ರಾಣಿಬೆನ್ನೂರ: ಭಾರತೀಯ ಪುಣ್ಯ ಭೂಮಿಯಲ್ಲಿ ಇರುವ ಹಿಂದೂ ಸಂಸ್ಕೃತಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುವ ವಿಶಾಲ ಮನೋಭಾವವನ್ನು ಇಲ್ಲಿ ಜನ್ಮ ಪಡೆದವರೆಲ್ಲರಲ್ಲೂ ಕಾಣುತ್ತೇವೆ. ಇದುವೇ ಈ ಮಣ್ಣಿನ ಗುಣಧರ್ಮವಾಗಿದೆ ಎಂದು ಬಾಳೆಹೊನ್ನೂರ ರಂಭಾಪುರಿ ಪೀಠದ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿ ಸಿರುವ ವಂದೇ ಮಾತರಂ ಸ್ವಯಂಸೇವಾ ಸಂಸ್ಥೆಯ 14ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸೋಮವಾರ, ರಾಣಿಬೆನ್ನೂರ ಕಾ ರಾಜಾ ಮಹಾ ಮಂಟಪದಲ್ಲಿ ವಿಷ್ಣುವಿನ ದಶಾವತಾರದ ಕುರಿತು ಪ್ರತಿಷ್ಠಾಪಿಸಿರುವ ಸ್ತಬ್ಧಚಿತ್ರಗಳ ಮೂಲಕ ಸಾರುವ ಪುರಾಣದ ಮಾಹಿತಿ ವೀಕ್ಷಿಸಿ ಅವರು ಮಾತನಾಡಿದರು.
ಎಲ್ಲ ನದಿಗಳು ಸಾಗರವನ್ನು ಸೇರುವಂತೆ ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದೆ. ಭಾರತದಲ್ಲಿ ಹಲವಾರು ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ಮತ, ಪಂಥ, ಧರ್ಮಗಳಿದ್ದರೂ ಗುರಿ ಒಂದೇ ಆಗಿದೆ. ಅದುವೇ ಮಾನವೀಯ ಧರ್ಮವಾಗಿದೆ. ಇದು ಈ ನಾಡಿದ ಹುಟ್ಟು ಗುಣವಾಗಿದೆ. ಹಿಂದೂಗಳು ಮುಸ್ಲಿಮರ ಹಬ್ಬದಲ್ಲಿ, ಮುಸ್ಲಿಮರು ಹಿಂದೂಗಳ ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆಯುತ್ತಿದ್ದಾರೆ. ಇಂತಹ ಸಮಾಜವನ್ನು ಕುಲಗೆಡಿಸಲು ಕೆಲವು ರಾಜಕಾರಣಿಗಳು ವಿಷದ ಬೀಜ ಬಿತ್ತಿ ಸಮಾಜ ಹಾಳು ಮಾಡುತ್ತಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕ ಕಲ್ಯಾಣಾರ್ಥವಾಗಿ ವಿಷ್ಣು ತನ್ನ ದಶಾವತಾರಗಳ ಮೂಲಕ ಲೀಲೆಯಿಂದ ದುಷ್ಟರನ್ನು ಸಂಹಾರ ಮಾಡಿರುವ ದೃಶ್ಯಾವಳಿ ಮೂಲಕ ಪುರಾಣ ಮತ್ತು ರಾಮಾಯಣ, ಮಹಾಭಾರತದಲ್ಲಿ ಕೃಷ್ಣಾರ್ಜುನ ಸಂವಾದ ಹಿತಿಹಾಸದ ಗತವೈಭವ ಕಣ್ಣ ಮುಂದೆ ನಿಲ್ಲುವಂತೆ ಮಾಡಿರುವ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನಿವಾಗಿದೆ. ಬುದ್ಧಿಗೆ ಮೂಲವಾಗಿರು ಗಣಪತಿಯ ಪೂಜೆ ಎಲ್ಲ ಧಾರ್ಮಿಕ ವಿಧಿವಿಧಾನಗಳಲ್ಲಿ ಮೊದಲಿಗೆ ನಡೆಯುತ್ತದೆ ಎಂದು ಶ್ರೀಗಳು ವಿವರಿಸಿದರು.
ಮುಂಬರುವ 15ನೇ ವರ್ಷದ ಗಣೇಶೋತ್ಸವದ ಅಂಗವಾಗಿ ರಾಣಿಬೆನ್ನೂರ ಕಾ ರಾಜಾ ಮಹಾ ಮಂಟಪದಲ್ಲಿ “ಮಾನವ ಧರ್ಮಕ್ಕೆ ಜಯವಾಗಲಿ’ ಎಂದು ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ರೇಣುಕಾಚಾರ್ಯ ಮಹತ್ವ ಹಾಗೂ ಸ್ತಬ್ಧಚಿತ್ರಗಳ ಮೂಲಕ ಅವರ ಸಂದೇಶ ಸಾರುವ ಪುರಾಣದ ಮಾಹಿತಿ ನೀಡಲು ಮುಂದಾಗಬೇಕೆಂದು ಸಲಹೆ ನೀಡಿದರು.
ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಶ್ರೀಗಳು, ವಂದೇ ಮಾತರಂ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಗಟ್ಟಿ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಭಾರತಿ ಅಳವಂಡಿ, ರಾಘವೇಂದ್ರ ಚಿನ್ನಿಕಟ್ಟಿ, ನಾಗರಾಜ ಅಡ್ಮನಿ, ಹನುಮಂತಪ್ಪ ಹೆದ್ದೇರಿ, ರವಿ ಕಾಕೋಳ, ಹುಚ್ಚಪ್ಪ ಮೆಡ್ಲೇರಿ, ಅಜೇಯ ಮಠದ, ನೀಲಪ್ಪ ಕಸವಾಳ ಮತ್ತಿತರರು ಇದ್ದರು.
ಹಿಂದೂಗಳು ಮುಸ್ಲಿಮರ ಹಬ್ಬದಲ್ಲಿ, ಮುಸ್ಲಿಮರು ಹಿಂದೂಗಳ ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆಯುತ್ತಿದ್ದಾರೆ. ಇಂತಹ ಸಮಾಜವನ್ನು ಕುಲಗೆಡಿಸಲು ಕೆಲವು ರಾಜಕಾರಣಿಗಳು ವಿಷದ ಬೀಜ ಬಿತ್ತಿ ಸಮಾಜ ಹಾಳು ಮಾಡುತ್ತಿರುವುದು ದುರಂತ.
-ರಂಭಾಪುರಿ ಶ್ರೀ