ವಿಟ್ಲ: ಶಾಲಾ ಕಾಲೇಜುಗಳು ಪೋಷಕರಿಂದ ಶುಲ್ಕ ವಸೂಲಿ ಮಾಡಬಾರದು ಎಂದು ಆದೇಶಿಸಿದ್ದರೂ ಸರಕಾರದ ಆದೇಶಕ್ಕೂ ಚಟುವಟಿಕೆಗಳಿಗೂ ತಾಳ ಮೇಳವಿಲ್ಲ! ಇದಕ್ಕೆ ಉದಾಹರಣೆ ಮಂಗಳೂರು ವಿಶ್ವವಿದ್ಯಾನಿಲಯದ್ದು. ಎಲ್ಲ ಪದವಿ ಕಾಲೇಜುಗಳು ವಿದ್ಯಾರ್ಥಿಗಳ ಶುಲ್ಕವನ್ನು ಸೆ. 30ರೊಳಗೆ ಪಾವತಿಸಬೇಕೆಂದು ಆದೇಶಿಸಿದೆ.
ಮಂಗಳೂರು ವಿ.ವಿ. ವ್ಯಾಪ್ತಿಯ ಅನುದಾನ ರಹಿತ ಕಾಲೇಜುಗಳಿಗೆ ಆದೇಶ ತಲುಪಿದ್ದು, ಆಡಳಿತ ಮಂಡಳಿಗಳು ತಬ್ಬಿಬ್ಟಾಗಿವೆ. ವಿದ್ಯಾರ್ಥಿಗಳ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಕಾಲೇಜುಗಳ ತರಗತಿ ಆರಂಭಿಸುವ ಬಗ್ಗೆ ಸರಕಾರ ಇನ್ನೂ ಯಾವುದೇ ಪ್ರಕಟನೆ ನೀಡಿಲ್ಲ. ಶುಲ್ಕ ವಸೂಲಿ ಮಾಡಬಾರದು ಎಂಬ ಎಚ್ಚರಿಕೆಯನ್ನೂ ಸರಕಾರ ನೀಡಿದೆ. ಆದರೆ ವಿ.ವಿ.ಯು ಪದವಿ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸಲು ಆದೇಶಿಸಿದೆ. .
ಒಂದೆಡೆ ವಿದ್ಯಾರ್ಥಿಗಳ ಹೆತ್ತವರು ಶುಲ್ಕ ಪಾವತಿಸದೇ ಖಾಸಗಿ ವಿದ್ಯಾ ಸಂಸ್ಥೆಗಳು ಕಷ್ಟದಲ್ಲಿವೆ. ಉಪನ್ಯಾಸಕ ವೃಂದದವರಿಗೆ ವೇತನ ನೀಡಲಾಗದೇ ಒದ್ದಾಡುತ್ತಿದ್ದಾರೆ. ಹೆತ್ತವರಿಗೆ ಶುಲ್ಕ ಪಾವತಿಸುವಂತೆ ವಿನಂತಿಸಿದರೆ ಶಿಕ್ಷಣ ಇಲಾಖೆಗೆ ದೂರು ನೀಡಬೇಕೆಂದೂ ಸರಕಾರ ಹೇಳುತ್ತಿದೆ. ಆದರೆ ತರಗತಿ ಸೇರ್ಪಡೆ ಪ್ರಕ್ರಿಯೆಯೂ ಪೂರ್ತಿಯಾಗದೇ ಆನ್‌ಲೈನ್ ತರಗತಿಗಳನ್ನು ಆರಂಭಿಸಿ, ಶುಲ್ಕದ ವಿ.ವಿ.ಯ ಪಾಲನ್ನು ಕೊಡಬೇಕು ಎಂದು ಆದೇಶ ನೀಡಿದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸರಕಾರದ ನಿಯಮ ಮೀರಿ ಮಂಗಳೂರು ವಿಶ್ವ ವಿದ್ಯಾನಿಲಯ ನಡೆದುಕೊಳ್ಳುವುದಿಲ್ಲ. ಸೆ. 30ರೊಳಗೆ ಶುಲ್ಕ ಪಾವತಿಸಲು ಕಾಲೇಜುಗಳಿಗೆ ಆದೇಶ ನೀಡಲಾಗಿದೆ. ಆದರೆ, ವರ್ಷದ ಶುಲ್ಕವನ್ನು ಒಮ್ಮೆಲೇ ಕಟ್ಟಬೇಕೆಂಬ ಒತ್ತಡವಿಲ್ಲ. ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಶುಲ್ಕ ಪಾವತಿಸಲು ಅವಕಾಶವಿದೆ. ಶುಲ್ಕ ಪಾವತಿಸಲು ತೊಂದರೆ ಇರುವ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಸೂಕ್ತ ಎಚ್ಚರ ವಹಿಸಲಾಗುವುದು.
-ಡಾ| ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.