Advertisement
ಕಾಸರಗೋಡು ಭಾಗ ಕೆಳದಿ ನಾಯಕರ ಕಾಲದಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ಕಂಡಿತ್ತು. ಅದರಲ್ಲಿ ಕೋಟೆ ಕೊತ್ತಲುಗಳು ಪ್ರಮುಖವಾದರೇ, ಜತೆಗೆ ವೀರಗಲ್ಲುಗಳನ್ನು ನೆಡುವ ಪರಂಪರೆ 16ನೇ ಶತಮಾನದ ಕೊನೆಯಲ್ಲಿ ಶುರುವಾಯಿತು. ವೀರಗಲ್ಲುಗಳೆಂದರೆ ಯುದ್ಧದಲ್ಲಿ ಮಡಿದ ವೀರನ ಸ್ಮರಣೆಗಾಗಿ ನೆಡುವ ಕಲ್ಲುಗಳು. ಈ ಗಡಿ ನಾಡಿನಲ್ಲಿ ವಿಶಿಷ್ಟವಾದ ವೀರಗಲ್ಲೊಂದಿದೆ. ಈ ವೀರಗಲ್ಲು ಕೆಳದಿ ಅರಸರ ಕಾಲಕ್ಕೆ ಸೇರಿದೆ ಎಂಬುದು ಹೆಚ್ಚಿನವರ ವಾದ.
Related Articles
Advertisement
ವಿಶೇಷತೆಗಳು:
ಒಂದನೇ ಪಾರ್ಶ್ವ
ಒಂದನೇ ಪಾರ್ಶ್ವದ ಅತೀ ಕೆಳಗಿನ ಪಟ್ಟಿಕೆಯಲ್ಲಿ ಯುದ್ಧದ ದೃಶ್ಯ, ಎರಡನೇ ಪಟ್ಟಿಕೆಯಲ್ಲಿ ವೀರನನ್ನು ಅಪ್ಸರೆಯರು ಹೆಗಲಿಗೆ ಕೈ ಹಾಕಿ ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವುದು. ಮೂರನೇ ಪಟ್ಟಿಕೆಯಲ್ಲಿ ಶಿವೈಕ್ಯನಾದುದನ್ನು ತೋರಿಸಲಾಗಿದೆ.
ಎರಡನೇ ಪಾರ್ಶ್ವ
ಇಲ್ಲಿ ನಾಲ್ಕು ಪಟ್ಟಿಕೆಗಳನ್ನು ನೋಡುತ್ತೇವೆ. ಇಲ್ಲಿ ವಿವಿಧ ರೀತಿಯ ಯುದ್ಧದಲ್ಲಿ ಮಗ್ನನಾದ ವೀರನನ್ನು ನೋಡಬಹುದಾಗಿದೆ. ಒಂದನೇ ಪಟ್ಟಿಕೆಯಲ್ಲಿ ಕತ್ತಿ ಗುರಾಣಿಯೊಡನೆ ಯುದ್ಧದಲ್ಲಿ ಮಗ್ನನಾದ ವೀರನಿದ್ದಾನೆ.
ಎರಡನೇ ಪಟ್ಟಿಕೆಯಲ್ಲಿ ವೀರನ ಗೆಲುವನ್ನು ಕಾಣಬಹುದಾಗಿದೆ. ಶತ್ರುವಿನ ರುಂಡವನ್ನು ಕೈಗೆ ನೇತುಹಾಕಿ ವೈರಿಯನ್ನು ಬೆನ್ನೆಟ್ಟುವ ವೀರನ ಚಿತ್ರವಿದೆ.
ಮೂರನೇ ಪಟ್ಟಿಕೆಯಲ್ಲಿ ವೀರನನ್ನು ಪಲ್ಲಕ್ಕಿ ಮೇರೆ ಹೊತ್ತುಕೊಂಡು ಹೋಗುವುದು. ನಾಲ್ಕನೇ ಪಟ್ಟಿಕೆಯಲ್ಲಿ ನೃತ್ಯಗಾರರು, ಮದ್ದಳೆ ಮತ್ತು ಕೊಂಬು ವಾದ್ಯ, ಮೊದಲಾದ ಸಂಗೀತ ಪರಿಕರಗಳನ್ನು ಕೆತ್ತಲಾಗಿದೆ.
ಮೂರನೇ ಪಾರ್ಶ್ವ
ಮೂರನೇ ಪಾರ್ಶ್ವದಲ್ಲಿ 2 ಪಟ್ಟಿಕೆಗಳಿವೆ. ಒಂದನೇ ಪಟ್ಟಿಕೆಯಲ್ಲಿ ವೈರಿಯನ್ನು ಮಣಿಸುವ ವೀರ ಮತ್ತವನ ಹಿಂದೆ ನಿಂತ ಇನ್ನೊಬ್ಬ ವೀರನ ದೃಶ್ಯ. ಎರಡನೇ ಪಟ್ಟಿಕೆಯಲ್ಲಿ ವೈರಿಯ ಕುತ್ತಿಗೆಗೆ ಕಠಾರಿಯಿಂದ ಇರಿಯುವ ವೀರನ ಚಿತ್ರವಿದೆ ಮತ್ತು ಅದರ ಮೇಲೆ ಶಿವೈಕೆನಾದ ವೀರನಿದ್ದಾನೆ.
ನಾಲ್ಕನೇ ಪಾರ್ಶ್ವ
ನಾಲ್ಕನೇ ಪಾರ್ಶ್ವದಲ್ಲಿ 3 ಪಟ್ಟಿಕೆಗಳಿದೆ. ಒಂದನೇ ಪಟ್ಟಿಕೆಯಲ್ಲಿ ಬೇಟೆಯಾಡುವ ವೀರನನ್ನು ಚಿತ್ರಿಸಲಾಗಿದೆ. ಬೇಟೆಯಾಡಿದ ಮಿಕ್ಕವನ್ನು ಕೋಲಿಗೆ ನೇತು ಹಾಕಲಾಗಿದೆ. ಬೇಟೆಯನ್ನು ಹಿಂಬದಿಯಿಂದ ನಾಯಿಯೊಂದು ಕಚ್ಚುತ್ತಿದೆ. ಹಿಂದೆ ಭಯದಿಂದ ನೋಡುತ್ತಿರುವ ಸ್ತ್ರೀಯ ಚಿತ್ರವಿದೆ. ಎರಡನೇ ಪಟ್ಟಿಕೆಯಲ್ಲಿ ಕುದುರೆ ಸವಾರಿಯಲ್ಲಿರುವ ವೀರ. ವೀರನ ದೇಹದಲ್ಲಿ ಜನಿವಾರ ರೂಪದ ನಾರಿನ ದಾರವಿದೆ. 3ನೇ ಪಟ್ಟಿಕೆಯಲ್ಲಿ ಗಂಡ ಹೆಂಡತಿ ಸ್ವರ್ಗಸ್ಥರಾಗಿದ್ದಾರೆ.
ಇದು ಕಾಸರಗೋಡು ಭಾಗದ ವಿಶೇಷ ವೀರಸ್ತಂಭ ಶಾಸನ. ಒಂದು ಕಾಲಘಟ್ಟದ ಘಟನಾವಳಿಗಳನ್ನು, ಆ ಕಾಲದ ವೀರರನ್ನು, ಅವರ ಸಾಧನೆಯನ್ನು ಈ ವಿವರಿಸುವ ಈ ವೀರಸ್ತಂಭಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳಿಗೆ ಅವಕಾಶವಿದೆ.
- ಗಿರೀಶ್ ಪಿ.ಎಂ.
ಕಾಸರಗೋಡು