೆ ತಡೆಯಲು ಹೋದ ಪಾಲಿಕೆ ಸಿಬ್ಬಂದಿ ಮೇಲೆ ಹಲವೆಡೆ ಹಲ್ಲೆಗಳು ನಡೆದಿವೆ. ಈ ಕಾರಣದಿಂದ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಇಂತಹ ಕಾಮಗಾರಿ ತಡೆಯಲು ಹಿಂಜರಿಯುತ್ತಾರೆ,’ ಎಂದು ಪಾಲಿಕೆಯ ಒಎಫ್ಸಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
* ವೆಂ. ಸುನೀಲ್ ಕುಮಾರ್