Advertisement
ಸಿದ್ದರಾಮಯ್ಯ ಅವಧಿಯಲ್ಲಿ ಕೃಷಿ ಕೂಲಿ ಕಾರ್ಮಿಕರು ಹಾಗೂ ಸಣ್ಣ ರೈತರಿಗೆ ಕೃಷಿಯೊಂದಿಗೆ ಉಪ ಕಸುಬಾಗಿ ಕೈಗೊಳ್ಳಲು ಪಶು ಭಾಗ್ಯ ಯೋಜನೆ ಜಾರಿಗೊಳಿಸಲಾಗಿತ್ತು. ಈ ಯೋಜನೆಯನ್ನು ರಾಜ್ಯದ 30 ಜಿಲ್ಲೆಗಳಲ್ಲಿ ಬೆಂಗಳೂರಿನ 18 ವಿಧಾನ ಸಭಾ ಕ್ಷೇತ್ರಗಳನ್ನು ಹೊರತು ಪಡಿಸಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಹೊಂದಿರುವ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.
Related Articles
Advertisement
ಪ್ರತಿ ವರ್ಷ ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ದಿಂದ ಸುಮಾರು 2 ರಿಂದ 3 ಸಾವಿರ ಫಲಾನುಭವಿಗಳಿಂದ ಬೇಡಿಕೆ ಬರುತ್ತಿದೆ. ಆದರೆ, ಇಡೀ ರಾಜ್ಯದಲ್ಲಿ ವಾರ್ಷಿಕ ಸುಮಾರು 5 ರಿಂದ 6 ಸಾವಿರ ಫಲಾನುಭವಿಗಳಿಗೆ ವಿಧಾನಸಭಾವಾರು ಆಯ್ಕೆ ಮಾಡಿ ಹಂಚಿಕೆ ಮಾಡಲಾಗುತ್ತದೆ. ಈ ಯೋಜನೆಗೆ ಬಜೆಟ್‌ನಲ್ಲಿ ಕೇವಲ 17 ಕೋಟಿ ರೂ.ಮಾತ್ರ ಮೀಸಲಿಡಲಾಗಿದೆ. ಇದರಿಂದ ಬೇಡಿಕೆಗೆ ತಕ್ಕಷ್ಟು ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಏನಿದು ಯೋಜನೆ?: ಪಶು ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಫಲಾನುಭವಿಗಳ ಆಯ್ಕೆಗೆ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸ ಲಾಗುತ್ತದೆ. ಆ ಸಮಿತಿಯಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ 60 ಸಾವಿರ ರೂ. ಬ್ಯಾಂಕ್‌ಗಳ ಮೂಲಕ ಸಾಲ ಒದಗಿಸಲಾಗುತ್ತದೆ.
ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.50 ರಷ್ಟು ರಿಯಾಯ್ತಿ ನೀಡಲಾಗುತ್ತದೆ. ಎಸ್ಸಿ ಹಾಗೂ ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ಶೇ. 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಆಯ್ಕೆಯಾದ ಫಲಾನುಭವಿ ಈ ಯೋಜನೆ ಅಡಿಯಲ್ಲಿ ಹಸು, ಕುರಿ, ಮೇಕೆ, ಹಂದಿ ಖರೀದಿ ಮಾಡಲು ಅವಕಾಶವಿದೆ. ಕಳೆದ ಐದು ವರ್ಷದಲ್ಲಿ ಪಶು ಪಾಲನಾ ಇಲಾಖೆಯಲ್ಲಿ ಯಾವುದಾದರೂ ಸವಲತ್ತು ಪಡೆದಿದ್ದರೆ, ಪಶು ಭಾಗ್ಯ ಯೋಜನೆ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ.
ಎಸ್ಸಿಪಿ ಟಿಎಸ್‌ಪಿ ಹಣ ವರ್ಗಾವಣೆಗೆ ಪತ್ರ: ಪಶು ಭಾಗ್ಯ ಯೋಜನೆ ಅಡಿಯಲ್ಲಿ ಎಸ್‌ಟಿಪಿ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಮೀಸಲಿಟ್ಟ ಹಣ ಖರ್ಚಾಗದೇ ಇರುವುದರಿಂದ, ಯೋಜನೆಗೆ ಮೀಸಲಿಟ್ಟ ಹಣ ವ್ಯರ್ಥವಾಗುತ್ತಿರುವುದರಿಂದ ಆ ಹಣವನ್ನು ಸಾಮಾನ್ಯ ವರ್ಗದವರಿಗೆ ಇದೇ ಯೋಜನೆ ಅಡಿಯಲ್ಲಿ ಅನದಾನ ಹಂಚಿಕೆ ಮಾಡಲು ಎಸ್‌ಟಿಪಿ ಟಿಎಸ್‌ಪಿ ಹಣವನ್ನು ವರ್ಗಾಯಿಸುವಂತೆ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಪಶುಭಾಗ್ಯ ಯೋಜನೆಗೆ ಹೆಚ್ಚಿನ ಬೇಡಿಕೆ ಇದೆ. ಶಾಸಕರು ಈ ಯೋಜನೆಯ ಬಗ್ಗೆ ಒಲವು ಹೊಂದಿದ್ದು, ಹೆಚ್ಚು ಫಲಾನುಭವಿಗಳನ್ನು ಒದಗಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಇಡಲಾಗುವುದು. ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. -ಪ್ರಭು ಚೌವ್ಹಾಣ್, ಪಶು ಸಂಗೋಪನೆ ಮತ್ತು ಹಜ್ ಸಚಿವ * ಶಂಕರ ಪಾಗೋಜಿ