ಕಾಲ್ಗೆಜ್ಜೆಗೂ ಸ್ತ್ರೀಯರಿಗೂ ಅವಿನಾಭಾವ ಸಂಬಂಧವಿದೆ. ನಿತ್ಯ ಬಳಕೆಗೆ ತೆಳುವಾದ ಕಾಲ್ಗೆಜ್ಜೆಯನ್ನು ಬಯಸುವ ಹೆಣ್ಣು ಮಕ್ಕಳು ಶಾಸ್ತ್ರ, ಸಂಪ್ರದಾಯಬದ್ಧ ಕಾರ್ಯಕ್ರಮಗಳಿಗೆ ದುಬಾರಿ ಅಭರಣಗಳೊಂದಿಗೆ ಭಾರವಾದ ಕಾಲ್ಗೆಜ್ಜೆಯನ್ನು ಧರಿಸಲು ಇಷ್ಟಪಡುತ್ತಾರೆ. ಇದು ಸೌಂದರ್ಯದ ಪ್ರತೀಕವೆಂದು ಭಾವಿಸಲಾಗಿದೆಯಾದರೂ ಇದರಲ್ಲಿ ಕೆಲವೊಂದು ಆರೋಗ್ಯದ ವಿಚಾರಗಳೂ ಅಡಗಿವೆ.
ಇದನ್ನೂ ಓದಿ:ನೀತಿ ಬೆನ್ನೇರಿದ ಭೀತಿ; ವಾಟ್ಸ್ ಆ್ಯಪ್ ಹೊಸ ಪಾಲಿಸಿ ಏನಂತಾರೆ ಭಾರತೀಯರು?
ಸಂಪ್ರದಾಯಸ್ಥ ಮನೆಯಲ್ಲಿ ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಧರಿಸಲೇಬೇಕು ಎನ್ನುವ ನಿಯಮವಿದೆ. ಇತ್ತೀಚೆಗೆ ಕೆಲವರು ಫ್ಯಾಷನ್ ನೆಪದಲ್ಲಿ ಇದನ್ನು ತಿರಸ್ಕರಿಸುತ್ತಾರೆ ಆದರೂ ವಿಶೇಷ ಸಂದರ್ಭದಲ್ಲಿ ಹೆಚ್ಚಿನವರು ಕಾಲ್ಗೆಜ್ಜೆ ಧರಿಸಲು ಇಷ್ಟಪಡುತ್ತಾರೆ. ಅದರಲ್ಲೂ ಮದುವೆಯಾದ ಹೆಂಗಳೆಯರು ಕಾಲ್ಗೆಜ್ಜೆ ಧರಿಸಲೇಬೇಕು ಎನ್ನುತ್ತಾರೆ ಹಿರಿಯರು.
ಶಾಸ್ತ್ರ, ಸಂಪ್ರದಾಯದ ಪ್ರಕಾರ ಮನೆಯಲ್ಲಿ ಹೆಂಗಳೆಯರು ಕಾಲ್ಗೆಜ್ಜೆ ಧರಿಸಿ ಓಡಾಡುವುದರಿಂದ ಅಲ್ಲಿ ಲಕ್ಷ್ಮೀ ಅಂದರೆ ಸಿರಿಸಂಪತ್ತು ಸದಾ ನೆಲೆಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಆದರೆ ವೈಜ್ಞಾನಿಕವಾಗಿ ಹೆಂಗಳೆಯರು ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಅದರಿಂದ ಬರುವ ನಾದದಿಂದ ಸುತ್ತಮುತ್ತ ನಕರಾತ್ಮಕತೆ ದೂರವಾಗಿ ಸಕರಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ.
ಇನ್ನು ಬೆಳ್ಳಿ ಶುದ್ಧತೆಯ ಸಂಕೇತ. ಇದನ್ನು ಧರಿಸುವುದರಿಂದ ದೇಹದ ಉಷ್ಣಾಂಶವನ್ನು ಬೆಳ್ಳಿ ಹೀರಿಕೊಂಡು ದೇಹವನ್ನು ತಂಪಾಗಿರಿಸುತ್ತದೆ. ಜತೆಗೆ ವಿವಿಧ ಚರ್ಮದ ತೊಂದರೆಗಳನ್ನು ದೂರವಿಡುತ್ತದೆ. ಅಂದರೆ ಬಹುಬೇಗನೆ ಚರ್ಮ ಸುಕ್ಕುಗಟ್ಟುವುದನ್ನು ಬೆಳ್ಳಿ ತಡೆಯುತ್ತದೆ. ಜತೆಗೆ ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ.