ಬೀಜಿಂಗ್: ಮನೆಯ ಹೊರಭಾಗದಲ್ಲಿ ವಾಕಿಂಗ್ ಮಾಡುತ್ತಿದ್ದ 41 ವರ್ಷದ ಗರ್ಭಿಣಿಯ ಮೇಲೆ ಗೋಲ್ಡನ್ ರಿಟ್ರೈವರ್ ಶ್ವಾನ ನೆಗೆದು ಹಾರಿದ ಪರಿಣಾಮ ಆಕೆಯ ಗರ್ಭಪಾತಕ್ಕೆ ಕಾರಣವಾಗಿರುವ ಘಟನೆ ಚೀನಾದ ಶಾಂಘೈನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ವಾಕಿಂಗ್ ಮಾಡುತ್ತಿದ್ದ ಯಾನ್ (Yan) ಎಂಬಾಕೆ ಮೇಲೆ ಶ್ವಾನ ಏಕಾಏಕಿ ಹಾರಿಬಿಟ್ಟಿತ್ತು. ಇದರಿಂದಾಗಿ ಗರ್ಭಿಣಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಯಾನ್ ಗೆ ಗರ್ಭಪಾತವಾಗಿರುವ ವಿಚಾರ ತಿಳಿದು ಆಘಾತಕ್ಕೊಳಗಾಗಿರುವುದಾಗಿ ವರದಿ ವಿವರಿಸಿದೆ.
ಕಳೆದ ಕೆಲವು ವರ್ಷಗಳಿಂದ ಐವಿಎಫ್ (IVF) ಮೂಲಕ ಗರ್ಭಧಾರಣೆಗೆ ಪ್ರಯತ್ನಿಸಿದ್ದ ಯಾನ್ ಗೆ ಕೊನೆಗೆ ಈ ಬಾರಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಹೊಂದಿದ್ದಳು. ಆದರೆ ನಾಯಿಯಿಂದಾಗಿ ಆಕೆಯ ಕನಸು ನುಚ್ಚುನೂರಾಗಿರುವುದಾಗಿ ವರದಿ ತಿಳಿಸಿದೆ.
ಯಾನ್ ಮೇಲೆ ನಾಯಿ ಹಾರಿದಾಗ, ಗಾಬರಿಯಿಂದ ಹಿಂದಕ್ಕೆ ವಾಲಿ ಬಿದ್ದಿದ್ದು, ಇದರಿಂದಾಗಿ ಆಕೆಗೆ ಸೊಂಟಕ್ಕೆ ಏಟು ಬಿದ್ದಿರುವುದಾಗಿ ವರದಿ ತಿಳಿಸಿದೆ. “ನಾನು ನಾಲ್ಕು ತಿಂಗಳ ಗರ್ಭಿಣಿ, ಶ್ವಾನ ನನ್ನ ಮೇಲೆ ನೆಗೆದು ಹಾರಿದ ನಂತರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡಾ ನನ್ನ ಮಗುವನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ಯಾನ್ ಅಳಲು ತೋಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಶ್ವಾನ ಮಾಲೀಕ ಲೀ ವಿರುದ್ಧ ಯಾನ್ ಕೋರ್ಟ್ ಮೆಟ್ಟಿಲೇರಿದ್ದು, ಚೀನಾ ಕಾಯ್ದೆ ಪ್ರಕಾರ, ಶ್ವಾನದ ದಾಳಿಯಿಂದಾಗಿ ಯಾನ್ ಗೆ ಗರ್ಭಪಾತವಾಗಿದೆ. ಇದರಿಂದ ಲೀ 90,000 ಯುವಾನ್ (10,63,652 ರೂಪಾಯಿ) ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.