Advertisement

ಹಗರಣಕ್ಕೆ ರಾಜಕಾರಣಿಗಳು ಮಾತ್ರ ಹೊಣೆಯೇ: ಜೇಟ್ಲಿ

08:15 AM Feb 25, 2018 | |

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ 11400 ಕೋಟಿ ರೂ. ಹಗರಣಕ್ಕೆ ನಿಯಂತ್ರಕ ಸಂಸ್ಥೆಗಳು ಮತ್ತು ಆಡಿಟರ್‌ಗಳ ವೈಫ‌ಲ್ಯವೇ ಕಾರಣ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಅಲ್ಲದೆ ಅಗತ್ಯವಿದ್ದರೆ ಕಾನೂನು ಬಿಗಿಗೊಳಿಸಲೂ ಸಿದ್ಧ ಎಂದಿದ್ದಾರೆ. ನಿಯಂತ್ರಕಗಳು ಅತ್ಯಂತ ಪ್ರಮುಖ ಕೆಲಸ ನಿರ್ವಹಿಸುತ್ತವೆ. ಇವು ಉದ್ಯಮ ಹೇಗೆ ನಡೆಯಬೇಕು ಎಂದು ನಿರ್ದೇಶಿಸುತ್ತವೆ. ಅಷ್ಟೇ ಅಲ್ಲ, ಒಂದು ಮುಕ್ತ ದೃಷ್ಟಿಯನ್ನೂ ಹೊಂದಿರುತ್ತವೆ. ದುರದೃಷ್ಟವಶಾತ್‌ ನಿಯಂತ್ರಕಗಳು ಈ ಯಾವುದಕ್ಕೂ ಹೊಣೆಗಾರನಾಗಿರುವುದಿಲ್ಲ. ಬದಲಿಗೆ ರಾಜಕಾರಣಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಜಾಗತಿಕ ವ್ಯಾಪಾರ ಸಮ್ಮೇಳನದಲ್ಲಿ ಮಾತನಾಡಿದ ಜೇಟ್ಲಿ ಹೇಳಿದ್ದಾರೆ.

Advertisement

ಉದ್ಯಮದ ಕೆಲವು ವಲಯದಲ್ಲಿ ಅಕ್ರಮಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಆಡಿಟರ್‌ಗಳು ತೆರಿಗೆ ತಪ್ಪಿಸುವ ವಿಧಾನಗಳನ್ನು ಹುಡುಕುತ್ತವೆ ಅಥವಾ ವಹಿಸಿದ ಕೆಲಸವನ್ನಷ್ಟೇ ಮಾಡಿ ಮುಗಿಸುತ್ತವೆ ಎಂದು ಕಿಡಿ ಕಾರಿದ್ದಾರೆ. ಅವ್ಯವಹಾರ ನಡೆಯುತ್ತಿದ್ದ ಅವಧಿಯಲ್ಲಿ ಒಂದೇ ಒಂದು ದೂರು ಕೂಡ ದಾಖಲಾಗಿಲ್ಲ. ಅಷ್ಟೇ ಅಲ್ಲ, ಆಡಳಿತ ಮಂಡಳಿಗೆ ಈ ವಿಚಾರವೇ ತಿಳಿದುಬಂದಿಲ್ಲ ಎಂದೂ ಅವರು ಟೀಕಿಸಿದ್ದಾರೆ. ಇದೇ ವೇಳೆೆ ಸರಕಾರಿ ಬ್ಯಾಂಕುಗಳ ಖಾಸಗೀಕರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೀರವ್‌ 523 ಕೋಟಿ ರೂ. ಸ್ವತ್ತು ವಶ:  ನೀರವ್‌ ಮೋದಿಯ ಸ್ವತ್ತುಗಳ ಮೇಲೆ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯ ಶನಿವಾರ 21 ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದ್ದು, ಇದರ ಮೌಲ್ಯ 523 ಕೋಟಿ ರೂ. ಆಗಿದೆ. 81 ಕೋಟಿ ರೂ. ಮೌಲ್ಯದ ಪೆಂಟ್‌ಹೌಸ್‌, ಮುಂಬಯಿಯಲ್ಲಿ 15 ಕೋಟಿ ರೂ. ಮೌಲ್ಯದ ಫ್ಲಾಟ್‌ ಕೂಡ ವಶಪಡಿಸಿ ಕೊಳ್ಳಲಾಗಿದೆ. ಅಲ್ಲದೆ 6 ನಿವಾಸಗಳು, ಹತ್ತು ಕಚೇರಿಗಳು, ಪುಣೆಯಲ್ಲಿರುವ 2 ಫ್ಲ್ಯಾಟ್‌, ಸೌರ ವಿದ್ಯುತ್‌ ಘಟಕ, ಅಲಿಬಾಗ್‌ನಲ್ಲಿರುವ ಒಂದು ಫಾರ್ಮ್ಹೌಸ್‌, ಅಹಮದ್‌ ನಗರದಲ್ಲಿ 135 ಎಕರೆ ಭೂಮಿ ಜಪ್ತಿಯಾಗಿದೆ. 

