Advertisement

Arun Puthila ಸೇರ್ಪಡೆ ಪ್ರಕ್ರಿಯೆಗೆ ವಿರೋಧ; ಬಿಜೆಪಿ ಕಚೇರಿಯಲ್ಲಿ ಬಾಗಿಲು ಮುಚ್ಚಿ ಸಭೆ

01:31 AM Mar 16, 2024 | Team Udayavani |

ಪುತ್ತೂರು: ಹಿಂದೂ ಮುಖಂಡ ಅರುಣ್‌ ಕುಮಾರ್‌ಪುತ್ತಿಲ ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೆ ಕ್ಷಣಗಣನೆ ನಡೆಯುತ್ತಿದ್ದ ಹೊತ್ತಲ್ಲೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು ಸೇರ್ಪಡೆ ಕಾರ್ಯಕ್ರಮವೇ ಮುಂದೂಡಲ್ಪಟ್ಟ ವಿದ್ಯಮಾನ ನಡೆದಿದೆ.

Advertisement

ಗುರುವಾರ ಸಂಜೆ ಪುತ್ತಿಲ ಪರಿವಾರ ಹಾಗೂ ಜಿಲ್ಲಾ, ತಾಲೂಕು ಬಿಜೆಪಿ ಮುಖಂಡರು ಜಂಟಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಗೆ ಮುಹೂರ್ತ ನಿಗದಿಪಡಿಸಿದ್ದರು. ಮಾ.15ರಂದು ಸಂಜೆ 6 ಗಂಟೆಗೆ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಸೇರ್ಪಡೆ ಕಾರ್ಯ ನಡೆಯಲಿದೆ ಎಂದು ಅರುಣ್‌ ಪುತ್ತಿಲ ಅವರಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ.

ದಿಢೀರ್‌ಸಭೆ!
ಈ ಮಧ್ಯೆ ಪುತ್ತಿಲ ಸೇರ್ಪಡೆಗೆ ಪುತ್ತೂರಿನ ಕೆಲಚಿಜ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದ್ದು, ಹೀಗಾಗಿ ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ಪುತ್ತೂರು ಕಚೇರಿಗೆ ದಿಢೀರ್‌ಭೇಟಿ ನೀಡಿ ಸಭೆ ನಡೆಸಿದರು. ಈ ವೇಳೆ ಕೆಲಚಿಜ ಕಾರ್ಯಕರ್ತರು, ಮುಖಂಡರು ಪುತ್ತಿಲ ಸೇರ್ಪಡೆಯ ವಿಧಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರ ತೀರ್ಮಾನದಂತೆಯೇ ಪಕ್ಷಕ್ಕೆ ಸೇರುವು ದಾದರೆ ಸೇರಲಿ, ಬೇರೆ ರೀತಿ ಬೇಡ ಎಂದು ಪಟ್ಟು ಹಿಡಿದರೆನ್ನಲಾಗಿದೆ.

ಸಭೆಯಲ್ಲಿ ಜಿಲ್ಲಾ ವಿಭಾಗ ಪ್ರಭಾರಿ ಗೋಪಾಲ ಕೃಷ್ಣ ಹೇರಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಯತೀಶ್‌ ಅರುವಾರ, ಪುತ್ತೂರು ಗ್ರಾಮೀಣ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್‌, ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್‌, ಹಿರಿಯ ಹಿಂದೂ ಮುಖಂಡ ಡಾ| ಎಮ್‌. ಕೆ. ಪ್ರಸಾದ್‌, ಮಾಜಿ ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ನಗರ ಸಭೆಯ ಮಾಜಿ ಅಧ್ಯಕ್ಷ ಜೀವಂಧರ್‌ ಜೈನ್‌, ಪುಡಾದ ಮಾಜಿ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್‌ ಬನ್ನೂರು ಮತ್ತಿತ್ತರರು ಉಪಸ್ಥಿತರಿದ್ದರು. ಕಚೇರಿ ಬಾಗಿಲು ಮುಚ್ಚಿ ತುರ್ತು ಸಭೆ ನಡೆಸಲಾಯಿತು.

ಜಿಲ್ಲಾಧ್ಯಕ್ಷರ ಅಚ್ಚರಿಯ ಹೇಳಿಕೆ
ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸತೀಶ್‌ ಕುಂಪಲ, ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಕೆಲಸ ಮಾಡುವ ಬಗ್ಗೆ ಚರ್ಚಿಸಲು ಸಭೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಮೂರೂವರೆಯಿಂದ ನಾಲ್ಕು ಲಕ್ಷ ಮತಗಳ ಅಂತರದ ಗೆಲುವು ಪಡೆಯಲು ಎಲ್ಲ ಪರಿವಾರ ಸಂಘಟನೆಗಳು ಒಟ್ಟಿಗೆ ಇದ್ದು ಕೆಲಸ ಮಾಡಲಿದ್ದೇವೆ ಎಂದರು.

