Advertisement
ಅದು ವಿಧಾನಸೌಧ ಇರಲಿ, ರಾಜಕೀಯ ನಾಯಕರ ಔತಣಕೂಟವಿರಲಿ ಅಂಬರೀಷ್ ಪ್ರವೇಶ ಆಯ್ತು ಅಂದರೆ “ಹೊಯ್ ಏನೋ……ಬಡ್ಡೆ„ತದೆ….ಆಯ್ತು ಸುಮ್ಕಿರಪ್ಪ…. ನಿಮ್ದೆಲ್ಲಾ ನೋಡಿದ್ದೀವಿ….ಓ….ಬಾ ಇಲ್ಲಿ….ಹೀಗೆ ಮಾತನಾಡುವ ಹಾಗೂ ತಾನು ಮಾತನಾಡಿದ್ದನ್ನು ಅರಗಿಸಿಕೊಳ್ಳುವ “ಧಮ್’ ಇದ್ದವರು ಅಂಬರೀಷ್. ಅಂಬರೀಷ್ ಮನಸ್ಸು ಮಾಡಿದರೆ ರಾಜ್ಯದ ಮುಖ್ಯಮಂತ್ರಿ “ಮೆಟೀರಿಯಲ್’ ಆಗಬಹುದಿತ್ತು.
Related Articles
Advertisement
ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿಯೂ ಕೆಲಸ ಮಾಡಿದ್ದ ಅವರು ನಂತರ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡ ನಂತರ ಸ್ವಲ್ಪ ಮಟ್ಟಿಗೆ ರಾಜಕೀಯದಿಂದಲೇ ವಿಮುಖರಾಗಲು ಪ್ರಾರಂಭಿಸಿದರು. ಇದೇ ಕಾರಣಕ್ಕೆ 2018 ರಲ್ಲಿ ಎಐಸಿಸಿಯಿಂದ ಕೆಪಿಸಿಸಿ ವರೆಗೆ ಅತ್ತು ಕರೆದು ಟಿಕೆಟ್ ಕೊಡುತ್ತೇವೆ ಎಂದು ದುಂಬಾಲು ಬಿದ್ದರೂ ಸ್ಪರ್ಧೆ ಮಾಡಲಿಲ್ಲ. ಅದರಿಂದಾದ ನಷ್ಟ ಫಲಿತಾಂಶದ ನಂತರ ಗೊತ್ತಾಗಿತ್ತು.
ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಟ್ಟ ನಂತರ ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಎಂದೂ ಚಿಂತಿಸಲೇ ಇಲ್ಲ. ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ಅವರ ಹೆಗಲ ಮೇಲೆ ಕೈ ಹಾಕಿ ತಮ್ಮ ಎಂದಿನ ಸ್ಟೈಲ್‌ನಲ್ಲಿ ಈ ಅಂಬರೀಷ್ ಸಚಿವ ಸ್ಥಾನಕ್ಕೆ ಯಾರ ಮನೆ ಬಾಗಿಲಿಗೂ ಹೋಗೋನಲ್ಲ. ನನಗೆ ಸಚಿವ ಸ್ಥಾನದಿಂದ ಏನೂ ಆಗಬೇಕಾಗಿಲ್ಲ ಎಂದು ಹೇಳಿದ್ದರು.
ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಗೆಳೆತನ ಹೊಂದಿದ್ದ ಅಂಬರೀಷ್ ಖಾಸಗಿಯಾಗಿ ತಮಾಷೆ ಮಾಡುತ್ತಾ ಕಾಳೆಯುತ್ತಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜತೆಯೂ ಒಳ್ಳೆಯ ಒಡನಾಟ ಹೊಂದಿದ್ದ ಅಂಬರೀಷ್ ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಎಂದೂ ವೈಯಕ್ತಿಕ ಗೆಳೆತನಕ್ಕೆ ಧಕ್ಕೆ ತಂದುಕೊಳ್ಳುತ್ತಿರಲಿಲ್ಲ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಅಂಂಬರೀಷ್ ಅವರನ್ನು ಜನತಾದಳದ ತೆಕ್ಕೆಗೆ ಸೆಳೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಇತ್ತೀಚೆಗೆ ನಿಧನರಾದ ಅನಂತಕುಮಾರ್ ಅವರು ಅಂಬರೀಷ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಇನ್ನಿಲ್ಲದ ಒತ್ತಡ ಹಾಕಿದರು.
ಆದರೂ ಅವರು ಒಪ್ಪಿರಲಿಲ್ಲ. ತಮಾಷೆ ಮಾಡುತ್ತಲೇ ನೀವು ನನಗೆ ಟಿಕೆಟ್ ಕೊಡ್ತಿರಾ, ಮಂಡ್ಯದಲ್ಲಿ ನಾನು ಬಿಜೆಪಿ ಬಾವುಟ ಹಿಡೀಬೇಕಾ…. ಆಯ್ತು ಬಿಡ್ರಪ್ಪಾ ಎಂದು ಚಟಾಕಿ ಹಾರಿಸಿ ಸುಮ್ಮನಾಗಿದ್ದರು.ರಜನೀಕಾಂತ್, ಮೋಹನ್‌ಬಾಬು, ಶತ್ರುಘ್ನಸಿನ್ಹಾರಂತಹ ದಿಗ್ಗಜರ ಜತೆ ಸ್ನೇಹ ಹೊಂದಿದ್ದರೂ ತಮ್ಮ ರಾಜಕೀಯ ಏಳಿಗೆಗೆ ಎಂದೂ ಅವರ ಹೆಸರು ಸಹ ಬಳಸಿಕೊಳ್ಳುತ್ತಿರಲಿಲ್ಲ.
ತ್ರಿಮೂರ್ತಿಗಳು ಇಲ್ಲ: ರಾಜ್ಯದಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಕನ್ನಡ ಚಿತ್ರರಂಗದ ತ್ರಿಮೂರ್ತಿಗಳು. ಆ ಪೈಕಿ ರಾಜ್‌ಕುಮಾರ್ ರಾಜಕೀಯಕ್ಕೆ ಬರಲೇ ಇಲ್ಲ. ವಿಷ್ಣುವರ್ಧನ್ ಅವರನ್ನು ಒಮ್ಮೆ ರಾಜಕೀಯಕ್ಕೆ ತರಲು ಖುದ್ದು ಅಂಬರೀಷ್ ಪ್ರಯತ್ನಿಸಿದ್ದರು. ಆದರೆ, ಅದು ಫಲ ನೀಡಿರಲಿಲ್ಲ. ಒಮ್ಮೆ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರು ಒಟ್ಟಾಗಿ ಇದ್ದಾಗ ರಾಜಕೀಯ ವಿಚಾರ ಬಂದಾಗ ನೀನು ಇದ್ದೀಯಲ್ಲಪ್ಪಾ ನಾವ್ಯಾಕೆ, ನಿನಗೆ ರಾಜಕೀಯ ಒಲಿದಿದೆ ಜಮಾಯಿಸು ಎಂದು ಡಾ.ರಾಜ್‌ಕುಮಾರ್ ಹೇಳಿದ್ದರಂತೆ.