ಒಂದು ಕಾರು ದಟ್ಟ ಕಾಡಿನೊಳಗೆ ಹೋಗುವಾಗ “ಶಾರ್ದೂಲ’ ಎನ್ನುವ ಬೋರ್ಡ್ ನೋಡುತ್ತಿದ್ದಂತೆ ನಿಂತುಕೊಳ್ಳುತ್ತದೆ. ತಕ್ಷಣ ಅಪರಿಚಿತ ವ್ಯಕ್ತಿಯ ತುಂಡಾದ ಕೈ ಮೇಲಿನಿಂದ ಬೀಳುತ್ತದೆ. ಅದನ್ನು ನೋಡಿ ಅಲ್ಲಿರುವವರೆಲ್ಲರೂ ಭಯಭೀತರಾಗುತ್ತಾರೆ. ಅವರೊಂದಿಗೆ ಪ್ರೇಕ್ಷಕರೂ ಸಹ! ಇದು ಇತ್ತೀಚೆಗೆ ಬಿಡುಗಡೆಯಾಗಿರುವ “ಶಾರ್ದೂಲ’ ಚಿತ್ರದ ಟ್ರೇಲರ್ ಝಲಕ್. ಇಷ್ಟು ಹೇಳುತ್ತಿದ್ದಂತೆ “ಶಾರ್ದೂಲ’ ಹಾರರ್ ಕಂ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ಅನ್ನೋದು ಎಲ್ಲರಿಗೂ ಗೊತ್ತಾಗುತ್ತದೆ. ಹಾಗಾದರೆ ನಿಜವಾಗಿಯೂ “ಶಾರ್ದೂಲ’ ಚಿತ್ರದಲ್ಲಿ ಬೇರೆ ಏನೆಲ್ಲಾ ಇದೆ ಎನ್ನುವುದರ ಬಗ್ಗೆ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡವೇ ಕೆಲ ವಿಷಯಗಳನ್ನು ಬಿಚ್ಚಿಟ್ಟಿದೆ.
ನಾಲ್ವರು ಅಪರಿಚಿತ ಜಾಗಕ್ಕೆ ಹೋದಾಗ ಅಲ್ಲಿ ಏನೇನು ಘಟನೆಗಳು ನಡೆಯುತ್ತವೆ. ಅದು ವಾಸ್ತವನಾ ಅಥವಾ ಭ್ರಮೆಯಾ? ಅದರ ಹಿಂದಿನ ಕಾರಣಗಳೇನು? ಮತ್ತಿತರ ಸಂಗತಿಗಳ ಸುತ್ತ “ಶಾರ್ದೂಲ’ ಚಿತ್ರದ ಕಥೆ ನಡೆಯುತ್ತದೆ. “ಶಾರ್ದೂಲ’ ಹಾರರ್ ಶೈಲಿಯ ಚಿತ್ರ. ಹಾಗಂತ ಇದರಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸು, ರಾಕ್ಷಸ ಇರುವುದಿಲ್ಲ. ನಮ್ಮ ಸುತ್ತಮುತ್ತಲಿನ ದಿನನಿತ್ಯ ನೋಡುವ ಜಾಗಗಳ ಬಗ್ಗೆ ನಮಗೆ ಗೊತ್ತಿರುತ್ತದೆ. ಆದರೆ, ನಾವುಗಳು ಗೊತ್ತಿಲ್ಲದ ಜಾಗಕ್ಕೆ ಹೋದಾಗ ಅಲ್ಲಿನ ಅನುಭವ, ಜನ, ಸ್ಥಳ ಅಗೋಚರವಾಗಿ ಕಾಣಿಸುತ್ತದೆ. ಅವೆಲ್ಲವು ಅತೀಂದ್ರಿಯ ಶಕ್ತಿಗಳು ಅಂತ ಅನ್ನಿಸೋಕೆ ಶುರುವಾಗುತ್ತದೆ. ಅಂತಹ ಸಂದರ್ಭದಲ್ಲಿ ನಡೆಯುವ ಘಟನೆಗಳಿಗೆ “ಶಾರ್ದೂಲ’ ಚಿತ್ರವು ಉತ್ತರ ಕೊಡುತ್ತದೆ.
ಅದಕ್ಕಾಗಿ ಚಿತ್ರದ ಟೈಟಲ್‌ನಲ್ಲಿ “ದೆವ್ವ ಇರಬಹುದಾ…’ ಎಂದು ಟ್ಯಾಗ್ ಲೈನ್ ಇಡಲಾಗಿದೆ ಎನ್ನುವುದು ಚಿತ್ರದ ಬಗ್ಗೆ ಚಿತ್ರತಂಡ ನೀಡುವ ವಿವರಣೆ. ಇನ್ನು “ಶಾರ್ದೂಲ’ ಚಿತ್ರದ ಪ್ರಯಾಣದ ಕಥೆಯಲ್ಲಿ ಒಂದು ಕಾರು ಕೂಡ ಪ್ರಮುಖ ಪಾತ್ರವಹಿಸಿದೆಯಂತೆ. ಅದಕ್ಕಾಗಿ ಎಲ್ಲಾ ಕಡೆ ಸುತ್ತಿದ ಚಿತ್ರತಂಡ ಕಡೆಗೂ ಒಂದು ಹಳೇ ಬೆಂಜ್ ಕಾರನ್ನು ತರುವಲ್ಲಿ ಯಶಸ್ವಿಯಾಗಿದೆ. ಇನ್ನು “ಶಾರ್ದೂಲ’ ಚಿತ್ರದಲ್ಲಿ ಚೇತನ್ ಚಂದ್ರ, ರವಿತೇಜ, ಕೃತಿಕಾ ರವೀಂದ್ರ, ಐಶ್ವರ್ಯಾ ಪ್ರಸಾದ್, ಕುಮಾರ್ ನವೀನ್, ಮಹೇಶ್ ಸಿದ್ದು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಹೆಬ್ರಿ, ಆಗುಂಬೆ ಸುತ್ತಮುತ್ತ “ಶಾರ್ದೂಲ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಚಿತ್ರಕ್ಕೆ ಅರವಿಂದ್ ಕೌಶಿಕ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವೈ.ಬಿ.ಆರ್ ಮನು ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಸತೀಶ್ ಬಾಬು ಸಂಗೀತ ಸಂಯೋಜಿಸಿದ್ದಾರೆ. ರೋಹಿತ್ ಮತ್ತು ಸಿ. ಕಲ್ಯಾಣ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ “ಶಾರ್ದೂಲ’ ಚಿತ್ರದ ಮೊದಲ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸದ್ಯ ನಿಧಾನವಾಗಿ ಪ್ರಮೋಶನ್ ಕೆಲಸಗಳಲ್ಲಿ ನಿರತವಾಗಿರುವ “ಶಾರ್ದೂಲ’ ಚಿತ್ರತಂಡ ಇದೇ ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.