ಮುಂಬೈ: ಅಂಡರ್ 19 ವಿಶ್ವಕಪ್ ಗೆದ್ದ ನಾಯಕ ಉನ್ಮುಕ್ತ್ ಚಾಂದ್ ಅವರು ಆಸ್ಟ್ರೇಲಿಯಾದ ಬಿಗ್ ಬಾಶ್ ಲೀಗ್ ಗೆ ಸೇರ್ಪಡೆಯಾಗಿದ್ದಾರೆ. ಬಿಬಿಎಲ್ ನ ಮೆಲ್ಬೋರ್ನ್ ರೆನಿಗೇಡ್ಸ್ ತಂಡದ ಪರವಾಗಿ ಉನ್ಮುಕ್ತ್ ಚಾಂದ್ ಕಣಕ್ಕಿಳಿಯಲಿದ್ದಾರೆ.
28 ವರ್ಷದ ಪ್ರಾಯದ ಉನ್ಮುಕ್ತ್ ಚಾಂದ್ ಅವರು ಭಾರತ ಕ್ರಿಕೆಟ್ ತೊರೆದು ಅಮೆರಿಕ ಪರವಾಗಿ ಆಡುತ್ತಿದ್ದಾರೆ. ಭಾರತದಲ್ಲಿ ಹೆಚ್ಚಿನ ಸ್ಪರ್ಧೆಯಿಂದ ಅವಕಾಶಗಳು ಕಡಿಮೆಯಾಗುತ್ತಿರುವ ಕಾರಣ ಉನ್ಮುಕ್ತ್ ಚಾಂದ್ ಯುಎಸ್ ಪರವಾಗಿ ಆಡುತ್ತಿದ್ದರು.
ಉನ್ಮುಕ್ತ್ ಚಾಂದ್ ಅವರು ಬಿಬಿಎಲ್ ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ವನಿತೆಯರ ಬಿಬಿಎಲ್ ನಲ್ಲಿ ಸ್ಮೃತಿ ಮಂಧನಾ, ಶಫಾಲಿ ವರ್ಮಾ ಸೇರಿದಂತೆ ಹಲವಾರು ಆಟಗಾರರು ಆಡುತ್ತಿದ್ದಾರೆ. ಪುರುಷರ ಕೂಟದಲ್ಲಿ ಚಾಂದ್ ಮೊದಲು ಭಾರತೀಯನಾಗಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ:ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡಲು ಆಟಗಾರರು ಉತ್ಸುಕರಾಗಿದ್ದಾರೆ: ರೋಹಿತ್ ಶರ್ಮಾ
“ನಾನು ನಿಜವಾಗಿಯೂ ಮೆಲ್ಬೋರ್ನ್‌ಗೆ ಆಗಮಿಸಲು ಮತ್ತು ಆಡಲು ಎದುರು ನೋಡುತ್ತಿದ್ದೇನೆ. ನಾನು ಯಾವಾಗಲೂ ಆಸ್ಟ್ರೇಲಿಯಾದಲ್ಲಿ ಆಡುವುದನ್ನು ಆನಂದಿಸುತ್ತೇನೆ. ನಾನು ಮೊದಲು ಮೆಲ್ಬೋರ್ನ್‌ಗೆ ಹೋಗಿರಲಿಲ್ಲ. ಮೆಲ್ಬೋರ್ನ್ ನಲ್ಲಿ ಸಾಕಷ್ಟು ಭಾರತೀಯರಿದ್ದಾರೆ ಎಂದು ನನಗೆ ತಿಳಿದಿದೆ” ಎಂದು ಚಾಂದ್ ಹೇಳಿದರು.
ಉನ್ಮುಕ್ತ್ ಚಾಂದ್ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿದ್ದರು.