ಉತ್ತರ ಪ್ರದೇಶ : ಫೆ.17 ರಂದು ಜಾನುವಾರುಗಳಿಗೆ ಮೇವು ತರಲು ತೆರಳಿದ್ದ ಇಬ್ಬರು ದಲಿತ ಬಾಲಕಿಯರ ಸಾವು ಹಾಗೂ ಮತ್ತೋರ್ವಳು ಗಂಭೀರ ಸ್ಥೀತಿಯಲ್ಲಿರುವ ಘಟನೆಗೆ ಸಂಬಂಧಿಸಿದಂತೆ ಉನ್ನಾವ್ ಪೊಲೀಸರು ಒಬ್ಬ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿದೆ. ಬಂಧಿತನನ್ನು ವಿನಯ್ ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಮೇವು ತರಲು ತೆರಳಿದ್ದ ಮೂವರು ಬಾಲಕಿಯರ ಪೈಕಿ ಇಬ್ಬರು ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮತ್ತೋರ್ವಳ ಸ್ಥಿತಿ ಚಿಂತಾಜನಕವಾಗಿತ್ತು,ಈಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಹಲವು ಅನುಮಾನಗಳು ಮೂಡಿದ್ದವು. ಇದು ಮರ್ಡರ್ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಸಾವನ್ನಪ್ಪಿದ್ದ ಬಾಲಕಿಯರ ಬಾಯಲ್ಲಿ ಬಿಳಿ ನೊರೆ ಕಾಣಿಸಿಕೊಂಡಿದ್ದರಿಂದ ಹಾವು ಕಚ್ಚಿರಬಹುದೆಂದು ಗ್ರಾಮಸ್ಥರು ಸಂಶಯ ಪಟ್ಟಿದ್ದರು. ಆದರೆ, ಪ್ರಕರಣ ಭೇದಿಸಿರುವ ಪೊಲೀಸರು ಘಟನೆ ನಡೆದ ಪಕ್ಕದೂರಿನ ಇಬ್ಬರನ್ನು ಇಂದು (ಫೆ.19) ಬಂಧಿಸಿದೆ.
ನೀರಿನಲ್ಲಿ ಕೀಟನಾಶಕ
ಬಂಧಿತ ವಿನಯ್ ಪೊಲೀಸರೆದುರು ಸತ್ಯ ಬಾಯಿಬಿಟ್ಟಿದ್ದಾನೆ. ಮೃತಪಟ್ಟ ಬಾಲಕಿಯರ ಪೈಕಿ ಒಬ್ಬಳು ಈತನಿಗೆ ಲಾಕ್ ಡೌನ್ ವೇಳೆ ಪರಿಚಿತಳಾಗಿ, ಇವರಿಬ್ಬರು ಸ್ನೇಹತರಾಗಿದ್ದರು. ನಿತ್ಯ ಊರ ಹೊರಗಿನ ಜಮೀನಿನಲ್ಲಿ ಭೇಟಿಯಾಗುತ್ತಿದ್ದರು. ಆರೋಪಿ ವಿನಯ್ ಅವಳನ್ನು ಪ್ರೀತಿಸಲು ಶುರುಮಾಡಿದ್ದ, ಈ ವಿಷಯವನ್ನು ಆಕೆ ಮುಂದೆ ಹೇಳಿಕೊಂಡಿದ್ದ. ಆದರೆ, ಅವಳು ಈತನ ಪ್ರೀತಿ ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಅವಳ ಪ್ರಾಣ ತೆಗೆಯಲು ಆರೋಪಿ ವಿನಯ್ ಸಂಚು ರೂಪಿಸಿದ್ದನಂತೆ.
ಘಟನೆ ನಡೆದ ದಿನದಂದು ಆರೋಪಿ ವಿನಯ್, ತನ್ನ ಸ್ನೇಹಿತೆಗೆ ತಿನ್ನಲು ಸ್ನಾಕ್ಸ್ ಹಾಗೂ ಕೈಯಲ್ಲಿ ನೀರಿನ ಬಾಟಲಿ ಹಿಡಿದು ತಂದಿದ್ದ. ಸ್ಥಳಕ್ಕೇ ಬರುವ ಮುನ್ನ ನೀರಿನಲ್ಲಿ ಕೀಟನಾಶಕ ಬೆರೆಸಿದ್ದ. ಈ ನೀರು ಕುಡಿದ ಆತನ ಸ್ನೇಹಿತೆ ಹಾಗೂ ಮತ್ತೋರ್ವ ಬಾಲಕಿ ಸ್ಥಳದಲ್ಲಿ ಸಾವನ್ನಪ್ಪಿದ್ದರು.