ಸಾಗರ: ಹಿಂದೂ ಧರ್ಮ ಮತ್ತು ಹಿಂದೂ ಧರ್ಮದ ಪರವಾಗಿರುವವರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಹಿಂದೂ ಕಾರ್ಯಕರ್ತರ ಹಕ್ಕು ರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ಆ.6ರ ಶುಕ್ರವಾರ ಹಿಂದೂ ಜಾಗೃತಾ ವೇದಿಕೆ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಹಿಂದೂ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿರುವುದು ಸಂವಿಧಾನಬಾಹಿರವಾಗಿದೆ. ರಾಷ್ಟ್ರರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಅವರ ವಿರುದ್ದ ಅಕ್ರಮವಾಗಿ ಸುಳ್ಳು ಆರೋಪಗಳನ್ನು ಹೊರಿಸಿ ಅಕ್ರಮವಾಗಿ 35 ದಿನಗಳ ಕಾಲ ಬಂಧನದಲ್ಲಿರಿಸಿರುವ ಕ್ರಮ ಖಂಡನೀಯ. ಸಾಕ್ಷ್ಯ ಕೊರತೆಯಿಂದ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದರು.
ತಮ್ಮ ಮೇಲಿನ ಸುಳ್ಳು ಆರೋಪಗಳ ವಿರುದ್ಧ ಪುನೀತ್ ಕೆರೆಹಳ್ಳಿ ಉಪವಾಸ ಸತ್ಯಾಗ್ರಹ ನಡೆಸಿದರೆ ಅವರು ನೀಡಿದ ದೂರನ್ನು ಸಹ ಸ್ವೀಕರಿಸದೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಪುನೀತ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಅವರ ಪ್ರಾಣಕ್ಕೆ ತೊಂದರೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದೊಮ್ಮೆ ಪುನೀತ್ ಕೆರೆಹಳ್ಳಿ ಅವರಿಗೆ ಹೆಚ್ಚು ಕಡಿಮೆ ಆದರೆ ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂಗಳ ಮನೆ ಮೇಲೆ ಕಲ್ಲು ಎಸೆದು ದೊಂಬಿ ಸೃಷ್ಟಿಸಿ, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಪೊಲೀಸರ ಮೇಲೆ ಕಲ್ಲು ಎಸೆದಿರುವ ಕೃತ್ಯ ಖಂಡನೀಯ. ನಿಜವಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಸಂತ್ರಸ್ತ ಹಿಂದೂಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ರಾಜ್ಯ ಸರ್ಕಾರದ ಮುಸ್ಲೀಂ ತುಷ್ಟೀಕರಣಕ್ಕೆ ಸಾಕ್ಷಿಯಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಆಡಳಿತದ ಯಂತ್ರದ ದುರುಪಯೋಗವನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಶಾಂತ್ ಹೆಗಡೆ, ಕೃಷ್ಣಮೂರ್ತಿ, ಪ್ರವೀಣ್, ಶ್ರೀಕರ ಭಟ್, ಗೋಪಾಲ, ಸಂಜಯ್, ರವೀಶ್ ಕುಮಾರ್, ಕೆ.ವಿ.ಪ್ರವೀಣ್, ಸಂತೋಷ್ ಶಿವಾಜಿ, ಸುನೀಲ್, ಮಂಜುನಾಥ್, ಅಜಿತ್ ಇನ್ನಿತರರು ಹಾಜರಿದ್ದರು.