ಬೆಂಗಳೂರು: “ತಮ್ಮ ಅಧಿಕಾರಾವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಏನಾದರೂ ಒಳಿತಾಗಿದ್ದರೆ ಅದಕ್ಕೆ ವಿವಿಯ ಎಲ್ಲಾ ಪ್ರಾಧ್ಯಾಪಕರು ಹಾಗೂ ಇತರೆ ಸಿಬ್ಬಂದಿ ವರ್ಗ ನೀಡಿದ ಸಹಕಾರ ಕಾರಣ,” ಎಂದು ಬೆಂಗಳೂರು ವಿವಿ ನಿರ್ಗಮಿತ ಕುಲಪತಿ ಡಾ.ಬಿ.ತಿಮ್ಮೇಗೌಡ ಹೇಳಿದ್ದಾರೆ.
ತಿಮ್ಮೇಗೌಡ ನಿವೃತ್ತಿ ಹಿನ್ನೆಲೆಯಲ್ಲಿ “ಬೆಂಗಳೂರು ವಿವಿಯ ಶಿಕ್ಷಕೇತರ ನೌಕರರ ಸಂಘ’ವು ಮಂಗಳವಾರ ಹಮ್ಮಿಕೊಂಡಿದ್ದ “ಬೀಳ್ಕೊಡುಗೆ’ ಸಮಾರಂಭದಲ್ಲಿ ಮಾತನಾಡಿದ ಅವರು, “ನಾನು ಕುಲಪತಿಯಾದಾಗ ಕೆಲವರು ತಮ್ಮ ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳನ್ನು ಆಡಳಿತದ ವಿರುದ್ಧ ಎತ್ತಿಕಟ್ಟಿದ ಪ್ರಕರಣಗಳು ನಡೆದವು.
ವಿದ್ಯಾರ್ಥಿಗಳನ್ನು ಹೇಗೆ ದುರುಪಯೋಗಪಡಿಸಿ ಕೊಳ್ಳಲಾಗುತ್ತದೆ ಎಂಬುದನ್ನು ನಾನು ತಿಳಿ ಹೇಳಿದ್ದೆ. ಅವರಿಗೂ ಅದರ ಮನವರಿಕೆಯಾಯಿತು. ಉಳಿದಂತೆ ಎಲ್ಲಾ ಅಧ್ಯಾಪಕರು, ಸಿಬ್ಬಂದಿಗಳಿಂದಲೂ ಉತ್ತಮ ಸಹಕಾರ ನೀಡಿದ್ದಾರೆ,” ಎಂದರು.
ಕುಲಸಚಿವ ಪ್ರೊ.ಕೆ.ಎನ್.ನಿಂಗೇಗೌಡ ಮಾತನಾಡಿ, “ತಿಮ್ಮೇಗೌಡ ಅವರು ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ವಿವಿಯ ವ್ಯವಸ್ಥೆ ಸುಧಾರಿಸಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದವರ ಪಟ್ಟಿಯಲ್ಲಿ ಇವರೂ ಒಬ್ಬರು” ಎಂದು ಶ್ಲಾ ಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಎಸ್. ರೆಡ್ಡಿ, ವಿತ್ತಾಧಿಕಾರಿ ಡಾ.ಎ. ಲೋಕೇಶ್, ಸಿಂಡಿಕೇಟ್ ಸದಸ್ಯ ಶಿವಣ್ಣ, ಸಂಘದ ಅಧ್ಯಕ್ಷ ಮುದ್ದಣ್ಣ, ಕಾರ್ಯದರ್ಶಿಗಳಾದ ರಂಗಧಾಮ, ಶಿವರಾಜು ಇದ್ದರು.