ಪಿಎನ್‌ಬಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುನೀಲ್‌ ಮೆಹ್ತಾ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕೆ. ವಿ. ಬ್ರಹ್ಮಾಜಿ ರಾವ್‌ರನ್ನು ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗಿದೆ. ಅಲ್ಲದೆ ಗ್ರಾಹಕರಿಗೆ ನಗದು ಹಿಂಪಡೆಯುವ ಮಿತಿ 3 ಸಾವಿರ ರೂ.ಗೆ ಮಿತಿಗೊಳಿಸಲಾಗಿದೆ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪಿಎನ್‌ಬಿ ಬ್ರಾಂಡ್‌ ಅಂಬಾಸಿಡರ್‌ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ ಎಂಬ ವದಂತಿಗಳನ್ನು ಬ್ಯಾಂಕ್‌ ತಳ್ಳಿಹಾಕಿದೆ. ಇನ್ನೊಂದೆಡೆ ಅವ್ಯವಹಾರಕ್ಕೆ ಕಾರಣವಾದ ತಾಂತ್ರಿಕ ಸಮಸ್ಯೆ ಸರಿಪಡಿಸುವುದಕ್ಕೂ ಭಾರತೀಯ ಬ್ಯಾಂಕ್‌ಗಳ ಸಂಘಟನೆ ಸೂಚನೆ ನೀಡಿದೆ. ಸ್ವಿಫ್ಟ್ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಜತೆಗೆ ಲಿಂಕ್‌ ಮಾಡುವುದಕ್ಕೆ ಎ.30ರ ಗಡುವು ನೀಡಿದೆ.

ಮೆಹುಲ್‌ ಪತ್ರ: ಗೀತಾಂಜಲಿ ಜೆಮ್ಸ್‌ ಮಾಲಕ ಮೆಹುಲ್‌ ಚೋಕ್ಸಿ ತನ್ನ ಕಂಪೆನಿಯ ಉದ್ಯೋಗಿಗಳಿಗೆ ಪತ್ರ ಬರೆದು, ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ನನ್ನ ಮೇಲೆ ಹುಸಿ ಆರೋಪ ಹೊರಿಸಲಾಗಿದೆ. ಹೀಗಾಗಿ ಸಂಬಳ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ ಖಾತೆಗಳು ಮತ್ತು ಸ್ವತ್ತುಗಳನ್ನು ಜಪ್ತಿ ಮಾಡಲಾಗಿರು ವುದರಿಂದ ಸಂಬಳ ಬಾಕಿ ಪಾವತಿ ಹಾಗೂ ಮುಂದಿನ ದಿನದಲ್ಲಿ ಸಂಬಳ ನೀಡಲು ಸಾಧ್ಯವಾಗದಿರಬಹುದು. ಆದರೆ ಸಮಸ್ಯೆ ನಿವಾರಣೆಯಾದ ನಂತರ ಸಂಬಳ ಬಾಕಿ ಹಿಂದಿರುಗಿಸುತ್ತೇನೆ ಎಂದು ಹೇಳಿದ್ದಾರೆ.

