Advertisement

“ಬಿಚ್ಚುಗತ್ತಿ’ಯಲ್ಲಿ ಅನನ್ಯ ಅನುಭವ

09:36 AM Feb 28, 2020 | Lakshmi GovindaRaj |

ಕನ್ನಡದಲ್ಲಿ ಐತಿಹಾಸಿಕ ಚಿತ್ರಗಳು ಈಗ ಮೆಲ್ಲನೆ ಸದ್ದು ಮಾಡುತ್ತಿವೆ. ಆ ಸಾಲಿಗೆ ಈಗ ಹಿರಿಯ ಸಾಹಿತಿ ಬಿ.ಎಲ್‌.ವೇಣು ಅವರ ಕಾದಂಬರಿ ಆಧಾರಿತ “ಬಿಚ್ಚುಗತ್ತಿ’ ಸಿನಿಮಾ ಕೂಡ ಸೇರಿದೆ. ಫೆ.28 (ನಾಳೆ) ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಾಜವರ್ಧನ್‌ ಭರಮಣ್ಣ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ರಾಜವರ್ಧನ್‌, “ಬಿಚ್ಚುಗತ್ತಿ’ ಅನುಭವ ಬಿಚ್ಚಿಟ್ಟಿದ್ದಾರೆ.

Advertisement

* ಮೊದಲ ಐತಿಹಾಸಿಕ ಚಿತ್ರದ ಅನುಭವ ಹೇಗಿತ್ತು ?
ಇದು ನಿಜಕ್ಕೂ ನನ್ನ ಲೈಫ್ ಟೈಮ್‌ ಅನುಭವದ ಚಿತ್ರ. ಹೊಸಬರಿಗೆ ಸಿಗುವಂತಹ ಚಿತ್ರವಲ್ಲ. ಸ್ಟಾರ್‌ಗಳು ನಟಿಸುವಂತಹ ಸಬ್ಜೆಕ್ಟ್ ಇದು. ನನ್ನಂತಹ ಹೊಸಬನ ಮೇಲೆ ನಂಬಿಕೆ ಇಟ್ಟು, ಕೋಟಿಗಟ್ಟಲೆ ಹಣ ಹಾಕಿ ಈ ಸಿನಿಮಾ ಮಾಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ನಾನು ಚಿರಋಣಿ. ಅವರ ನಂಬಿಕೆ ಉಳಿಸಿಕೊಂಡಿರುವ ವಿಶ್ವಾಸವಿದೆ. ನನ್ನ ಭವಿಷ್ಯದ ಸಿನಿಮಾ ಅಂದರೂ ತಪ್ಪಿಲ್ಲ.

* ಪಾತ್ರದ ತಯಾರಿ ಹೇಗಿತ್ತು?
ಈ ಚಿತ್ರಕ್ಕಾಗಿ ನಾನು ಎರಡು ವರ್ಷ ಶ್ರಮಪಟ್ಟಿದ್ದೇನೆ. ಭರಮಣ್ಣ ನಾಯಕ ಅಂದಾಗ, ಗತ್ತು, ಗಮ್ಮತ್ತು ಇರಲೇಬೇಕು. ಅವನು ಹುಲಿ ಜೊತೆ ಕಾದಾಟ ನಡೆಸಬೇಕು. ಸೈನಿಕರ ಜೊತೆಗೂಡಿ ಶತ್ರುಗಳ ವಿರುದ್ಧ ಹೋರಾಡಬೇಕು. ಅದಕ್ಕಾಗಿ ಕಲರಿ ಪಯತು, ಕುದುರೆ ಸವಾರಿ ಸೇರಿದಂತೆ ದೇಸಿ ಕಲೆಗಳನ್ನು ಕಲಿತೆ. 80 ಕೆಜಿ ತೂಕವಿದ್ದವನು, ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕೆಂಬ ಕಾರಣಕ್ಕೆ 105 ಕೆಜಿ ತೂಕ ಹೆಚ್ಚಿಸಿಕೊಂಡೆ. ಈಗ ಟ್ರೇಲರ್‌ ನೋಡಿದಾಗ, ಎಲ್ಲೋ ಒಂದು ಕಡೆ ಶ್ರಮ ಸಾರ್ಥಕ ಎನಿಸುತ್ತಿದೆ.

