Advertisement
ರಾಜ್ಯದ ವಿವಿಧ ಸಾಂಪ್ರ ದಾಯಿಕ ವಿ.ವಿ.ಗಳು ದೂರಶಿಕ್ಷಣ ನೀಡುತ್ತಿದ್ದು ಅದನ್ನು ರದ್ದುಗೊಳಿಸಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಗೆ ಮಾತ್ರ ಅನುಮತಿ ನೀಡಲು ಸಾಧ್ಯವೇ? ಎಂಬ ಚರ್ಚೆ ಕೆಲವು ವರ್ಷದಿಂದ ಕೇಳಿಬರುತ್ತಿತ್ತು. ಅದರಂತೆ ಇದೇ ವಿಷಯ ಆಧಾರಿತವಾಗಿ ಕಳೆದ ವರ್ಷ ಜು. 20ರಂದು ರಾಜ್ಯಪಾಲರು ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ಪತ್ರಬರೆದು ವಿವರಣೆ ಕೇಳಿದ್ದರು. ಅದರಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಂಡು, ಮುಕ್ತ ವಿ.ವಿ.ಗೆ ಮಾತ್ರ ಅವಕಾಶ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಸರಕಾರವು ಇದೇ ನಿರ್ಣಯವನ್ನು ಅಧ್ಯಾದೇಶದ ಮೂಲಕ ಜಾರಿಗೆ ತರಲು ನಿರ್ಧರಿಸಿದೆ. ಮಂಗಳೂರು ವಿ.ವಿ.ಯ ದೂರಶಿಕ್ಷಣ ಕೇಂದ್ರದ ಮೂಲಕ ಕರಾವಳಿ ಭಾಗದ ಸಾವಿರಾರು ಜನರು ಶಿಕ್ಷಣ ಪಡೆದಿದ್ದರು. ಆದರೆ ಇದೀಗ ಈ ಕೇಂದ್ರದ ಬಗ್ಗೆಯೇ ಅನಿಶ್ಚಿತತೆ ಎದ್ದಿರುವ ಹಿನ್ನೆಲೆಯಲ್ಲಿ ದೂರಶಿಕ್ಷಣ ಪಡೆಯಲು ಉದ್ದೇಶಿಸಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ.
ಬೇರೆ ಕೋರ್ಸ್‌ಗಳ ಜತೆಗೆ ಮಂಗಳೂರು ಸೇರಿದಂತೆ 5 ವಿ.ವಿ.ಗಳು ದೂರ ಶಿಕ್ಷಣ ಕೋರ್ಸ್ ನಡೆಸುತ್ತಿವೆ. ಆದರೆ ದೂರ ಶಿಕ್ಷಣ ಕೋರ್ಸ್‌ಗಳನ್ನು ಮಾತ್ರ ನಡೆಸುತ್ತಿರುವ ಮುಕ್ತ ವಿ.ವಿ. ಆದಾಯಕ್ಕೆ ಇದರಿಂದ ಕುತ್ತು ಬಂದಿದೆ. ಹೀಗಾಗಿ ದೂರಶಿಕ್ಷಣ ಕೋರ್ಸ್ ನಡೆಸುವ ಜವಾಬ್ದಾರಿಯನ್ನು ಮುಕ್ತ ವಿ.ವಿ.ಗಷ್ಟೇ ನೀಡುವ ಉದ್ದೇಶವನ್ನು ಸರಕಾರ ಹೊಂದಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಬಂದಿಲ್ಲ
ರಾಜ್ಯದ ವಿ.ವಿ.ಗಳು ನಡೆಸುತ್ತಿರುವ ದೂರಶಿಕ್ಷಣ ವ್ಯವಸ್ಥೆ ರದ್ದುಗೊಳಿಸುವ ಬಗ್ಗೆ ರಾಜ್ಯ ಸರಕಾರ ಅಧ್ಯಾದೇಶ ಹೊರಡಿಸಿರುವ ಬಗ್ಗೆ ಮಾಧ್ಯಮಗಳಿಂದ ತಿಳಿದುಬಂದಿದೆ. ಆದರೆ ಮಂಗಳೂರು ವಿ.ವಿ.ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಈ ವಿಚಾರವು ಚರ್ಚೆಗೆ ಬಂದ ಆರಂಭದಲ್ಲಿಯೇ ಮಂಗಳೂರು ವಿ.ವಿ. ವತಿಯಿಂದ ಸರಕಾರಕ್ಕೆ ಪತ್ರ ಬರೆದು ದೂರಶಿಕ್ಷಣ ರದ್ದುಗೊಳಿಸದಂತೆ ಮನವಿ ಮಾಡಲಾಗಿತ್ತು.
ಪ್ರೊ| ಪಿ.ಎಸ್.ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿ.ವಿ.