Advertisement

ಅರುಣ್‌ ಕುಮಾರ್‌ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ, ಪುತ್ತಿಲರ ಸೇರ್ಪಡೆ ವಿಷಯ ನಾವು ಮಾಡಿದ್ದಲ್ಲ. ಅದು ಮಾಧ್ಯಮದವರು ಬಿಂಬಿಸಿದ್ದು. ಪುತ್ತಿಲರ ಬಗ್ಗೆಯೂ ಚರ್ಚಿಸಿದ್ದೇವೆ. ಒಟ್ಟು ಪರಿವಾರದ ಸಂಘಟನೆ ಮತ್ತು ಬಿಜೆಪಿಯ ಎಲ್ಲರ ಒಮ್ಮತದ ಅಭಿಪ್ರಾಯ ಆಧಾರದ ಮೇಲೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಹೇಳಿದರು.

ನಾಳೆ ನಿರ್ಧಾರ ಎಂದ
ಪುತ್ತಿಲ ಪರಿವಾರ
ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಬೇಕಿದ್ದ ಜಂಟಿ ಸಭೆ ಮತ್ತು ಮಂಗಳೂರು ಬಿಜೆಪಿ ಕಚೇರಿಯಲ್ಲಿ ನಡೆಯಬೇಕಾಗಿದ್ದ ಸೇರ್ಪಡೆ ಕಾರ್ಯಕ್ರಮ ಪುತ್ತೂರು ಬಿಜೆಪಿಯ ಕೆಲವರ ಅಸಹಕಾರದಿಂದ ಮುಂದೂಡ ಲ್ಪಟ್ಟಿದೆ. ಮುಂದಿನ ನಡೆ ಬಗ್ಗೆ ನಾಳೆ ತಿಳಿಸುವುದಾಗಿ ಪುತ್ತಿಲ ಪರಿವಾರವು ಸಾಮಾಜಿಕ ಜಾಲ ತಾಣದಲ್ಲಿ ತಿಳಿಸಿದೆ.

ಮಂಗಳೂರಿಗೆ
ತೆರಳಲು ಸಿದ್ಧವಾಗಿದ್ದ ಪುತ್ತಿಲ
ಪುತ್ತೂರಿನಲ್ಲಿ ನಡೆದ ತುರ್ತು ಸಭೆಯ ಬಗ್ಗೆ ಅರುಣ್‌ ಪುತ್ತಿಲ ಅವರ ಬಳಿ ವಿಚಾರಿಸಿದಾಗ, ಪುತ್ತೂರಿನ ಸಭೆಯ ಬಗ್ಗೆ ಮಾಹಿತಿ ಇಲ್ಲ. ಸಂಜೆ ಮಂಗಳೂರಿನ ಪಕ್ಷದ ಕಚೇರಿಗೆ ಬರುವಂತೆ ಆಹ್ವಾನಿಸಲಾಗಿತ್ತು. ಹೊರಟಿದ್ದೆ. ಅದಾದ ಕೆಲ ಹೊತ್ತಲ್ಲೇ ಪುತ್ತೂರಿನಲ್ಲಿ ತುರ್ತು ಸಭೆ ನಡೆದಿತ್ತು. ಮಂಗಳೂರಿನ ಕಾರ್ಯಕ್ರಮ ರದ್ದಾಗಿತ್ತು. ಪುತ್ತಿಲ ಅವರ ಸೇರ್ಪಡೆ ಕಾರ್ಯಕ್ಕೆ ಮಂಗಳೂರಿಗೆ ತೆರಳಲು ನೂರಾರು ಕಾರ್ಯಕರ್ತರು ಪುತ್ತೂರಿಗೆ ಬಂದಿದ್ದರು ಎಂಬ ಮಾಹಿತಿ ಲಭಿಸಿದೆ.

ಕಾರ್ಯಕರ್ತರ ಸಭೆ ನಡೆಸಿದ ಪುತ್ತಿಲ
ಪುತ್ತೂರಿನಲ್ಲಿ ಒಂದೆಡೆ ಪುತ್ತಿಲ ಸೇರ್ಪಡೆ ವಿಷಯದ ಬಗ್ಗೆ ಬಿರುಸಿನ ತಯಾರಿ ನಡೆಯಿತು. ಮುಕ್ರಂಪಾಡಿಯ ಸುಭದ್ರ ಹಾಲ್‌ ಶುಕ್ರವಾರ ಸಂಜೆ ಅರುಣ್‌ ಪುತ್ತಿಲ ಅವರು ಕಾರ್ಯಕರ್ತರ ಸಭೆ ನಡೆಸಿದರು. ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಪ್ರಧಾನಿಯಾಗಿಸುವ ಗುರಿಯೊಂದಿಗೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ| ಬೃಜೇಶ್‌ ಚೌಟರ‌ನ್ನು 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ನಿಟ್ಟಿನಲ್ಲಿ ಪುತ್ತಿಲ ಪರಿವಾರ ಚುನಾವಣ ಪ್ರಚಾರಕ್ಕೆ ಶೀಘ್ರವೇ ಇಳಿಯಲಿದೆ ಎಂದರು ಅರುಣ್‌ ಕುಮಾರ್‌ಪುತ್ತಿಲ.

Advertisement

Udayavani is now on Telegram. Click here to join our channel and stay updated with the latest news.

Next