* ನಿಮಗಿಲ್ಲಿ ಕಷ್ಟ ಎನಿಸಿದ್ದು ಏನು?
ಮೊದಲು ಕಥೆ ಕೇಳಿದಾಗಲೇ, ಕಷ್ಟ ಎನಿಸಿದ್ದು ನಿಜ. ಯಾಕೆಂದರೆ, ಆ ಪಾತ್ರ ನಾನು ಮಾಡ್ತೀನಾ, ಅದು ಸಾಧ್ಯನಾ ಎಂಬ ಪ್ರಶ್ನೆ ಬಂತು. ಯಾಕೆಂದರೆ, ಐತಿಹಾಸಿಕ ಸಿನಿಮಾ ಆಗಿರುವುದರಿಂದ ಬಾಡಿಲಾಂಗ್ವೇಜ್‌, ಕಾಸ್ಟೂಮ್‌, ಡೈಲಾಗ್‌, ಭಾಷೆಯ ಸ್ಪಷ್ಟತೆ ಎಲ್ಲವೂ ವಿಶೇಷವಾಗಿರಬೇಕಿತ್ತು. ಅದನ್ನು ಕಲಿತೆ. ಹುಲಿ ಫೈಟ್‌ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಯ್ತು. ಯುದ್ಧ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ ಪೆಟ್ಟು ತಿಂದೆ. ಕಷ್ಟ ಆದರೂ, ಈಗ ಖುಷಿಯಾಗುತ್ತಿದೆ. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದಕ್ಕಿಂತ ಖುಷಿಯ ವಿಷಯ ಮತ್ತೂಂದಿಲ್ಲ.

* ಹಾಗಾದರೆ, ಭವಿಷ್ಯ ಬರೆಯೋ ಸಿನಿಮಾ ಅನ್ನಿ?
ಅದೇನೋ ಗೊತ್ತಿಲ್ಲ. ಸಾಕಷ್ಟು ಶ್ರಮವನ್ನಂತೂ ಹಾಕಿದ್ದೇನೆ. ನಮ್ಮ ಮಣ್ಣಿನ ಕಥೆ ಆಗಿದ್ದರಿಂದ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಜನರು ಕೈ ಹಿಡಿಯುತ್ತಾರೆ ಎಂಬ ನಂಬಿಕೆಯೂ ಇದೆ. ಐತಿಹಾಸಿಕ ಸಿನಿಮಾ ಮಾಡಲು ಧೈರ್ಯ ಬೇಕು. ನಿರ್ಮಾಪಕರು ಆ ಧೈರ್ಯ ಮಾಡಿದ್ದಾರೆ. ಇಂತಹ ಚಿತ್ರಗಳು ಗೆದ್ದರೆ ಮಾತ್ರ ಐತಿಹಾಸಿಕ ಸಿನಿಮಾಗಳು ಬರಲು ಸಾಧ್ಯ. ಇಲ್ಲಿ ನನ್ನೊಬ್ಬನ ಭವಿಷ್ಯವಿಲ್ಲ. ಕೆಲಸ ಮಾಡಿದ ಪ್ರತಿಯೊಬ್ಬರ ಭವಿಷ್ಯವೂ ಇಲ್ಲಿದೆ.

Advertisement

* ಈ ಚಿತ್ರದಲ್ಲಿ ಕಲಿಕೆಗೂ ಅವಕಾಶ ಸಿಕ್ಕಿದೆಯಾ?
ಹೌದು, ಇದೊಂದು ದೊಡ್ಡ ಟಾಸ್ಕ್ ಇದ್ದಂತೆ. ನಾನು ನಟನೆ ಮಾತ್ರವಲ್ಲ, ಟೆಕ್ನೀಷಿಯನ್‌ ಆಗಿಯೂ ಕೆಲಸ ಮಾಡಿದ್ದೇನೆ. ಕಾಸ್ಟೂಮ್‌ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಸೆಟ್‌ನಲ್ಲಿ ಕ್ಯಾಮೆರಾ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಕೆಲಸ ಕಲಿತಿದ್ದೇನೆ. ಹಿರಿಯ ಕಲಾವಿದರಿಂದಲೂ ನಾನು ಕಲಿತಿದ್ದೇನೆ. ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದೆ. ಕನ್ನಡಿಗರು ಒಳ್ಳೆಯ ಸಿನಿಮಾ ಕೈ ಬಿಟ್ಟಿಲ್ಲ. ಬಿಡಲ್ಲ ಎಂಬ ಬಲವಾದ ನಂಬಿಕೆಯಂತೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next