ಉನ್ನಾವ್ : 16ರ ಹರೆಯದ ಹುಡುಗಿಯ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ಅವರನ್ನು ಸಿಬಿಐ ಇಂದು ಶುಕ್ರವಾರ ಬೆಳಗ್ಗೆ ಪ್ರಶ್ನಿಸುವುದಕ್ಕಾಗಿ ತನ್ನ ವಶಕ್ಕೆ ತೆಗೆದುಕೊಂಡಿತು.
ಗುರುವಾರ ಬಿಜೆಪಿ ಶಾಸಕನ ವಿರುದ್ಧ ಐಪಿಸಿ ಎ.363, 366, 506ರಡಿ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ಕಾಯಿದೆಯಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಬಿಜೆಪಿ ಶಾಸಕ ಸೇಂಗರ್ ತಾನು ಈ ಅಮಾಯಕ ಮತ್ತು ನಿರಪರಾಧಿಯಾಗಿದ್ದು ತನ್ನ ವಿರುದ್ಧ ನಡೆಸಲಾಗಿರುವ ಸಂಚಿನ ಫಲವಾಗಿ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಶಾಸಕ ಸೇಂಗರ್ ಅವರನ್ನು ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿದ್ದ ಅಲಹಾಬಾದ್ ಹೈಕೋರ್ಟ್, ಹಾಲಿ ಪರಿಸ್ಥಿತಿಯಿಲ್ಲ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮುರಿದು ಬಿದ್ದಿರುವುದಾಗಿ ಆದೇಶಿಸುವುದು ತನಗೆ ಅನಿವಾರ್ಯವಾದೀತು ಎಂದು ಹೇಳಿತ್ತು.
ಅಲಹಾಬಾದ್ ಹೈಕೋರ್ಟ್ ಇಂದು ಶುಕ್ರವಾರ ತನ್ನ ಆದೇಶವನ್ನು ಪ್ರಕಟಿಸಲಿದ್ದು ರೇಪ್ ಸಂತ್ರಸ್ತೆಯ ದೂರನ್ನು ಪೊಲೀಸರು ನಿರ್ವಹಿಸಿದ ರೀತಿಯ ಬಗ್ಗೆ ಅದು ತೀವ್ರ ಅಸಮಧಾನ ಹೊಂದಿರುವುದು ಸ್ಪಷ್ಟವಿದೆ ಎಂದು ವರದಿಗಳು ತಿಳಿಸಿವೆ.