Advertisement

ಎಚ್‌ಎಂಟಿ ಸಂಸ್ಥೆಗೆ ಕಾನೂನು ಬಾಹಿರ ಅನುದಾನ

11:51 AM Aug 03, 2018 | |

ಬೆಂಗಳೂರು: ರಸ್ತೆ ಅಗಲೀಕರಣಕ್ಕಾಗಿ ಎಚ್‌ಎಂಟಿ ಸಂಸ್ಥೆಯಿಂದ ಪಡೆದ ಜಾಗಕ್ಕೆ ಬಿಬಿಎಂಪಿ ನಿಯಮಬಾಹಿರವಾಗಿ ಹೆಚ್ಚುವರಿ ಅನುದಾನ ನೀಡಿರುವುದು ಲೆಕ್ಕಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿದೆ. 

Advertisement

ಮಾಥುಲ್ಲಾ ಕ್ರೀಡಾಂಗಣದಿಂದ ರಾಷ್ಟ್ರೀಯ ಹೆದ್ದಾರಿ-4ರವರೆಗಿನ ಎಚ್‌ಎಂಟಿ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಣೆಗಾಗಿ ಬಿಬಿಎಂಪಿ ರಸ್ತೆ ವಿಸ್ತರಣೆ ಯೋಜನೆ ರೂಪಿಸಿತ್ತು. ಆ ಹಿನ್ನೆಲೆಯಲ್ಲಿ ಎಚ್‌ಎಂಟಿ ಸಂಸ್ಥೆಗೆ ಸೇರಿದ 4.20 ಎಕರೆ ಭೂಮಿ ವಶಕ್ಕೆ ಪಡೆಯಲಾಗಿತ್ತು. ಭೂಮಿಗೆ ಬದಲಾಗಿ ಎಚ್‌ಎಂಟಿ ಸಂಸ್ಥೆಗೆ ಮಾರ್ಗಸೂಚಿ ಬೆಲೆಯ 1.65 ಪಟ್ಟು ಪರಿಹಾರ ನೀಡಿರುವುದು ಇದೀಗ ಲೆಕ್ಕ ಪರಿಶೋಧನಾ ವರದಿಯ ಆಕ್ಷೇಪಣೆಗೆ ಕಾರಣವಾಗಿದೆ. 

ಎಚ್‌ಎಂಟಿ ಸಂಸ್ಥೆ ನೀಡಿದ ಜಾಗಕ್ಕೆ ಮಾರ್ಗಸೂಚಿ ದರದಂತೆ ಪ್ರತಿ ಎಕರೆಗೆ 2.70 ಕೋಟಿ ರೂ. ಪರಿಹಾರ ನೀಡಬೇಕಿತ್ತು. ಆ ಬಗ್ಗೆ ಬಿಬಿಎಂಪಿ ಮತ್ತು ಎಚ್‌ಎಂಟಿ ಸಂಸ್ಥೆ ಅಧಿಕಾರಿಗಳ ನಡುವೆ ಮಾತುಕತೆಯೂ ನಡೆದಿತ್ತು. ಆದರೂ, ಬಿಬಿಎಂಪಿ ಅಧಿಕಾರಿಗಳು 1.65 ಪಟ್ಟು ಅಂದರೆ ಪ್ರತಿ ಎಕರೆಗೆ 4.45 ಕೋಟಿ ರೂ. ನಿಗದಿ ಮಾಡಿ ಒಟ್ಟು 4.20 ಎಕರೆ ಭೂಮಿಗೆ 20.04 ಕೋಟಿ ರೂ. ನಿಗದಿ ಮಾಡಿದ್ದಾರೆ. 

ಪಾಲಿಕೆಗೆ ತೆರಿಗೆ ಪಾವತಿಸಿಲ್ಲ: ಎಚ್‌ಎಂಟಿ ಸಂಸ್ಥೆ 1995ರಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅದರಂತೆ ತೆರಿಗೆ ಹಾಗೂ ಬಡ್ಡಿ ಸೇರಿ ಒಟ್ಟು 35.84 ಕೋಟಿ ರೂ. ಪಾವತಿಸಬೇಕಿದೆ. ಈ ಬಗ್ಗೆಯೂ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖೀಸಲಾಗಿದ್ದು, ಎಚ್‌ಎಂಟಿ ಸಂಸ್ಥೆಗೆ ಪರಿಹಾರ ನೀಡುವ ವೇಳೆ ಬಾಕಿ ತೆರಿಗೆ ಮೊತ್ತವನ್ನು ಕಡಿತಗೊಳಿಸಬೇಕಿತ್ತು ಅಥವಾ ಪರಿಹಾರ ಮೊತ್ತವನ್ನು ತೆರಿಗೆ ರೂಪದಲ್ಲಿ ಹಿಡಿದಿಡಬೇಕಿತ್ತು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. 

2017ರಲ್ಲಿ ಕೌನ್ಸಿಲ್‌ ಮೂಲಕ ಅನುಮೋದನೆ ಪಡೆದಿದ್ದು, 20 ಕೋಟಿ ರೂ. ಪೈಕಿ ಈಗಾಗಲೆ 19 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಕುರಿತು ವಿವರಣೆ ನೀಡುವಂತೆ ರಾಜ್ಯ ಪ್ರಧಾನ ಲೆಕ್ಕಪರಿಶೋಧಕರ ಕಚೇರಿಯಿಂದ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ. 

Advertisement

ಪರಿಹಾರ ನೀಡುವ ವಿಚಾರ ಕೌನ್ಸಿಲ್‌ಗೆ ಬಂದಾಗಲೇ ವಿರೋಧ ವ್ಯಕ್ತಪಡಿಸಿದ್ದೆವು. ಆದರೂ, ಆಡಳಿತ ಪಕ್ಷ ಹಠಕ್ಕೆ ಬಿದ್ದವರಂತೆ ಪರಿಹಾರ ನೀಡಲು ಅನುಮೋದನೆ ಪಡೆದುಕೊಂಡಿತ್ತು. ಇದೀಗ ಲೆಕ್ಕಪರಿಶೋಧನಾ ವರದಿಯಲ್ಲಿಯೂ ಅದನ್ನು ಉಲ್ಲೇಖೀಸಿದ್ದು, ಆಡಳಿತ ಪಕ್ಷದ ಕ್ರಮದ ವಿರುದ್ಧ ಹೋರಾಟ ನಡೆಸಲಾಗುವುದು. 
-ಪದ್ಮನಾಭರೆಡ್ಡಿ, ಬಿಬಿಎಂಪಿ ವಿಪಕ್ಷ ನಾಯಕ 

ಎಚ್‌ಎಂಟಿ ಸಂಸ್ಥೆಯಿಂದ ಪಾಲಿಕೆಗೆ ಬರಬೇಕಾದ ಬಾಕಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಜತೆಗೆ ಲೆಕ್ಕಪರಿಶೋಧನಾ ವರದಿಯಲ್ಲಿನ ಅಂಶಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅದನ್ನು ಸರಿಪಡಿಸಲಾಗುವುದು. 
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ 

Advertisement

Udayavani is now on Telegram. Click here to join our channel and stay updated with the latest news.

Next