Advertisement

Arun Kumar Puthila ಬಿಜೆಪಿಗೆ ಸೇರ್ಪಡೆ; ಕೊನೆಗೂ ಬಂಡಾಯ ಗಾಯ ಉಪಶಮನ

12:33 AM Mar 17, 2024 | Team Udayavani |

ಮಂಗಳೂರು: ಕೊನೆಗೂ ಸುಮಾರು ಒಂದು ವರ್ಷದ ಬಳಿಕ ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನಗೊಂಡಿದೆ. ಈ ಮೂಲಕ ಬಿಜೆಪಿಯ ಬಂಡಾಯ ಗಾಯ ಉಪಶಮನಗೊಂಡಂತಾಗಿದೆ.

Advertisement

ಬಿಜೆಪಿಯ ಕೆಲವು ನಾಯಕರ ನಿರ್ಲಕ್ಷ್ಯದ ಧೋರಣೆಗೆ ಬೇಸತ್ತು ಪುತ್ತಿಲ ಪರಿವಾರ ಹೆಸರಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸಿ ಪ್ರಬಲ ಹೋರಾಟ ನೀಡಿದ್ದ ಅರುಣ್‌ ಕುಮಾರ್‌ ಪುತ್ತಿಲ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿ ಹೆಚ್ಚು ಮತಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಇದರಿಂದ ಬಿಜೆಪಿಯ ಹಿಡಿತದಿಂದ ಪುತ್ತೂರು ಕ್ಷೇತ್ರ ಮಾಯವಾಗಿತ್ತು.

ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಪುತ್ತಿಲ ಅವರು ಯಾವುದೇ ಷರತ್ತಿಲ್ಲದೇ ಪಕ್ಷಕ್ಕೆ ಸೇರ್ಪಡೆಗೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ಪುತ್ತಿಲ ಅವರಿಗೆ ಪಕ್ಷದ ಸದಸ್ಯತ್ವ ಫಾರಂ ನೀಡಿ ಕೇಸರಿ ಶಾಲು ಹಾಕಿ ಸ್ವಾಗತಿಸಿದರು. ಪುತ್ತಿಲ ಪರಿವಾರದ ಪ್ರಮುಖರಾದ ಪ್ರಸನ್ನ ಮಾರ್ತಾ, ಉಮೇಶ್‌ ಗೌಡ, ಅನಿಲ್‌ ಮತ್ತಿತರರೂ ಇದೇ ಸಂದರ್ಭದಲ್ಲಿ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಸತೀಶ್‌ ಕುಂಪಲ, ಈಗಾಗಲೇ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸಮ್ಮುಖದಲ್ಲೇ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಹಿಂದೆ ಏನೋ ಬೆಳವಣಿಗೆ ಆಗಿರಬಹುದು, ಅದೆಲ್ಲವನ್ನೂ ಸರಿಪಡಿಸಿಕೊಂಡು ಮುಂದುವರಿಯಬೇಕಿದೆ, ಏನೇ ಗೊಂದಲ ಇದ್ದರೂ ಅದನ್ನು ನಾಲ್ಕು ಗೋಡೆಯೊಳಗೇ ಪರಿಹರಿಸಿಕೊಳ್ಳಬೇಕು. ಇನ್ನು ಮುಂದೆ ಪುತ್ತಿಲ ಪರಿವಾರ ಎಂಬುದು ಇಲ್ಲ, ಎಲ್ಲವೂ ಬಿಜೆಪಿ ಹೆಸರಿನಲ್ಲೇ ನಡೆಯಲಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವಿಗೆ ಹಾಗೂ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶಕ್ತಿಮೀರಿ ಶ್ರಮಿಸೋಣ ಎಂದರು.

Advertisement

ಪಕ್ಷದ ಗೆಲುವಿಗೆ ಶ್ರಮಿಸುವೆ: ಪುತ್ತಿಲ
ಇದೇ ವೇಳೆ ಅರುಣ್‌ ಮಾತನಾಡಿ, ನಾನೊಬ್ಬ ಆರ್‌ಎಸ್‌ಎಸ್‌ ಕಾರ್ಯ ಕರ್ತ ನಾಗಿದ್ದವನು, ಪಕ್ಷದಲ್ಲೂ ಇದ್ದವನು, ಯಾವುದೇ ಪದಾಧಿಕಾರಿ ಹುದ್ದೆ ಇಲ್ಲದೇ ಕೆಲಸ ಮಾಡಿದವನು, ಇಲ್ಲೂಯಾವುದೇ ಹುದ್ದೆ ಬಯಸಿ ಪಕ್ಷಕ್ಕೆ ಸೇರಿಲ್ಲ, ಬದಲಿಗೆ ಪ್ರಧಾನಿ ಮೋದಿ ಯವರನ್ನು ಮತ್ತೆ ಹತ್ತು ವರ್ಷ ಪ್ರಧಾನಿಯಾಗಿ ಮಾಡಬೇಕು ಎನ್ನು ವುದಕ್ಕಾಗಿ ಸೇರಿದ್ದೇನೆ ಎಂದರು.

ಲೋಕಸಭಾ ಚುನಾವಣೆಯ ಈ ಕಾಲಘಟ್ಟದಲ್ಲಿ ಇದೊಂದು ಒಳ್ಳೆಯ ಹೆಜ್ಜೆ. ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ದೇಶ ಅಭಿವೃದ್ಧಿ ಕಂಡಿದೆ. ಇನ್ನೂ 10 ವರ್ಷ ಅವರ ಆಡಳಿತ ದೇಶಕ್ಕೆ ಬೇಕಿದೆ. ಅದಕ್ಕಾಗಿ ನಮ್ಮೆಲ್ಲಾ ಕಾರ್ಯಕರ್ತರೂ ಪಕ್ಷದಲ್ಲಿ ಸಕ್ರಿಯರಾಗಿ ದುಡಿಯುವರು ಎಂದು ಪುತ್ತಿಲ ಹೇಳಿದರು.

ಜಿಲ್ಲಾ ಚುನಾವಣ ಉಸ್ತುವಾರಿ ನಿತಿನ್‌ ಕುಮಾರ್‌, ಪ್ರ. ಕಾರ್ಯದರ್ಶಿ ಕಿಶೋರ್‌, ಪ್ರಭಾರಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್‌ ಎಂ., ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್‌, ವಿದ್ಯಾಗೌರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next