Advertisement

ಜನ ಧನ ಲೂಟಿ ಯೋಜನೆ: ರಾಹುಲ್‌ ಟೀಕೆ
ದ್ವಾರಕಾ ದಾಸ್‌ ಸೇs… ಇಂಟರ್‌ನ್ಯಾಷನಲ್‌ ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ಗೆ 389 ಕೋಟಿ ರೂ. ಮೋಸ ಮಾಡಿದ್ದನ್ನು ಪ್ರಸ್ತಾವಿಸಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಮೋದಿ ಸರಕಾರದಲ್ಲಿ ಜನ ಧನ ಲೂಟಿ ಯೋಜನೆ ಶುರುವಾಗಿದೆ. ಪಿಎನ್‌ಬಿಯಲ್ಲಿ ನಡೆದಂಥದ್ದೇ ನಕಲಿ ಲೆಟರ್‌ ಆಫ್ ಅಂಡರ್‌ಟೇಕಿಂಗ್‌ ಸಲ್ಲಿಸಿ 390 ಕೋಟಿ ರೂ. ಮೋಸ ಮಾಡಲಾಗಿದೆ. ನಿರೀಕ್ಷೆಯಂತೆ ಮಲ್ಯ, ನಿರವ್‌ ರೀತಿಯಲ್ಲೇ ಈ ಕಂಪೆನಿಯ ಮುಖ್ಯಸ್ಥರೂ ಕಣ್ಮರೆಯಾಗಿದ್ದಾರೆ ಎಂದು ರಾಹುಲ್‌ ಟೀಕಿಸಿದ್ದಾರೆ. ಇನ್ನೊಂದೆ ಮೋದಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌,  ಮುಂದಿನ 60 ದಿನಗಳೊಳಗೆ ಬ್ಯಾಂಕ್‌ಗಳ ಆಡಳಿತ ಮಂಡಳಿ ಹಾಗೂ ಆರ್‌ಬಿಐ ಮೇಲೆ ಹೊಣೆಗಾರಿಕೆ ಹೊರಿಸಬೇಕು ಎಂದು ಹೇಳಿದ್ದಾರೆ. ದುಬಾರಿ ಕಾವಲುಗಾರರಿದ್ದಾಗಲೂ ಯಾಕೆ ಇಷ್ಟು ದೊಡ್ಡ ಹಗರಣ ನಡೆಯಿತು ಎಂದು ಅವರು ಪ್ರಶ್ನಿಸಿದ್ದಾರೆ.

ಪಾಸ್‌ಪೋರ್ಟ್‌ ರದ್ದು
ನೀರವ್‌ ಮೋದಿ ಹಾಗೂ ಗೀತಾಂಜಲಿ ಜ್ಯುವೆಲ್ಲರ್ಸ್‌ನ ಮೆಹುಲ್‌ ಚೋಕ್ಸಿಯ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗಿದೆ. ಈಗಾಗಲೇ ಈ ಸಂಬಂಧ ಇಬ್ಬರಿಗೂ ನೋಟಿಸ್‌ ನೀಡಲಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡದೇ ಇರುವುದರಿಂದ ಖಾಯಂ ಆಗಿ ಪಾಸ್‌ಪೋರ್ಟ್‌ ರದ್ದುಗೊಳಿಸಲಾಗಿದೆ. ಪ್ರತಿಕ್ರಿಯಿಸಲು ಒಂದು ವಾರ ಕಾಲಾವಕಾಶ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next