Advertisement

17 ವರ್ಷಗಳ ಬಳಿಕ ಅಮೆರಿಕಕ್ಕೆ ಫೆಡ್‌ ಕಪ್‌

06:40 AM Nov 14, 2017 | Team Udayavani |

ಮಿನ್‌ಸ್ಕ್ (ಬೆಲರೂಸ್‌): ನಿರ್ಣಾಯಕ ಡಬಲ್ಸ್‌ನಲ್ಲಿ ಆತಿಥೇಯ ಬೆಲರೂಸ್‌ ವಿರುದ್ಧ ಗೆಲುವು ಸಾಧಿಸಿದ ಅಮೆರಿಕ 17 ವರ್ಷಗಳ ಬಳಿಕ ಫೆಡ್‌ ಕಪ್‌ ಟೆನಿಸ್‌ ಪ್ರಶಸ್ತಿ ಮೇಲೆ ಹಕ್ಕು ಚಲಾಯಿಸಿದೆ. ತನ್ನ ಸರ್ವಾಧಿಕ ಫೆಡ್‌ ಕಪ್‌ ಪ್ರಶಸ್ತಿಗಳ ದಾಖಲೆಯನ್ನು 18ಕ್ಕೆ ವಿಸ್ತರಿಸಿದೆ.

Advertisement

ರವಿವಾರ ರಾತ್ರಿ ನಡೆದ ನಿರ್ಣಾಯಕ ಡಬಲ್ಸ್‌ ಮುಖಾಮುಖೀಯಲ್ಲಿ ಅಮೆರಿಕದ ಕೊಕೊ ವಾಂಡೆವೇಗ್‌ ಹಾಗೂ ಶೆಲ್ಬಿ ರೋಜರ್ ಸೇರಿಕೊಂಡು ಆತಿಥೇಯ ನಾಡಿನ ಅರಿನಾ ಸಬಲೆಂಕಾ-ಅಲೆಕ್ಸಾಂಡ್ರಾ ಸಸ್ನೊವಿಕ್‌ ವಿರುದ್ಧ 6-3, 7-6 (7-3) ಅಂತರದ ಜಯ ಸಾಧಿಸುವುದರೊಂದಿಗೆ ಅಮೆರಿಕ 17 ವರ್ಷಗಳ ಕಾಯುವಿಕೆಗೆ ತೆರೆ ಎಳೆಯಿತು. ಅಮೆರಿಕ ಕೊನೆಯ ಸಲ ಫೆಡ್‌ ಕಪ್‌ ಪ್ರಶಸ್ತಿ ಎತ್ತಿದ್ದು 2000ದಲ್ಲಿ. ಬಳಿಕ 2003, 2009 ಹಾಗೂ 2010ರಲ್ಲಿ ಫೈನಲ್‌ ಪ್ರವೇಶಿಸಿದರೂ ರನ್ನರ್ ಅಪ್‌ಗೆ ಸಮಾಧಾನಪಟ್ಟಿತ್ತು. ಬೆಲರೂಸ್‌ಗೆ ಇದೇ ಮೊದಲ ಫೈನಲ್‌ ಆಗಿತ್ತು, ಸ್ವಲ್ಪದರಲ್ಲೇ ಇತಿಹಾಸ ನಿರ್ಮಿಸುವುದರಿಂದ ವಂಚಿತವಾಯಿತು.

ರವಿವಾರ ಬೆಳಗ್ಗೆ ವಾಂಡೆವೇಗ್‌ 7-6 (7-5), 6-1ರಿಂದ ಅರಿನಾ ಸಬಲೆಂಕಾ ಅವರನ್ನು ಮಣಿಸಿ ಅಮೆರಿಕಕ್ಕೆ 2-1 ಮುನ್ನಡೆ ಒದಗಿಸಿದ್ದರು. ಆದರೆ ಸ್ಲೋನ್‌ ಸ್ಟೀಫ‌ನ್ಸ್‌ ಅವರನ್ನು 4-6, 6-1, 8-6ರಿಂದ ಹಿಮ್ಮೆಟ್ಟಿಸಿದ ಅಲೆಕ್ಸಾಂಡ್ರಾ ಸಸ್ನೊವಿಕ್‌ ಹೋರಾಟವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯಕ್ಕೆ ಬೆಲರುಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಶೆಂಕೊ ಸಾಕ್ಷಿಯಾಗಿದ್ದರು.

“ಎಲ್ಲ ನಾಲ್ವರು ಆಟಗಾರ್ತಿಯರ ಆಟವನ್ನು ಕಂಡು ರೋಮಾಂಚನಗೊಂಡಿದ್ದೇನೆ. ಕೊಕೊ ಆಟವಂತೂ ಅಸಾಮಾನ್ಯ ಮಟ್ಟದಲ್ಲಿತ್ತು. ಶೆಲ್ಬಿ ಶ್ರೇಷ್ಠ ಮಟ್ಟದ ಹೋರಾಟ ಪ್ರದರ್ಸಿಸಿದರು. ಸೋತರೂ ಸ್ಲೋನ್‌ ಸ್ಟೀಫ‌ನ್ಸ್‌ ತೋರ್ಪಡಿಸಿದ ಆಟವನ್ನು ಮರೆಯುವಂತಿಲ್ಲ…’ ಎಂದು ಅಮೆರಿಕ ಫೆಡ್‌ ಕಪ್‌ ತಂಡದ ನಾಯಕಿ ಕ್ಯಾಥಿ ರಿನಾಲ್ಡಿ ಪ್ರತಿಕ್ರಿಯಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next