ಸೃಜನಶೀಲ ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆಯವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯು ಗೌರವ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಉಪಾಧ್ಯಾಯರು ಕಲಾವಿದ ರಷ್ಟೇ ಆಗಿರದೆ ಸಾಹಿತಿಯಾಗಿ ಶಿಕ್ಷಕನಾಗಿ ಸಮಾಜಸೇವಕನಾಗಿ ಎದ್ದು ಕಾಣುತ್ತಾರೆ.
ಉಡುಪಿ ವಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ಉಪಾಧ್ಯಾಯರು ಮಕ್ಕಳ ಕಲಾಚೈತನ್ಯವನ್ನು ಹೊರಹೊಮ್ಮಿಸಲು ಶಾಲೆಯಲ್ಲಿ ಕಲಾಸಂಘ, ಡ್ರಾಯಿಂಗ್ ಗ್ರೇಡ್ ಪರೀಕ್ಷೆ, ಕಲಾಪ್ರದರ್ಶನ, ಭಿತ್ತಿಚಿತ್ರ, ಕಲಾಶಿಬಿರಗಳನ್ನು ನಡೆಸುತ್ತಿದ್ದಾರೆ. ಕಲೋತ್ಸವ ರಾಜ್ಯಮಟ್ಟಕ್ಕೆ ಮಕ್ಕಳ ತಂಡ, ಮಕ್ಕಳ ಕಂಪ್ಯೂಟರ್ ಪ್ರಾಜೆಕ್ಟ್ಗೆ ಇಂಟೆಲ್ ರಾಜ್ಯಪ್ರಶಸ್ತಿ ದೊರೆತಿದೆ. ಮಾತ್ರವಲ್ಲದೆ ಉಪಾಧ್ಯಾಯರ ಕಂಪ್ಯೂಟರ್ ಪ್ರಾಜೆಕ್ಟ್ಗೂ ಇಂಟೆಲ್ ರಾಜ್ಯಪ್ರಶಸ್ತಿ, ಉತ್ತಮ ಶಿಕ್ಷಕ ಜಿಲ್ಲಾ-ರಾಜ್ಯ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಕರ್ನಾಟಕದಲ್ಲಿ ಪ್ರಥಮ ಬಾರಿ ಲಭಿಸಿದೆ.
ಕಲಾಸಾಹಿತಿಯಾಗಿ ಉಪಾಧ್ಯಾಯರು ಎಲೆಮರೆಯ ಅನೇಕ ಕಲಾವಿದರನ್ನು ತಮ್ಮ ಲೇಖನಗಳ ಮೂಲಕ ಬೆಳಕಿಗೆ ತಂದಿದ್ದಾರೆ. ಕಲಾಪ್ರದರ್ಶನಗಳ ವಿಮರ್ಶೆಗಳನ್ನು ನಿರಂತರ ಬರೆದಿದ್ದಾರೆ. ಕವನ, ಹಾಸ್ಯಲೇಖನ, ಒಂದೇಗೆರೆಯ ಚಿತ್ರಗಳನ್ನೂ ಬರೆದಿದ್ದಾರೆ. ಯಕ್ಷಗಾನ ಚಿತ್ರಕಲೆ, ನಾಗಾರಾಧನೆ ಚಿತ್ರಕಲೆ, ಕಲೆ ಎಂದರೇನು? ಪುಸ್ತಕಗಳನ್ನು ಬರೆದಿದ್ದಾರೆ.
ಉಪಾಧ್ಯಾಯರ ಏಕರೇಖಾಚಿತ್ರಗಳು ಡಾ| ನೆಲ್ಸನ್‌ಮಂಡೇಲಾ, ಎ.ಪಿ.ಜೆ. ಅಬ್ದುಲ್‌ಕಲಾಂ, ವಾಜಪೇಯಿ, ವೆಂಕಟ್ರಾಮನ್, ರಾಜೀವ್‌ಗಾಂಧಿ, ದೊರೆ ಬೀರೇಂದ್ರ ಮುಂತಾದವರಿಂದ ಹಸ್ತಾಕ್ಷರ ಪಡೆದಿವೆ. ಉಡುಪಿ ಪರಿಸರದ ಇಪ್ಪತ್ತಕ್ಕೂ ಹೆಚ್ಚು ದೇಗುಲಗಳಲ್ಲಿ ಇವರು ರಚಿಸಿರುವ ಭಿತ್ತಿಚಿತ್ರ, ಕಾವಿಚಿತ್ರಕಲೆಯಿದೆ. ನಾಡಿನಾದ್ಯಂತ ಪೂಜಾರಂಗೋಲಿಗಳನ್ನು ಬರೆದು ಜನಪ್ರಿಯರಾಗಿದ್ದಾರೆ.
ಉಪಾಧ್ಯಾಯರ ಕಲಾ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಪ್ರಶಸ್ತಿಗಳಲ್ಲಿ ಸಿಕ್ಕಿದ ಮೊತ್ತವನ್ನೆಲ್ಲಾ ಶಾಲೆಗಳಿಗೆ, ಗೋಶಾಲೆಗೆ, ಬಡಮಕ್ಕಳಿಗೆ, ರೋಗಿಗಳಿಗೆ ನೀಡುತ್ತಿರುವುದು ವಿಶೇಷ. ತನ್ನ ಹೆಸರಿನಲ್ಲಿ ಕಲಾ ಪ್ರತಿಷ್ಠಾನ ಸ್ಥಾಪಿಸಿ ದುಡಿಮೆಯ ಬಹುಪಾಲನ್ನು ಖರ್ಚು ಮಾಡುತ್ತಿದ್ದಾರೆ. ರಾಜ್ಯಮಟ್ಟದ ಸಮಾರಂಭಗಳನ್ನು ನಡೆಸಿ 600ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಪ್ರತಿಭಾವಂತರಿಗೆ ಉಪಾಧ್ಯಾಯ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಕ್ಕಳಿಗೆ ರಾಜ್ಯಮಟ್ಟದ ಕಲಾಸ್ಪರ್ಧೆ ನಡೆಸಿದ್ದಾರೆ.