Advertisement

ಶಿಲ್ಪಕಲೆಯಲ್ಲಿ ದೇಶಕ್ಕೆ ಮತ್ತಷ್ಟು ಕೊಡುಗೆ ನೀಡುವೆ; ಶಿಲ್ಪಿ ಅರುಣ್‌

03:52 PM Apr 10, 2024 | Team Udayavani |

ಉದಯವಾಣಿ ಸಮಾಚಾರ
ಶಿವಮೊಗ್ಗ: ಅಯೋಧ್ಯೆ ರಾಮಲಲ್ಲಾ ವಿಗ್ರಹವು ಕೋಟ್ಯಂತರ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ದೇಶದ
ಎಲ್ಲರ ಪ್ರೀತಿ ನನಗೆ ಸಿಕ್ಕಿದೆ. ಶಿಲ್ಪಕಲೆ ಕ್ಷೇತ್ರದಲ್ಲಿ ದೇಶಕ್ಕೆ ಮತ್ತಷ್ಟು ಕೊಡುಗೆ ನೀಡುವ ಬಯಕೆ ನನ್ನದು ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ಮಹಾಸಭಾ, ವಿಶ್ವ ಬ್ರಾಹ್ಮಣ, ಕಾಳಿಕಾ ಪರಮೇಶ್ವರಿ ದೇವಸ್ಥಾನ ಸೇವಾ
ಸಮಿತಿ ಹಾಗೂ ಜಿಲ್ಲೆಯ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ
ಸ್ವೀಕರಿಸಿ ಅವರು ಮಾತನಾಡಿದರು.

20 ವರ್ಷಗಳಿಂದ ಸಾವಿರಾರು ವಿಗ್ರಹಗಳನ್ನು ಕೆತ್ತಿದ್ದೆ. ಶ್ರೀ ಶಂಕರಾಚಾರ್ಯರ ವಿಗ್ರಹ ಮಾಡಿದ ಮೇಲೆ ನನ್ನ ಕಾರ್ಯವೈಖರಿ
ಬದಲಾಯಿತು. ಅಯೋಧ್ಯೆಗೆ ಮೈಸೂರಿನಿಂದ ಬರಿಗೈಯಲ್ಲಿ ಹೋಗಿದ್ದ ನನಗೆ ಇದೀಗ ಕೋಟ್ಯಂತರ ಜನರ ಪ್ರೀತಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಮಲಲ್ಲಾ ವಿಗ್ರಹ ಕೆತ್ತನೆಯ ಏಳು ತಿಂಗಳು ನಿದ್ದೆ ಮಾಡಿದ್ದೇ ನೆನಪಿಲ್ಲ. ಹೆಂಡತಿ, ಮಕ್ಕಳಿಗೂ ಸಮಯ ಕೊಡಲು ಆಗಲಿಲ್ಲ. ವಿಗ್ರಹ ಕೆತ್ತನೆಗೆ ಬಹುಪಾಲು ಸಮಯ ನೀಡಿದ್ದೆ. ಶಿಲ್ಪಿಗಳು ಯಾವುದೇ ಕೆಲಸ ಒಪ್ಪಿಕೊಂಡರೆ ಅದನ್ನು ಪೂರ್ಣ ಮಾಡಬೇಕು. ಮಾತು ಕೊಟ್ಟ ಮೇಲೆ ನಡೆಸಿಕೊಡಬೇಕು. ಆ ಕೆಲಸ ಮಾಡಿದ ಧನ್ಯತಾಭಾವ ತನ್ನದಾಗಿದೆ ಎಂದು ಹೇಳಿದರು.

ಮೊದಲು ಒಳ್ಳೆಯ ಅವಕಾಶಗಳು ಸಿಕ್ಕಿರಲಿಲ್ಲ. ಅದಕ್ಕಾಗಿ 20 ವರ್ಷ ಕುಲಕಸುಬನ್ನೇ ಮಾಡುತ್ತಿದ್ದೆ. ಈ ಅವಧಿಯಲ್ಲಿ ಕೇದಾರನಾಥದಲ್ಲಿ ಶ್ರೀ ಶಂಕರಾಚಾರ್ಯರರ ಪ್ರತಿಮೆ ಕೆತ್ತನೆಗೆ ಅವಕಾಶ ಬಂದಿತ್ತು. ಅದೇ ವೇಳೆ ವಿದೇಶದಲ್ಲಿ ವಿಗ್ರಹವೊಂದರ ನಿರ್ಮಾಣಕ್ಕೂ ಆಹ್ವಾನ ಬಂದಿತ್ತು. ವಿದೇಶದ ಅವಕಾಶ ಬಿಟ್ಟು ಶಂಕರಾಚಾರ್ಯರ ಪ್ರತಿಮೆ ಮಾಡಿದೆ. ಅದರಿಂದ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಅವಕಾಶ ಬಂದಿತು ಎಂದು ಅರುಣ್‌ ಯೋಗಿರಾಜ್‌ ಹೇಳಿದರು.

Advertisement

ಹಾಸನ ಜಿಲ್ಲೆ ಅರೇಮಾದನಹಳ್ಳಿಯ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ, ಚನ್ನಗಿರಿ ತಾಲೂಕು ವಡ್ನಾಳ ಮಠದ ಶ್ರೀ ಶಂಕರ
ಆತ್ಮಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ
ನಿರಂಜನಮೂರ್ತಿ, ಬಿ.ಕೆ. ಶ್ರೀನಿವಾಸ್‌, ಎನ್‌.ಸೋಮಾಚಾರ್‌, ಮಹಾಸಭಾ ಕಾರ್ಯಾಧ್ಯಕ್ಷ ಎಸ್‌.ರಾಮು, ಲೀಲಾಮೂರ್ತಿ ಇದ್ದರು.

ತಾವು ಬಯಸಿದ ಕೆಲಸ ಸಿಕ್ಕಿಲ್ಲವೆಂದು ಯುವಕರು ನಿರಾಶರಾಗಬಾರದು. ಸ್ವಲ್ಪ ಕಾದರೆ ಅದಕ್ಕಿಂತ ಒಳ್ಳೆಯ ಅವಕಾಶ ಸಿಗುತ್ತವೆ.
ಕಷ್ಟದಲ್ಲಿ ಕುಗ್ಗದೆ, ಸುಖದಲ್ಲಿ ಹಿಗ್ಗದೆ ಸಮಚಿತ್ತರಾಗಿದ್ದಾಗ ಮಾತ್ರ ಒಳ್ಳೆಯ ಅವಕಾಶಗಳು ಅರಸಿ ಬರಲಿವೆ. ಸಮಯ ಮುಖ್ಯವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಂಡರೆ ಮಾತ್ರ ಸಾಧನೆ ಸಾಧ್ಯ. ಅರುಣ್‌ ಯೋಗಿರಾಜ್‌, ಅಯೋಧ್ಯೆ ರಾಮಲಲ್ಲಾ ವಿಗ್ರಹ ಕೆತ್ತನೆ ಶಿಲ್ಪಿ

Advertisement

Udayavani is now on Telegram. Click here to join our channel and stay updated with the latest news.

Next